ನೂಹ್‌ನಲ್ಲಿ ನಡೆದ ಹಿಂಸಾಚಾರದ ಬಳಿಕ ಮುಸ್ಲಿಮರನ್ನು ಬಹಿಷ್ಕರಿಸುವಂತೆ ಮತ್ತು ದೂರ ಇಡುವಂತೆ ಸಾರ್ವಜನಿಕವಾಗಿ ಕರೆ ನೀಡುತ್ತಿರುವ ಬಗ್ಗೆ ಕ್ರಮ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ರದ್ದತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠದ ಭೋಜನ ವಿರಾಮದ ವೇಳೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅರ್ಜಿ ಪ್ರಸ್ತಾಪಿಸಿದರು.
ನಿರ್ದಿಷ್ಟ ಸಮುದಾಯದ ಜನರನ್ನು 'ಗದ್ದಾರ್' (ದೇಶದ್ರೋಹಿಗಳು) ಎಂದು ಹೆಸರಿಸಲು ಒತ್ತಾಯಿಸಿದ ನಿದರ್ಶನಗಳನ್ನು ಸಿಬಲ್ ತಿಳಿಸಿದರು.
"ನಿರ್ದಿಷ್ಟ ಸಮುದಾಯಕ್ಕೆ ಉದ್ಯೋಗ ನೀಡುವ ಮಾಲೀಕರನ್ನು ಗದ್ದಾರ್ ಎಂದು ಹಣೆಪಟ್ಟಿ ಕಟ್ಟುವ ಬಗ್ಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ, ಈ ಸಂಬಂಧ ನಾವು ತುರ್ತು ಅರ್ಜಿ ಸಲ್ಲಿಸುತ್ತಿದ್ದೇವೆ" ಎಂದು ಅವರು ಹೇಳಿದರು.
ಆಗಸ್ಟ್ 2 ರಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಡಿಯೋವನ್ನು ಶಾಹೀನ್ ಅಬ್ದುಲ್ಲಾ ಅವರ ಮನವಿ ಆಧರಿಸಿದೆ.
ಹರಿಯಾಣದ ಹಿಸಾರ್‌ನಲ್ಲಿ ಸಮಸ್ತ ಹಿಂದೂ ಸಮಾಜ ಸಂಘಟನೆಯು ಬೀದಿಗಳಲ್ಲಿ ಸಂಚರಿಸುತ್ತಾ ಅಲ್ಲಿನ ಹಿಂದೂ ನಿವಾಸಿಗಳು ಮತ್ತು ಅಂಗಡಿಯವರು ಮುಸ್ಲಿಮರನ್ನು ಕೆಲಸಕ್ಕೆ ನೇಮಿಸಿಕೊಂಡರೆ ಅವರ ಅಂಗಡಿಗಳನ್ನು ಬಹಿಷ್ಕರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಎಚ್ಚರಿಕೆ ನೀಡಿರುವುದನ್ನು ಕಾಣಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.