ಆ್ಯಪ್ ಮೂಲಕ ನೀಡಲಾಗುತ್ತಿರುವ ಓಲಾ ಮತ್ತು ಉಬರ್ ಆಟೋರಿಕ್ಷಾ ಸೇವೆಯ ದರದ ವಿಚಾರವಾಗಿ ನ. 25ರ ಒಳಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ಆಟೋ ರಿಕ್ಷಾ ಪ್ರಯಾಣಕ್ಕೆ ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚಿನ ದರ ವಿಧಿಸಿ ಓಲಾ ಮತ್ತು ಉಬರ್ ತಮ್ಮ ಆ್ಯಪ್ ಮೂಲಕ ಆಟೋರಿಕ್ಷಾ ಸೇವೆ ನೀಡುತ್ತಿದ್ದು, ತಕ್ಷಣದಿಂದ ಬರುವಂತೆ ಈ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಈಚೆಗೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ವಜಾಗೊಳಿಸುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ರೊಪ್ಪೆನ್ ಟ್ರಾನ್ಸ್‌ಪೊರ್ಟೇಷನ್ ಸರ್ವೀಸಸ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ಏಕಸದಸ್ಯ ಪೀಠವು ಸೋಮವಾರ ನಡೆಸಿತು.
ಈ ವೇಳೆ ಸರ್ಕಾರದ ಪರ ಹಾಜರಾದ ಎಜಿ ಪ್ರಭುಲಿಂಗ ನಾವದಗಿ, ಹೈಕೋರ್ಟ್ ನಿರ್ದೇಶನದಂತೆ ದರ ವಿಚಾರವಾಗಿ ಸಂಬಂಧಿಸಿದ ಎಲ್ಲರ ಅಹವಾಲು ಆಲಿಸಲಾಗಿದೆ. ದರ ನಿಗದಿ ಸಂಬಂಧ ಇದೇ ಶುಕ್ರವಾರದೊಳಗೆ ಸರ್ಕಾರವು ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದು, ಅಲ್ಲಿಯವರೆಗೆ ಹೆಚ್ಚುವರಿ ದರ ವಿಧಿಸುವ ಕುರಿತು ನ್ಯಾಯಾಲಯವು ಯಾವುದೇ ಮಧ್ಯಂತರ ಆದೇಶ ನೀಡಬಾರದು ಎಂದು ಮನವಿ ಮಾಡಿದರು. ಎಜಿಯವರ ಮನವಿಯ ಹಿನ್ನೆಲೆಯಲ್ಲಿ ನ್ಯಾಯಪೀಠವು ವಿಚಾರಣೆಯನ್ನು ನ.28ಕ್ಕೆ ಮುಂದೂಡಿತು.
ಈ ಹಿಂದೆ ದರ ಹೆಚ್ಚಳ ಕೋರಿ ಓಲಾ ಮತ್ತು ಉಬರ್ ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದವು. ಆದರೆ ಈ ಮಧ್ಯಪ್ರವೇಶ ಮನವಿಯಲ್ಲಿ ಎದುರಾಗಿರುವ ಕಚೇರಿ ಆಕ್ಷೇಪಣೆಗಳನ್ನು ಅರ್ಜಿದಾರರು ಸರಿಪಡಿಸಿ ಸಲ್ಲಿಸುವಂತೆ ನ್ಯಾಯಾಲಯವು ತಿಳಿಸಿತ್ತು. ಇದೇ ವೇಳೆ, ಸರ್ಕಾರದ ಪರ ವಕೀಲರಿಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶವನ್ನು ನೀಡಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.