
ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್) ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ವಿವಿಧ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಿದ್ದ ಸಿವಿಲ್ ನ್ಯಾಯಾಲಯದ ಇತ್ತೀಚಿನ ಪ್ರತಿಬಂಧಕಾದೇಶ ಪ್ರಶ್ನಿಸಿ ಡಿಜಿಟಲ್ ಸುದ್ದಿ ಜಾಲತಾಣ ನ್ಯೂಸ್‌ಲಾಂಡ್ರಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಮಧ್ಯಂತರ ಪರಿಹಾರ ನಿರಾಕರಿಸಿದೆ.
ಸಿವಿಲ್ ನ್ಯಾಯಾಲಯದ ಎದುರು ಅದಾನಿ ಲಿಮಿಟೆಡ್ ಹೂಡಿದ್ದ ದಾವೆಯಲ್ಲಿ ನ್ಯೂಸ್ ಲಾಂಡ್ರಿಯನ್ನು ಪ್ರತಿವಾದಿಯಾಗಿ ಹೆಸರಿಸಿಲ್ಲವಾದ್ದರಿಂದ ಅದು ಬಾಧಿತ ಪಕ್ಷಕಾರನಲ್ಲ ಎಂದು ಜಿಲ್ಲಾ ನ್ಯಾಯಾಧೀಶ ಸುನಿಲ್ ಚೌಧರಿ ಹೇಳಿದರು.
ಇದಲ್ಲದೆ, ಸಿವಿಲ್ ನ್ಯಾಯಾಲಯ ಅನಾಮಧೇಯ ವ್ಯಕ್ತಿಗಳನ್ನು ಒಳಗೊಳ್ಳುವಂತೆ ʼಜಾನ್ ಡೋʼ ಪ್ರತಿಬಂಧಕಾದೇಶ ಹೊರಡಿಸಿದ್ದರಿಂದ ವಿಡಿಯೋ ಪ್ರಸಾರ ಮಾಡುವ ಮಧ್ಯಸ್ಥ ವೇದಿಕೆಗಳು ವಿಡಿಯೋ ತೆರವುಗೊಳಿಸುವಂತೆ ಕೇಳಿಕೊಂಡರೂ ನ್ಯೂಸ್‌ಲಾಂಡ್ರಿ ಅದನ್ನು ಪ್ರತ್ಯೇಕವಾಗಿ ಪ್ರಶ್ನಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಆದ್ದರಿಂದ ನ್ಯೂಸ್ ಲಾಂಡ್ರಿ ಪರವಾಗಿ ಮಧ್ಯಂತರ ಆದೇಶ ನೀಡದ ಅದು ಮೇಲ್ಮನವಿಗೆ ಸಂಬಂಧಿಸಿದಂತೆ ಅದಾನಿ ಲಿಮಿಟೆಡ್ ಪ್ರತಿಕ್ರಿಯೆ ಕೇಳಿದ್ದು ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 15ರಂದು ನಡೆಯಲಿದೆ.
ವಿಚಾರಣೆ ವೇಳೆ ನ್ಯೂಸ್‌ಲಾಂಡ್ರಿ ಪರ ವಾದ ಮಂಡಿಸಿದ ವಕೀಲರು ಅನಾಮೇಧಯ ವ್ಯಕ್ತಿಗಳ ವಿರುದ್ಧ ಆದೇಶ ನೀಡಿರುವುದರಿಂದ ಅದು ನ್ಯೂಸ್‌ಲಾಂಡ್ರಿಯಂತಹ ಕಕ್ಷಿದಾರರಿಗೂ ಅನ್ವಯವಾಗುತ್ತದೆ ಎಂದು ವಾದಿಸಿದರು. ಆದರೆ ನ್ಯಾಯಾಲಯ ಅದಾನಿ ಪ್ರತಿಕ್ರಿಯೆ ನೀಡುವವರೆಗೂ ಪ್ರತಿಬಂಧಕಾದೇಶ ಕೈಬಿಡಲು ನಿರಾಕರಿಸಿತು. ಇದೇ ವೇಳೆ ಪತ್ರಕರ್ತ ಪರಂಜಯ್ ಗುಹಾ ಠಾಕೂರ್ತಾ ಅವರ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ನ್ಕಾಯಾಲಯ ಕಾಯ್ದಿರಿಸಿದೆ.
