
ಇಂಡಿಯಾಸ್ ಗಾಟ್ ಲೇಟೆಂಟ್ ಕಾರ್ಯಕ್ರಮಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಅಶ್ಲೀಲತೆಯನ್ನು ಪ್ರಸಾರ ಮಾಡಿದ್ದಕ್ಕಾಗಿ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಅಲಿಯಾಸ್ ಬಿಯರ್ ಬೈಸೆಪ್ಸ್, ಮತ್ತೊಬ್ಬ ಯೂಟ್ಯೂಬರ್ ಆಶಿಶ್ ಚಂಚಲಾನಿ ಹಾಗೂ ಕಾರ್ಯಕ್ರಮದ ಸಂಘಟಕರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಕೋರಿ ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಮೂಲಕ ಸಾಮಾಜಿಕ ಕಾರ್ಯಕರ್ತ ನಿಖಿಲ್ ರೂಪಾರೆಲ್ ಅವರು ದೂರು ದಾಖಲಿಸಿದ್ದಾರೆ.
ಮತ್ತೊಂದೆಡೆ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುವ ವಕೀಲ ಸತ್ಯಂ ಸುರಾನ ಸೇರಿದಂತೆ ಅನೇಕರು ಕೂಡ ಕಾರ್ಯಕ್ರಮದ ವಿರುದ್ಧ ದೂರುಗಳನ್ನು ಸಲ್ಲಿಸಿದ್ದಾರೆ. ವರದಿ ಪ್ರಕಾರ, ಮುಂಬೈ ಪೊಲೀಸರು ಈಗಾಗಲೇ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ನ್ಯಾಷನಲ್ ಡೆಲಿಗೇಟ್ ಎನ್‌ಎಸ್‌ಯುಐನ ಅಧ್ಯಕ್ಷರಾದ ರೂಪಾರೆಲ್ ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಪ್ರಸಾರವಾದ ಸಂಚಿಕೆಯಲ್ಲಿ ಅಲಹಾಬಾದಿಯಾ ಅವರು ಆಡಿದ ಮಾತು ತೀವ್ರ ಆಕ್ರಮಣಕಾರಿ, ಅಶ್ಲೀಲತೆಯಿಂದ ಕೂಡಿತ್ತು. ಅಲ್ಲದೆ ಸಾರ್ವಜನಿಕ ಸಭ್ಯತೆಯ ಎಲ್ಲೆ ಮೀರಿತ್ತು ಎಂದು ದೂರಿದ್ದಾರೆ.
ಅಶ್ಲೀಲತೆ ಸಾರ್ವಜನಿಕ ವೇದಿಕೆಯಲ್ಲಿ ಬಳಕೆಯಾದರೆ ಅದರಿಂದ ಅಗೌರವದ ನಡವಳಿಕೆಗಳು ಸಾಮಾನ್ಯೀಕರಣಗೊಂಡು ಎಳೆಯ ಪ್ರಾಯದ ವೀಕ್ಷಕರ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಹೇಳಿಕೆಗಳು ಸಾಮಾಜಿಕ ಮೌಲ್ಯಗಳನ್ನು ತೀವ್ರವಾಗಿ ಕೆಡಿಸುವ ನೈತಿಕ ಮಾನದಂಡಗಳನ್ನು ದುರ್ಬಲಗೊಳಿಸುವ ಮತ್ತು ಸಾರ್ವಜನಿಕ ನೈತಿಕತೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವುದರಿಂದ ಅಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಬಾರದು ಎಂದು ಅವರು ಹೇಳಿದ್ದಾರೆ.
ಆದ್ದರಿಂದ, ಪ್ರಕರಣವನ್ನು ಪರಿಗಣಿಸಿ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡುವಂತೆ ಅವರು ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಕೋರಿದ್ದಾರೆ.