ರಾಜ್ಯ ಭದ್ರತಾ ಆಯೋಗ (ಎಸ್‌ಎಸ್‌ಸಿ) ರಚಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರಿಗೆ ಮಂಗಳವಾರ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಒಂದು ತಿಂಗಳಲ್ಲಿ ಉತ್ತರಿಸುವಂತೆ ಆದೇಶಿಸಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ನಿಯಂತ್ರಿಸುವುದರ ಜೊತೆಗೆ ಪೊಲೀಸ್ ಪಡೆಯ ದಕ್ಷತೆ ಹೆಚ್ಚಿಸಲು ಎಸ್‌ಎಸ್‌ಸಿ ರಚಿಸುವಂತೆ ಸುಪ್ರೀಂ ಕೋರ್ಟ್ 2006ರಲ್ಲಿ ತೀರ್ಪಿನಲ್ಲಿ ಹೇಳಿತ್ತು. ಎಸ್‌ಎಸ್‌ಸಿ ರಚಿಸಿ ಅದಕ್ಕೆ ಕಾರ್ಯಕಾರಿ ಸದಸ್ಯರನ್ನು ನೇಮಿಸುವಂತೆ ಕೋರಿ ಅರ್ಜಿದಾರ ವಕೀಲ ಎಸ್ ಉಮಾಪತಿ ಸಲ್ಲಿಸಿದ್ದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ ಮತ್ತೊಮ್ಮೆ ಕಾಲಾವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಪೀಠವು ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಪ್ರಕರಣವನ್ನು ವಿಲೇವಾರಿ ಮಾಡುವುದಾಗಿ ಹೇಳಿದ್ದು, ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿತು.
“ರಾಜ್ಯ ಪೊಲೀಸ್ ಪಡೆಯನ್ನು ರಾಜಕೀಯ ಹಸ್ತಕ್ಷೇಪದಿಂದ ಹೊರತಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾಯಿದೆ 1963ರ ಸೆಕ್ಷನ್ 20ಎ ಅನ್ವಯ ಶಾಸನಬದ್ಧವಾಗಿ ಭದ್ರತಾ ಆಯೋಗ ರಚಿಸುವುದು ಕಡ್ಡಾಯವಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ರಾಜ್ಯ ಸರ್ಕಾರವು ಪೊಲೀಸ್ ಕಾಯಿದೆಗೆ 2006 ಜೂನ್‌ನಲ್ಲಿ ತಿದ್ದುಪಡಿ ಮಾಡಿದೆ. ಆದರೆ, ತಿದ್ದುಪಡಿ ಶಾಸನಕ್ಕೆ ಮಾತ್ರ ಸೀಮಿತವಾಗಿದ್ದು, ಆಯೋಗವನ್ನು ರಚಿಸಲಾಗಿಲ್ಲ. ಈ ಆಯೋಗವನ್ನು 2006 ಡಿಸೆಂಬರ್ ಒಳಗೆ ರಚಿಸಬೇಕಿತ್ತು” ಎಂದು ಅರ್ಜಿದಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
“ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸದಿರುವ ರಾಜ್ಯ ಸರ್ಕಾರದ ನಿಲುವು ನ್ಯಾಯಾಂಗ ನಿಂದನೆಗೆ ಸಮನಾಗಿದೆ. ಸರ್ಕಾರದ ಮರ್ಜಿಗೆ ಒಳಗಾಗದೇ ಕೆಲಸ ಮಾಡುವ ಸಂಬಂಧ ಅಧಿಕಾರಯುತ ಮತ್ತು ಅಧಿಕಾರೇತರ ಸದಸ್ಯರನ್ನು ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 20ಎ (4)ರ ಪ್ರಕಾರ ನೇಮಿಸಬೇಕು. ಪ್ರಕಾಶ್ ಸಿಂಗ್ ಮತ್ತು ಇತರರು ಭಾರತ ಸರ್ಕಾರ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ನಿರ್ದೇಶನ ನೀಡಬೇಕು” ಎಂದು ಮನವಿಯಲ್ಲಿ ಕೋರಲಾಗಿದೆ.