ದೆಹಲಿಯಲ್ಲಿ ದೀಪಾವಳಿ ವೇಳೆ ಪಟಾಕಿ ನಿಷೇಧ ಆದೇಶ ಜಾರಿಗೊಳಿಸಲು ವಿಫಲವಾದ ಅಧಿಕಾರಿಗಳನ್ನು ಸೋಮವಾರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಮಾಲಿನ್ಯ ಉಂಟುಮಾಡುವ ಯಾವುದೇ ಚಟುವಟಿಕೆಯನ್ನು ಯಾವುದೇ ಧರ್ಮ ಪ್ರೋತ್ಸಾಹಿಸುವುದಿಲ್ಲ ಎಂದಿದೆ [ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ (ಸಿಎಕ್ಯೂಎಂ) ಸಂಬಂಧಿಸಿದಂತೆ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಪ್ರಕರಣ].
ಸಂವಿಧಾನದ 21ನೇ ವಿಧಿಯಡಿ ಮಾಲಿನ್ಯ ಮುಕ್ತ ವಾತಾವರಣದಲ್ಲಿ ವಾಸಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಹೇಳಿದೆ.
ಯಾವುದೇ ಧರ್ಮ ಮಾಲಿನ್ಯಕ್ಕೆ ಕುಮ್ಮಕ್ಕು ನೀಡುವ ಅಥವಾ ಜನರ ಆರೋಗ್ಯಕ್ಕೆ ಮಾರಕವಾಗುವ ಚಟುವಟಿಕೆಯನ್ನು ಪ್ರೋತ್ಸಾಹಿಸುವುದಿಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ.
ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಕೃಷಿತ್ಯಾಜ್ಯ ಸುಡುವುದರಿಂದ ಉಂಟಾಗುವ ಮಾಲಿನ್ಯದಂತಹ ಕಾರಣಗಳಿಂದ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿರುವ ಕುರಿತಂತೆ ನಡೆಯುತ್ತಿರುವ ವಿಚಾರಣೆ ವೇಳೆಯೇ ದೀಪಾವಳಿ ಸಂದರ್ಭದಲ್ಲಿ ದೆಹಲಿ ಸರ್ಕಾರದ ನಿಷೇಧದ ಹೊರತಾಗಿಯೂ ಪಟಾಕಿಗಳನ್ನು ವ್ಯಾಪಕ ಪ್ರಮಾಣದಲ್ಲಿ ಸಿಡಿಸಿದ್ದು ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿತ್ತು.
ದೀಪಾವಳಿ ಆಚರಣೆ ವೇಳೆ ಮಾಲಿನ್ಯ ತಡೆಗಟ್ಟಲೆಂದು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಸಿಡಿಸುವುದರ ಮೇಲೆ ವಿಧಿಸಲಾಗಿದ್ದ ನಿಷೇಧ ಉಲ್ಲಂಘನೆಯಾಗಿದ್ದಾದರೂ ಹೇಗೆ ಎಂಬುದಕ್ಕೆ ಸಮಜಾಯಿಷಿ ನೀಡುವಂತೆ ಈ ಹಿಂದಿನ ವಿಚಾರಣೆ ವೇಳೆ ಅಧಿಕಾರಿಗಳನ್ನು ನ್ಯಾಯಾಲಯ ಪ್ರಶ್ನಿಸಿತ್ತು. ಅಲ್ಲದೆ ದೆಹಲಿ ಸರ್ಕಾರ ಹಾಗೂ ಅಧಿಕಾರಿಗಳು ಶಾಶ್ವತವಾಗಿ ಪಟಾಕಿ ನಿಷೇಧ ಸಂಬಂಧ ನಿರ್ಧಾರ ಕೈಗೊಳ್ಳಬೇಕು ಎಂತಲೂ ಆಗ ನ್ಯಾಯಾಲಯ ಹೇಳಿತ್ತು.
ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿದ ದೆಹಲಿ ಸರ್ಕಾರ , ವಿವಿಧ ಭಾಗೀದಾರರ ಜೊತೆ ಸಮಾಲೋಚಿಸಿದ ನಂತರ ಶಾಶ್ವತ ನಿಷೇಧಕ್ಕೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿತು. ಆಗ ನ್ಯಾಯಾಲಯ ಭಾಗೀದಾರರೊಂದಿಗೆ ಸಮಾಲೋಚಿಸಿ ಹೊಸ ವರ್ಷಕ್ಕೂ ಮುನ್ನ ನಿರ್ಧಾರ ಕೈಗೊಳ್ಳುವಂತೆ ತಾಕೀತು ಮಾಡಿತು.
“ನಿಮ್ಮ ಭಾಗೀದಾರರು ನಮ್ಮ ಬಳಿ ಬರಲಿ. ಸಂವಿಧಾನದ 21ನೇ ವಿಧಿಯಡಿ ಪಟಾಕಿ ಸುಡುವುದು ಮೂಲಭೂತ ಹಕ್ಕು ಎನ್ನುವವರು ನಮ್ಮ ಬಳಿಗೆ ಬರಲಿ” ಎಂದು ಅದು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿತು. ಪಟಾಕಿ ಶಾಶ್ವತ ನಿಷೇಧ ಸಂಬಂಧ ನವೆಂಬರ್ 25ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಅದು ಸರ್ಕಾರಕ್ಕೆ ಸೂಚಿಸಿದೆ.
ಇದೇ ವೇಳೆ ನ್ಯಾಯಾಲಯವು, ದೆಹಲಿಯಲ್ಲಿ ಪಟಾಕಿ ಸಿಡಿಸಲು ಜ.1, 2025ರ ವರೆಗೆ ನಿಷೇಧ ಇರುವುದನ್ನು ಸಂಬಂಧಪಟ್ಟ ಎಲ್ಲರಿಗೂ ತಿಳಿಸುವಂತೆ ದೆಹಲಿಯ ಪೊಲೀಸ್ ಕಮಿಷನರ್ ಅವರಿಗೆ ಸೂಚಿಸಿತು. ಪರವಾನಗಿ ಹೊಂದಿರುವ ಎಲ್ಲರಿಗೂ ಪಟಾಕಿ ತಯಾರಿಕೆ ಅಥವಾ ಮಾರಾಟವನ್ನು ಕೈಗೊಳ್ಳದಂತೆ ಖಾತರಿ ಪಡಿಸುವಂತೆಯೂ ಹೇಳಿತು.