ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ

ಪ್ರಸಕ್ತ ಸಾಲಿನಲ್ಲಿ 52,000ಕ್ಕೂ ಅಧಿಕ ಪ್ರಕರಣ ಇತ್ಯರ್ಥಪಡಿಸಿದ ಸುಪ್ರೀಂ ಕೋರ್ಟ್

ಒಟ್ಟು ತೀರ್ಪು ನೀಡಿದ ಪ್ರಕರಣಗಳಲ್ಲಿ 45,642 ಮಿಸಿಲೇನಿಯಸ್‌ ಪ್ರಕರಣಗಳು ಮತ್ತು ಸುಮಾರು 6,549 ಸಾಮಾನ್ಯ ಕೇಸ್‌ಗಳು ಸೇರಿವೆ ಎಂದು ಸರ್ವೋಚ್ಚ ನ್ಯಾಯಾಲಯ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Published on

ಭಾರತದ ಸುಪ್ರೀಂ ಕೋರ್ಟ್ 2023ರಲ್ಲಿ 52,191 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು, ಇದು ಕಳೆದ ವರ್ಷ ಇತ್ಯರ್ಥಗೊಂಡಿದ್ದ 39,800 ಪ್ರಕರಣಗಳಿಗಿಂತಲೂ ಅಧಿಕ.

ಒಟ್ಟು ತೀರ್ಪು ನೀಡಿದ ಪ್ರಕರಣಗಳಲ್ಲಿ 45,642 ಮಿಸಿಲೇನಿಯಸ್‌ ಪ್ರಕರಣಗಳು ಮತ್ತು ಸುಮಾರು 6,549 ಸಾಮಾನ್ಯ ಕೇಸ್‌ಗಳು ಸೇರಿವೆ ಎಂದು ಸರ್ವೋಚ್ಚ ನ್ಯಾಯಾಲಯ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಮಗ್ರ ಪ್ರಕರಣ ನಿರ್ವಹಣಾ ವ್ಯವಸ್ಥೆಯ ಅಂಕಿ- ಅಂಶಗಳ ಪ್ರಕಾರ ಪ್ರಕರಣ ವಿಲೇವಾರಿ ದರ 6 ವರ್ಷಗಳಲ್ಲಿ ಅತ್ಯಧಿಕವಾಗಿದೆ.

"ಈ ಅವಧಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯೊಂದಿಗೆ ಹೋಲಿಸಿದರೆ, 52,660 ಪ್ರಕರಣಗಳು ದಾಖಲಾಗಿದ್ದರೂ, 52,191 ಪ್ರಕರಣಗಳು ವಿಲೇವಾರಿಯಾಗಿ ದಾಖಲಾಗಿರುವ ಪ್ರಕರಣಗಳಿಗೆ ಸರಿಸಮನಾಗಿದೆ" ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಪ್ರಕರಣಗಳ ಪರಿಶೀಲನೆ ಮತ್ತು ಪಟ್ಟಿ ಮಾಡುವಿಕೆ ಅವಧಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರ ನೇತೃತ್ವದಲ್ಲಿ ಸುವ್ಯವಸ್ಥಿತಗೊಳಿಸಿ 10 ದಿನಗಳಿಂದ ಏಳು ದಿನಗಳಿಗೆ ಇಳಿಸಲಾಯಿತು.

"ಸ್ವಾತಂತ್ರ್ಯದ ಹಕ್ಕಿಗೆ ಅತೀವ ಪ್ರಾಶಸ್ತ್ಯ ನೀಡುವ ಮೂಲಕ ಜಾಮೀನು, ಹೇಬಿಯಸ್ ಕಾರ್ಪಸ್, ತೆರವು ಪ್ರಕರಣ, ಕಟ್ಟಡ ಧ್ವಂಸ ಪ್ರಕರಣ ಮತ್ತು ನಿರೀಕ್ಷಣಾ ಜಾಮೀನಿನಂತಹ ಕೆಲವು ಪ್ರಕರಣಗಳನ್ನು ಒಂದೇ ದಿನದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ತಕ್ಷಣವೇ ನ್ಯಾಯಾಲಯಗಳಲ್ಲಿ ಪಟ್ಟಿ ಮಾಡಲಾಯಿತು... ನಿರ್ದಿಷ್ಟ ವರ್ಗದ ಪ್ರಕರಣಗಳನ್ನು ನಿರ್ವಹಿಸಲು ವಿಶೇಷ ಪೀಠಗಳನ್ನು ರಚಿಸಲಾಯಿತು, ಇದು ಹೆಚ್ಚು ವಿಶೇಷ ಮತ್ತು ಪರಿಣಾಮಕಾರಿ ತೀರ್ಪು ಪ್ರಕ್ರಿಯೆಗೆ ಕಾರಣವಾಯಿತು" ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜನವರಿ 1, 2023ರಿಂದ ಡಿಸೆಂಬರ್ 15, 2023ರ ನಡುವೆ 4,410 ಸೇವಾ ಪ್ರಕರಣಗಳು, 11,489 ಕ್ರಿಮಿನಲ್ ಪ್ರಕರಣಗಳು ಹಾಗೂ 10,348 ಸಿವಿಲ್ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.

