ದೇವಾಲಯ ಬಳಸುತ್ತಿದ್ದ ಪುಷ್ಕರಣಿಯನ್ನು ಪ್ರಭುತ್ವಕ್ಕೆ ವಹಿಸಿದರೆ ಧಾರ್ಮಿಕ ಹಕ್ಕು ಉಲ್ಲಂಘನೆಯಾಗದು: ಮದ್ರಾಸ್ ಹೈಕೋರ್ಟ್

ತಮಿಳುನಾಡು ಮೈನರ್ ಇನಾಮ್ಗಳ (ರದ್ದತಿ ಮತ್ತು ರೈತವಾರಿಯಾಗಿ ಪರಿವರ್ತನೆ) ಕಾಯಿದೆಯ ಸೆಕ್ಷನ್ 10 ಎ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ದೇವಾಲಯ ಬಳಸುತ್ತಿದ್ದ ಪುಷ್ಕರಣಿಯನ್ನು ಪ್ರಭುತ್ವಕ್ಕೆ ವಹಿಸಿದರೆ ಧಾರ್ಮಿಕ ಹಕ್ಕು ಉಲ್ಲಂಘನೆಯಾಗದು: ಮದ್ರಾಸ್ ಹೈಕೋರ್ಟ್
Published on

ಖಾಸಗಿ ಕೊಳ,ಕೆರೆ, ಪುಷ್ಕರಣಿ, ಊರಣಿಗಳಿಗೆ ಸಂಬಂಧಿಸಿದಂತೆ  ರೈತವಾರಿ ಪಟ್ಟಾ (ರೈತರಿಗೆ ತಮ್ಮ ಭೂಮಿಯ ಮೇಲೆ ದೊರೆಯುವ ಖಾಸಗಿ ಆಸ್ತಿ ಮಾಲಿಕತ್ವದ ಒಂದು ರೂಪ) ನೀಡುವುದನ್ನು ನಿಷೇಧಿಸುವ 1963ರ ತಮಿಳುನಾಡು ಮೈನರ್ ಇನಾಮುಗಳ (ರದ್ದತಿ ಮತ್ತು ರೈತವಾರಿಯಾಗಿ ಪರಿವರ್ತನೆ) ಕಾಯಿದೆಯ ಸೆಕ್ಷನ್ 10ಎ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿತು.  [ಮಧು ಶ್ರೀ ಅಕ್ಕಬಾಯಿ ಅಮ್ಮಣಿ ಘಡ್ಗೆ ರಾವ್ ಟ್ರಸ್ಟ್ ಮತ್ತು ತಮಿಳುನಾಡು ಸರ್ಕಾರ ನಡುವಣ ಪ್ರಕರಣ].

ದೇವಾಲಯದ ಧಾರ್ಮಿಕ ಆಚರಣೆಗಳಿಗೆ ಈ ಮೊದಲಿನಿಂದಲೂ ಬಳಸಲಾಗುತ್ತಿದ್ದ ನೀರಿನ ಕೊಳಕ್ಕೆ ಸಂಬಂಧಿಸಿದಂತೆ ದೇವಾಲಯಕ್ಕೆ ಇರುವ ಧಾರ್ಮಿಕ ಮತ್ತು ಮಾಲೀಕತ್ವದ ಹಕ್ಕುಗಳನ್ನು ಈ ಸೆಕ್ಷನ್‌ ಉಲ್ಲಂಘಿಸುತ್ತದೆ ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

