ರಾಜ್ಯದ ಯಾವುದೇ ಜಿಲ್ಲೆಯಲ್ಲಿ ವಕೀಲರ ಪರಿಷತ್, ಸಂಘ ಅಥವಾ ಇನ್ನಾವುದೇ ಸಂಘ-ಸಂಸ್ಥೆ ಬಂದ್, ಧರಣಿ ಅಥವಾ ಬಹಿಷ್ಕಾರಕ್ಕೆ ಕರೆ ನೀಡಿದರೆ ಅದನ್ನು ಎಲ್ಲಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಂಗ ಘಟಕದ ಪ್ರಮುಖರು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಕ್ಷಣ ತರಬೇಕು ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇಗೌಡ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಯಾವುದೇ ತೆರನಾದ ಧರಣಿ, ಕಲಾಪಕ್ಕೆ ಬಹಿಷ್ಕಾರ ಹಾಕಿ ವಕೀಲರ ಪರಿಷತ್ ಅಥವಾ ಸಂಘ ಅದರಲ್ಲಿ ಪಾಲ್ಗೊಳ್ಳುವುದಾಗಲಿ ಅಥವಾ ಯಾವುದೇ ಸಂಘ-ಸಂಸ್ಥೆ ಇದರಲ್ಲಿ ಭಾಗವಹಿಸುವುದರ ಕುರಿತಾಗಲಿ, ಇದಲ್ಲದೆ ಇತರೆ ಯಾವುದೇ ಪ್ರಮುಖ ವಿದ್ಯಮಾನಗಳಿದ್ದರೂ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರ ಗಮನಕ್ಕೆ ತರಬೇಕು ಎಂದು ಶನಿವಾರ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷದ ಫೆಬ್ರವರಿಯಲ್ಲಿ ನ್ಯಾಯಾಲಯದ ಕಲಾಪದಿಂದ ದೂರು ಉಳಿಯುವ ಸಂಬಂಧ ನಿಲುವಳಿಗೆ ಒಪ್ಪಿಗೆ ನೀಡಿದ್ದ ರಾಜ್ಯದ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಕೆ ಆರ್ ಪೇಟೆ, ಪಾಂಡವಪುರ ಮತ್ತು ದಾವಣಗೆರೆ ಸೇರಿದಂತೆ ಏಳು ವಕೀಲರ ಸಂಘಗಳ ವಿರುದ್ಧ ರಿಜಿಸ್ಟ್ರಿಯ ವರದಿ ಆಧರಿಸಿ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನಾ ದೂರನ್ನು ಕರ್ನಾಟಕ ಹೈಕೋರ್ಟ್ ದಾಖಲಿಸಿಕೊಂಡಿತ್ತು.
“ನ್ಯಾಯಾಲಯದ ಕಲಾಪದಿಂದ ಹಿಂದೆ ಸರಿಯುವುದಕ್ಕೆ ಬೆಂಬಲ ನೀಡಿದ ವಕೀಲರ ಸಂಘಗಳ ಪದಾಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ರಿಜಿಸ್ಟ್ರಿಗೆ ನಾವು ನಿರ್ದೇಶಿಸುತ್ತಿದ್ದೇವೆ. ಸ್ವಯಂಪ್ರೇರಿತ ಕ್ರಮ ಜಾರಿಗೆ ಪ್ರತ್ಯೇಕ ನ್ಯಾಯಾಂಗ ನಿಂದನೆ ಮನವಿ ಸಲ್ಲಿಸಬೇಕು, ಇದರಲ್ಲಿ ವಕೀಲರ ಸಂಘಗಳ ಪದಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿಸಬೇಕು. ರಿಜಿಸ್ಟ್ರಾರ್ ಜನರಲ್ ಅವರು ಈ ಆದೇಶವನ್ನು ಪರಿಗಣಿಸಿ, ಅಗತ್ಯ ಕ್ರಮಕೈಗೊಳ್ಳಬೇಕು” ಎಂದು ಅಂದಿನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ್ ಅವರ ನೇತೃತ್ವದ ವಿಭಾಗೀಯ ಪೀಠವು ಆದೇಶ ಮಾಡಿತ್ತು.
ಅಂತಿಮವಾಗಿ ಶ್ರೀರಂಗಪಟ್ಟಣ ವಕೀಲರ ಸಂಘದ ಪದಾಧಿಕಾರಿಗಳು ಬೇಷರತ್ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟಿತ್ತು. “ನಿವೃತ್ತ ಕ್ಯಾಪ್ಟನ್ ಹರೀಶ್ ಉಪ್ಪಲ್ ವರ್ಸಸ್ ಭಾರತ ಸರ್ಕಾರ ಮತ್ತು ಇತರರು ಪ್ರಕರಣ ಹಾಗೂ ಕೃಷ್ಣಕಾಂತ್ ವರ್ಸಸ್ ಮಧ್ಯಪ್ರದೇಶ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶಕ್ಕೆ ಬದ್ಧವಾಗಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಭವಿಷ್ಯದಲ್ಲಿ ನ್ಯಾಯಾಲಯದ ಕಲಾಪ ಬಹಿಷ್ಕಾರ ಚಟುವಟಿಕೆಗಲ್ಲಿ ಭಾಗವಹಿಸುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ. ಹೀಗಾಗಿ, ಆರೋಪಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಮನವಿ ವಿಲೇವಾರಿ ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.
ಅಲ್ಲದೇ, ಇತ್ತೀಚೆಗಷ್ಟೇ ಬೆಂಗಳೂರಿನ ಗಾಂಧಿ ನಗರದಲ್ಲಿರುವ ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ನಗರದ ಬೇರೆಲ್ಲೂ ಧರಣಿ, ಪ್ರತಿಭಟನೆ, ಸಮಾವೇಶ ಮಾಡಬಾರದು. ಇದನ್ನು ಉಲ್ಲಂಘಿಸಿದರೆ ವ್ಯಾಪ್ತಿ ಹೊಂದಿರುವ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ಪೀಠವು ಕೆಲವು ದಿನಗಳ ಹಿಂದೆ ಆದೇಶ ಮಾಡಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.