

ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ವಿವರಗಳನ್ನು ಬಹಿರಂಗಪಡಿಸುವಂತೆ ಕೋರಿ ಸಲ್ಲಿಸಲಾದ ಮೇಲ್ಮನವಿಗಳು ಪ್ರಕರಣವನ್ನು ಅನಗತ್ಯವಾಗಿ ರೋಚಕಗೊಳಿಸುವ ಯತ್ನವಷ್ಟೇ ಎಂದು ದೆಹಲಿ ವಿಶ್ವವಿದ್ಯಾಲಯ ಮಂಗಳವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ವಿಶ್ವವಿದ್ಯಾಲಯದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ, ಇದು ರೋಚಕಗೊಳಿಸುವ ಯತ್ನವಷ್ಟೇ" ಎಂದು ಹೇಳಿದರು.
ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್, ಆರ್‌ಟಿಐ ಕಾರ್ಯಕರ್ತ ನೀರಜ್ ಶರ್ಮಾ ಹಾಗೂ ವಕೀಲ ಮೊಹಮ್ಮದ್ ಇರ್ಷಾದ್ ಸಲ್ಲಿಸಿದ್ದ ಮೇಲ್ಮನವಿಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಅವರು ಈ ವಿಚಾರ ತಿಳಿಸಿದರು.
ಪ್ರಧಾನಿ ಅವರ ಪದವಿ ವಿವರ ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) 2016ರಲ್ಲಿ ನೀಡಿದ್ದ ಆದೇಶ ರದ್ದುಪಡಿಸಿ ಏಕಸದಸ್ಯ ಪೀಠ 2025ರ ಆಗಸ್ಟ್ 25ರಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು.
ನವೆಂಬರ್ 12ರಂದು ನಡೆದ ಮೊದಲ ವಿಚಾರಣೆಯಲ್ಲಿ, ಮೇಲ್ಮನವಿಗಳನ್ನು ಸಲ್ಲಿಸುವಲ್ಲಿ ವಿಳಂಬವಾಗಿರುವುದನ್ನು ಗಮನಿಸಿದ ಹೈಕೋರ್ಟ್ ಆ ಕುರಿತು ದೆಹಲಿ ವಿಶ್ವವಿದ್ಯಾಲಯ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು.
ಇಂದಿನ ವಿಚಾರಣೆ ವೇಳೆ ವಿಶ್ವವಿದ್ಯಾಲಯದ ಪರವಾಗಿ ಹಾಜರಾದ ಎಸ್‌ಜಿ ಮೆಹ್ತಾ ಅವರು, ವಿಳಂಬಕ್ಕೂ ಹಾಗೂ ಪ್ರಕರಣದ ವಿಚಾರಣಾರ್ಹತೆಗೆ ಸಂಬಂಧಿಸಿದಂತೆ ಉತ್ತರ ಸಲ್ಲಿಸಲು ಇನ್ನಷ್ಟು ಸಮಯಾವಕಾಶ ಅಗತ್ಯವಿದೆ ಎಂದರು.
ಮೇಲ್ಮನವಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಶಾದನ್ ಫರಾಸತ್ ಅವರು ಸಾಲಿಸಿಟರ್ ಜನರಲ್ ವಿಚಾರಣಾರ್ಹತೆಯ ಮೇಲೆ ಕೂಡ ಪ್ರತಿಕ್ರಿಯೆ ಸಲ್ಲಿಸುವುದಾಗಿ ಹೇಳುತ್ತಿರುವುದರಿಂದ ಪ್ರಕರಣದಲ್ಲಿ ನೋಟಿಸ್ ನೀಡಬಹುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಜಿ ಮೆಹ್ತಾ, ತಾವು ಈಗಾಗಲೇ ಪ್ರಕರಣದಲ್ಲಿ ಹಾಜರಾಗಿರುವುದರಿಂದ ನೋಟಿಸ್ ಜಾರಿಗೊಳಿಸುವುದು ಕೇವಲ ಪ್ರಕರಣವನ್ನುಇನ್ನಷ್ಟು ರೋಚಕಗೊಳಿಸುವ ಹಪಹಪಿಯಷ್ಟೇ ಎಂದು ಆಕ್ಷೇಪಿಸಿದರು.
ಅಂತಿಮವಾಗಿ, ಮೇಲ್ಮನವಿಗಳಲ್ಲಿನ ವಿಳಂಬಕ್ಕೆ ಸಂಬಂಧಿಸಿದಂತೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಲು ದೆಹಲಿ ವಿಶ್ವವಿದ್ಯಾಲಯಕ್ಕೆ ನ್ಯಾಯಾಲಯ ಮೂರು ವಾರಗಳ ಕಾಲಾವಕಾಶ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 27ರಂದು ನಡೆಯಲಿದೆ.