ಈಗ ಯಾರಾದರೂ ಮಾಸಿಕ ₹9,000 ವೇತನ ಪಡೆಯುತ್ತಾರೆಯೇ? ಪತ್ನಿಗೆ ಜೀವನಾಂಶ ನಿರಾಕರಿಸಿದ ಪತಿಗೆ ಸುಪ್ರೀಂ ಪ್ರಶ್ನೆ

ಪತಿಗೆ ಅಷ್ಟು ಕಡಿಮೆ ವೇತನ ನೀಡುತ್ತಿರುವ ಕಂಪೆನಿಯನ್ನು ನ್ಯಾಯಾಲಯಕ್ಕೆ ಕರೆಸುವುದು ಸೂಕ್ತ ಎಂದಿತು ಪೀಠ.
Supreme Court of India
Supreme Court of India
Published on

ತಾನು ತಿಂಗಳಿಗೆ ಕೇವಲ ₹9,000 ಸಂಪಾದಿಸುತ್ತಿದ್ದು, ವಿಚ್ಛೇದಿತ ಪತ್ನಿಗೆ ಹೆಚ್ಚಿನ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂಬ ಪತಿಯ ಹೇಳಿಕೆ ಸುಪ್ರೀಂ ಕೋರ್ಟ್‌ನಲ್ಲಿ ತೀಕ್ಷ್ಣ ಮತ್ತು ಹಾಸ್ಯಮಯ ಸನ್ನಿವೇಶ ಸೃಷ್ಟಿಸಿತು.

ಪತಿ ತಿಂಗಳಿಗೆ ₹9,000 ಮಾತ್ರ ಗಳಿಸುತ್ತೇನೆ ಎಂಬ ಹೇಳಿಕೆ ನಂಬಲಸಾಧ್ಯವಾದುದು ಎಂದು ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರಿದ್ದ ಪೀಠ ತಿಳಿಸಿತು.

Also Read
ಡಿಜಿಟಲ್‌ ಅರೆಸ್ಟ್‌: ಬ್ಯಾಂಕ್‌ಗಳ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ

“ಈ ಕಾಲದಲ್ಲಿ ಯಾರು ₹9,000 ವೇತನ ಪಡೆಯುತ್ತಾರೆ?” ಎಂದು ನ್ಯಾ. ವಿಕ್ರಮ್‌ ನಾಥ್‌ ಪ್ರಶ್ನಿಸಿದರು.

ಪತಿ ದಿನಕ್ಕೆ ₹325 ಗಳಿಸುತ್ತಾನೆ ಎಂದು ಗಳಿಸುತ್ತಿದ್ದಾರೆ ಎಂದು ಅವರ ಪರ ವಕೀಲ ಜಾರ್ಜ್‌ ಪೋತನ್‌ ಅವರು ಹೇಳಿದಾಗ ನ್ಯಾಯಾಲಯ ಆತ ಕೆಲಸ ಮಾಡುವ ಕಂಪೆನಿಯಾದ ಹಿಂದೂಸ್ತಾನ್‌ ಆಟೋ ಏಜೆನ್ಸಿಯನ್ನು ನ್ಯಾಯಾಲಯಕ್ಕೆ ಕರೆಸಬೇಕಾಗುತ್ತದೆ ಎಂದಿತು. ಅಲ್ಲದೆ ಲಘು ಧಾಟಿಯಲ್ಲಿ ʼವಕೀಲರೇ ಜೀವನಾಂಶ ಮೊತ್ತಕ್ಕೆ ಸಂಬಂಧಿಸಿದಂತೆ ಸ್ವಲ್ಪ ಸಹಾಯ ಮಾಡಬಹುದುʼ ಎಂದಿತು.

ವಿಚಾರಣಾ ನ್ಯಾಯಾಲಯ ಈ ಹಿಂದೆ ಪತ್ನಿಗೆ ಪೂರ್ಣ ಮತ್ತು ಅಂತಿಮ ಪರಿಹಾರವಾಗಿ ₹6 ಲಕ್ಷ ನೀಡಲು ಆದೇಶಿಸಿತ್ತು. ಅಂತೆಯೇ ಪತಿ ಆ ಮೊತ್ತ ಪಾವತಿಸಿದ್ದರು. ಅದರೆ ಪತ್ನಿ ₹30 ಲಕ್ಷ ಅಥವಾ ಜೀವಿತಾವಧಿಗೆ ಮಾಸಿಕ ₹12,000 (ವಾರ್ಷಿಕ ಹೆಚ್ಚಳದೊಂದಿಗೆ) ನೀಡಲು ನಿರ್ದೇಶಿಸಬೇಕು ಎಂದು ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಉಚ್ಚ ನ್ಯಾಯಾಲಯ ಮನವಿ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಆಕೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

Also Read
ಪತ್ನಿಯ ಕೃತ್ಯಗಳಿಂದ ಪತಿ ಆದಾಯ ಗಳಿಸಲು ಅಸಮರ್ಥನಾಗಿದ್ದರೆ, ಪತ್ನಿ ಜೀವನಾಂಶ ಕೇಳುವಂತಿಲ್ಲ: ಅಲಾಹಾಬಾದ್‌ ಹೈಕೋರ್ಟ್‌

ಪತಿ ಸಹೋದರರ ನೆರವಿನಿಂದ ಜೀವನ ನಡೆಸುತ್ತಿದ್ದು ಮಕ್ಕಳ ವಿದ್ಯಾಭ್ಯಾಸ ವೆಚ್ಚ ಭರಿಸುತ್ತಿದ್ದಾರೆ ಎಂದು ಪೋತನ್‌ ವಾದ ಮಂಡಿಸಿದರು. ಆದರೆ ಇದಕ್ಕೆ ಸಮ್ಮತಿಸದ ನ್ಯಾ. ಮೆಹ್ತಾ ಅವರು ʼಏನೇ ಇದ್ದರೂ ಪತ್ನಿಗೆ ಜೀವನಾಂಶ ನೀಡುವುದು ಕರ್ತವ್ಯʼ ಎಂದರು.

ಪತ್ನಿಯನ್ನು ಪತಿ ಇರಿಸಿಕೊಳ್ಳುವುದೇ ಉತ್ತಮ ಮಾರ್ಗ ಎಂದು ನ್ಯಾಯಾಧೀಶರು ಈ ಹಂತದಲ್ಲಿ ಚಟಾಕಿ ಹಾರಿಸಿದರು. ಕಡೆಗೆ ಪೀಠ ಆದೇಶ ಕಾಯ್ದಿರಿಸಿತು.

Kannada Bar & Bench
kannada.barandbench.com