Also Read
ಸತ್ಯೇಂದರ್ ಜೈನ್ ಜಾಮೀನು ವಿಸ್ತರಣೆ: ಮಧ್ಯಪ್ರವೇಶಿಸಲು ಸಿಜೆಐ ನಕಾರ, ಪೀಠ ಬದಲಾವಣೆ ಕುರಿತು ವಿವರಣೆ

ಪ್ರಕರಣಗಳನ್ನು ಅಸಮರ್ಪಕವಾಗಿ ಪಟ್ಟಿ ಮಾಡಲಾಗುತ್ತಿದೆ ಎಂದು ಕೆಲ ಹಿರಿಯ ವಕೀಲರು ದೂರಿದ ಬಳಿಕ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿ ಈಚೆಗೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

Also Read
ಸೂಕ್ಷ್ಮ ಪ್ರಕರಣಗಳಲ್ಲಿ ಪೀಠ ಬದಲಾವಣೆಗೆ ಹಿರಿಯ ವಕೀಲ ದುಶ್ಯಂತ್ ದವೆ ಆಕ್ಷೇಪ: ಸಿಜೆಐಗೆ ಪತ್ರ

ಸುಪ್ರೀಂ ಕೋರ್ಟ್ ನಿಯಮಾವಳಿ ಮತ್ತು ನ್ಯಾಯಾಲಯ ನಡಾವಳಿ ಮತ್ತು ಕಾರ್ಯವಿಧಾನ ಕೈಪಿಡಿಯನ್ನು ಉಲ್ಲಂಘಿಸಿ ಕೆಲ ಪೀಠಗಳು ವಿಚಾರಣೆ ನಡೆಸುತ್ತಿದ್ದ ಪ್ರಕರಣಗಳನ್ನು ಬೇರೆ ಪೀಠಗಳಿಗೆ ವರ್ಗಾಯಿಸಲಾಗಿದೆ ಎಂದು ಹಿರಿಯ ನ್ಯಾಯವಾದಿ ದುಶ್ಯಂತ್‌ ದವೆ ಅವರು ಸಿಜೆಐಗೆ ಬಹಿರಂಗ ಪತ್ರ ಬರೆದಿದ್ದರು.

Also Read
ನಿರ್ದಿಷ್ಟ ಪೀಠ ಪಡೆಯುವ ಯತ್ನಗಳಿಗೆ ಅವಕಾಶ ನೀಡುವುದಿಲ್ಲ: ಸುಪ್ರೀಂ ರಿಜಿಸ್ಟ್ರಿ

ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ನೇತೃತ್ವದ ಪೀಠದ ಮುಂದೆ ಇಬ್ಬರು ವಕೀಲರು ಮತ್ತು ಪತ್ರಕರ್ತನ ವಿರುದ್ಧದ ಪ್ರಕರಣ ಪಟ್ಟಿ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಕೀಲ ಪ್ರಶಾಂತ್ ಭೂಷಣ್ ಅವರು ಸಿಜೆಐಗೆ ಪತ್ರ ಬರೆದಿದ್ದರು.

ಆದಾಗ್ಯೂ, ಉನ್ನತ ನ್ಯಾಯಾಲಯದ ರಿಜಿಸ್ಟ್ರಿ ಈ ಆರೋಪ ನಿರಾಕರಿಸಿತ್ತು.

[ಪ್ರಕಟಣೆಯನ್ನು ಇಲ್ಲಿ ಓದಿ]

Attachment
PDF
Supreme Court case disposal press release 2023 Dec.pdf.pdf
Preview
Kannada Bar & Bench
kannada.barandbench.com