Also Read
ಪೂಜಾ ಸ್ಥಳಗಳ ಕಾಯಿದೆ: ಧಾರ್ಮಿಕ ಕಟ್ಟಡಗಳ ಸಮೀಕ್ಷೆ, ಹೊಸ ದಾವೆಗಳಿಗೆ ಸುಪ್ರೀಂ ತಡೆ

ಧಾರ್ಮಿಕ ಉದ್ದೇಶಗಳಿಗಾಗಿ ಅಥವಾ ಬೇರೆ ಯಾವುದೇ ಉದ್ದೇಶಗಳಿಗಾಗಿ ಕೊಳಗಳನ್ನು ಬಳಸಿದರೂ, ಅವು ನೀರನ್ನು ಸಂಗ್ರಹಿಸುವ, ಅಂತರ್ಜಲ ಮರುಪೂರಣ ಮಾಡುವ ಮತ್ತು ಕೃಷಿ ಜೀವನವನ್ನು ಉಳಿಸಿಕೊಳ್ಳುವ ಮೂಲಕ ಪ್ರಮುಖ ಪರಿಸರ ಮತ್ತು ಸಾಮುದಾಯಿಕ ಪಾತ್ರಗಳನ್ನು ನಿರ್ವಹಿಸುತ್ತವೆ ಎಂದು ನ್ಯಾಯಮೂರ್ತಿಗಳಾದ ಎಸ್.ಎಂ. ಸುಬ್ರಮಣಿಯಂ ಮತ್ತು ಎ.ಡಿ. ಮಾರಿಯಾ ಕ್ಲೀಟ್ ಅವರಿದ್ದ ಪೀಠ ಆಗಸ್ಟ್ 13ರ ತೀರ್ಪಿನಲ್ಲಿ ವಿವರಿಸಿದೆ.

ಹಾಗಾಗಿ ಸೆಕ್ಷನ್ 10ಎ ಜಾರಿಗೆ ತರುವ ಮೂಲಕ ಎಲ್ಲಾ ನೀರಿನ  ಕೊಳಗಳ ಮಾಲೀಕತ್ವವನ್ನು ಪ್ರಭುತ್ವಕ್ಕೆ ವರ್ಗಾಯಿಸುವ ಏಕರೂಪದ ನಿಯಮ ಅನುಷ್ಠಾನಗೊಳಿಸುವ ಅಧಿಕಾರ ರಾಜ್ಯ ಶಾಸಕಾಂಗಕ್ಕೆ ಇದ್ದು ಇದರಿಂದ ಅಂತಹ ಕೊಳಗಳು ಖಾಸಗಿ ಹಿಡುವಳಿಯಾಗಿ ವಿಭಜನೆಯಾಗುವುದು ತಪ್ಪುತ್ತದೆ ಎಂದು ನ್ಯಾಯಾಲಯ ತಿಳಿಸಿತು.

ದೇವಾಲಯ ತನ್ನದ್ದೇ ಸ್ವಂತದ್ದೆಂದು ಬಳಕೆ ಮಾಡದಿದ್ದರು ಪುಷ್ಕರಣಿ ಉಪಯೋಗಿಸುವುದನ್ನು ಮುಂದುವರೆಸುವ ಹಕ್ಕು ಉಳಿದಿರುವುದರಿಂದ  ಅದರ ಧಾರ್ಮಿಕ ಹಕ್ಕು  ಉಲ್ಲಂಘನೆಯಾಗಿದೆ ಎಂದು ಹೇಳುವಂತಿಲ್ಲ ಎಂಬುದಾಗಿ ಪೀಠ ಸ್ಪಷ್ಟಪಡಿಸಿತು.  

ತಂಜಾವೂರಿನ ಸೂರಕೊಟ್ಟೈ ಗ್ರಾಮದ ಸೋಮನಾಥ ದೇವಸ್ಥಾನವನ್ನು ನಿರ್ವಹಿಸುವ ಮಧು ಶ್ರೀ ಅಕ್ಕಬಾಯಿ ಅಮ್ಮಣಿ ಘಡ್ಗೆರಾವ್ ಟ್ರಸ್ಟ್‌ನ ಆನುವಂಶಿಕ ಧರ್ಮದರ್ಶಿ ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

1932ರಲ್ಲಿ ದೇವಾಲಯಕ್ಕೆ ಭೂಮಿಯನ್ನು ಉಡುಗೊರೆಯಾಗಿ ನೀಡಲಾಗಿತ್ತು, ಅದರಲ್ಲಿ ದೇವಾಲಯ ತನ್ನ ಆಚರಣೆಗಳಿಗೆ ಬಳಸುತ್ತಿದ್ದ ನೀರಿನ ಪುಷ್ಕರಣಿ ಯೂ ಸೇರಿತ್ತು. ಆದರೆ ತಮಿಳುನಾಡು ಮೈನರ್ ಇನಾಮ್‌ (ರದ್ದತಿ ಮತ್ತು ರೈತವಾರಿಯಾಗಿ ಪರಿವರ್ತನೆ) ಕಾಯಿದೆಯ ಸೆಕ್ಷನ್ 10 ಎ ನೀರಿನ ಕೊಳಗಳ ವಿಚಾರದಲ್ಲಿ ಪಟ್ಟಾ ನೀಡುವುದನ್ನು ನಿಷೇಧಿಸಿದ್ದರಿಂದ, ಈ ಆಸ್ತಿಯ ಮೇಲಿನ ಮಾಲೀಕತ್ವದ ಹಕ್ಕುಗಳನ್ನು ಗುರುತಿಸುವ ಪಟ್ಟಾವನ್ನು ದೇವಾಲಯಕ್ಕೆ ನೀಡಲು ನಂತರ ನಿರಾಕರಿಸಲಾಯಿತು  ಎಂದು ಅರ್ಜಿದಾರರು ದೂರಿದ್ದರು.