ಹಿನ್ನೆಲೆ
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್) ವಿರುದ್ಧ ಮಾನಹಾನಿಕರ ವಸ್ತುವಿಷಯ ಪ್ರಕಟಿಸದಂತೆ ಪತ್ರಕರ್ತರು ಹಾಗೂ ಹೋರಾಟಗಾರರಾದ ಪರಂಜಯ್ ಗುಹಾ ಠಾಕೂರ್ತಾ, ರವಿ ನಾಯರ್, ಅಬೀರ್ ದಾಸ್‌ಗುಪ್ತಾ, ಆಯಸ್ಕಾಂತ್ ದಾಸ್, ಆಯುಷ್ ಜೋಶಿ ಮತ್ತಿತರರಿಗೆ ರೋಹಿಣಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅವರು ಆದೇಶಿಸಿದ್ದರು.
ಹೆಸರಿಸಲಾದ ಐವರು ಪತ್ರಕರ್ತರಲ್ಲದೆ, ಅನಾಮಧೇಯ ವ್ಯಕ್ತಿಗಳ ವಿರುದ್ಧವೂ ಪ್ರತಿಬಂಧಕಾಜ್ಞೆ ವಿಧಿಸಲಾಗಿತ್ತು. ಹೀಗಾಗಿ ನ್ಯೂಸ್ ಲಾಂಡ್ರಿ, ಠಾಕೂರ್ತಾ ಮತ್ತಿತರ ಪತ್ರಕರ್ತರು ಸಿವಿಲ್ ನ್ಯಾಯಾಲಯದ ಆದೇಶವನ್ನು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಜಿಲ್ಲಾ ನ್ಯಾಯಾಧೀಶ ಆಶಿಶ್ ಅಗರ್‌ವಾಲ್ ಸೆಪ್ಟೆಂಬರ್ 18ರಂದು ಪತ್ರಕರ್ತರ ಮನವಿ ಪುರಸ್ಕರಿಸಿ ಪ್ರತಿಬಂಧಕಾಜ್ಞೆ ತೆರವುಗೊಳಿಸಿದ್ದರು.
ಆದರೆ ನ್ಯೂಸ್ ಲಾಂಡ್ರಿ ಮತ್ತು ಠಾಕುರ್ತಾ ಅವರ ಅರ್ಜಿ ಸೋಮವಾರ ಜಿಲ್ಲಾ ನ್ಯಾಯಾಧೀಶ ಚೌಧರಿ ಅವರ ಮುಂದೆ ವಿಚಾರಣೆಗೆ ಬಂದಿತ್ತು. ನ್ಯಾಯಾಧೀಶ ಅಗರ್‌ವಾಲ್ ಅವರ ಹಿಂದಿನ ಆದೇಶವನ್ನು ಗಮನಿಸಿದ ನಂತರ, ನ್ಯಾಯಾಧೀಶ ಚೌಧರಿ ಅವರು ನ್ಯಾಯಾಧೀಶ ಅಗರ್‌ವಾಲ್ ಅವರೇ ಈ ಪ್ರಕರಣಗಳನ್ನು ಆಲಿಸುವುದು ಸೂಕ್ತವೆಂದು ಪರಿಗಣಿಸಿದ್ದರು.
ಆದ್ದರಿಂದ, ಪ್ರಕರಣವನ್ನು ಔಪಚಾರಿಕವಾಗಿ ನ್ಯಾಯಾಧೀಶ ಅಗರ್‌ವಾಲ್ ಅವರಿಗೆ ನಿಯೋಜಿಸಲು ಮಂಗಳವಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರೆದರು ಪ್ರಕರಣ ಬಂದಿತ್ತು. ಆದರೆ ಮೇಲ್ಮನವಿಗಳನ್ನು ನ್ಯಾ. ಚೌಧರಿ ಅವರೇ ಆಲಿಸಬಹುದೆಂದು ನಿರ್ಧರಿಸಿದ ಪ್ರಧಾನ ನ್ಯಾಯಾಧೀಶರು ಪ್ರಕರಣವನ್ನು ಅವರಿಗೆ ಮರಳಿಸಿದ್ದರು.