ಪುಷ್ಕರಣಿಯ ನೀರು ದೇವಾಲಯದ ಆಚರಣೆಗಳಿಗೆ ಸದಾ ಬಳಕೆಯಾಗುತ್ತಿದೆಯೇ ವಿನಾ ನೀರಾವರಿ ಅಥವಾ ಕೃಷಿ ಉದ್ದೇಶಗಳಿಗೆ ಅಲ್ಲ. ದೇವಾಲಯದ ಪೂಜೆಗೆ ಕೆರೆಯ ಬಳಕೆ ಅತ್ಯಗತ್ಯವಾದ್ದರಿಂದ ಪಟ್ಟಾ ನಿರಾಕರಣೆ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ವಾದಿಸಲಾಗಿತ್ತು.

ದೇವಾಲಯದ ಉದ್ದೇಶಗಳಿಗಾಗಿ ಬಳಸಲಾಗಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಎಲ್ಲಾ ನೀರಿನ ಕೊಳಗಳಿಗೆ ಸೆಕ್ಷನ್ 10ಎ ಅನ್ನು ಏಕರೂಪವಾಗಿ ಅನ್ವಯಿಸಲಾಗಿದೆ ಎಂದು ರಾಜ್ಯ ಸರ್ಕಾರ ವಾದಿಸಿತ್ತು.  ಜೊತೆಗೆ, ನೀರಿನ ಪುಷ್ಕರಣಿಯನ್ನು ಧಾರ್ಮಿಕ ಉದ್ದೇಶಗಳಿಗಾಗಿಯಷ್ಟೇ ಬಳಸದೆ ಅಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಹರಾಜು ನಡೆಯುತ್ತಿತ್ತು ಎಂದಿತು.

Also Read
ಧಾರ್ಮಿಕ ಗ್ರಂಥಗಳಿಗೆ ಹಕ್ಕುಸ್ವಾಮ್ಯ ಇಲ್ಲ, ಆದರೆ ಅವುಗಳನ್ನು ಆಧರಿಸಿದ ಕೃತಿಗಳಿಗೆ ಅದು ಅನ್ವಯ: ದೆಹಲಿ ಹೈಕೋರ್ಟ್

ಎಸ್. ತೆನ್ನಪ್ಪ ಚೆಟ್ಟಿಯಾರ್  ಮತ್ತು ತಮಿಳುನಾಡು ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ 1963ರ ಕಾಯಿದೆಯನ್ನು ಎತ್ತಿಹಿಡಿದಿದೆ ಎಂದು ನ್ಯಾಯಾಲಯ ಹೇಳಿತು. ಆ ಕಾಯಿದೆಯ ಎಲ್ಲೆಯನ್ನು ಸೆಕ್ಷನ್ 10ಎ ಮೀರದೆ ಇರುವುದರಿಂದ ಅದೇ ರೀತಿಯ ವಿನಾಯಿತಿ  ಹೊಂದಿರುತ್ತದೆ ಎಂದು ಅದು ಹೇಳಿತು.

ಸಂವಿಧಾನದ 39(ಬಿ) ವಿಧಿಯ ಅಡಿಯಲ್ಲಿ ನೀರಿನ ಕೊಳಗಳ ಖಾಸಗೀಕರಣ ನಿರ್ದೇಶನ ತತ್ವವನ್ನು ಮುಂದಿಟ್ಟಿದ್ದು ಇದು ಸಮುದಾಯದ ಭೌತಿಕ ಸಂಪನ್ಮೂಲಗಳನ್ನು ಸಾಮಾನ್ಯ ಒಳಿತಿಗಾಗಿ ವಿತರಿಸಬೇಕೆಂದು ಆದೇಶಿಸುತ್ತದೆ ಎಂದು ಪೀಠ ನುಡಿಯಿತು.

Kannada Bar & Bench
kannada.barandbench.com