ಪಿಂಚಣಿ ಅಥವಾ ನಿವೃತ್ತಿ ವೇತನ ಎಂಬುದು ಔದಾರ್ಯ, ದಾನ ಅಥವಾ ಅನಪೇಕ್ಷಿತ ಪಾವತಿಯಲ್ಲ ಬದಲಿಗೆ ಪ್ರತಿಯೊಬ್ಬ ನೌಕರನ ರದ್ದುಗೊಳಿಸಲಾಗದ ಹಕ್ಕು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ನಿವೃತ್ತಿಯ 21 ವರ್ಷಗಳ ಬಳಿಕವೂ ಪಿಂಚಣಿಗಾಗಿ ಹೋರಾಟ ನಡೆಸುತ್ತಿರುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುಚ್ಚಕ್ತಿ ಪ್ರಸರಣ ನಿಗಮ ನಿಯಮಿತದ ನೌಕರ ತಿಮ್ಮಯ್ಯ ಅವರ ಅರ್ಜಿಯನ್ನು ಆಲಿಸಿದ ಪೀಠ ಕೆಪಿಟಿಸಿಎಲ್‌ಗೆ ಪರಿಹಾರ ಒದಗಿಸುವಂತೆ ಸೂಚಿಸಿದೆ.
ಉದ್ಯೋಗಿಗಳಿಗೆ ಪಾವತಿಸಬೇಕಾದ ಪಿಂಚಣಿ ಎಂಬುದು ಸಂವಿಧಾನದ 300-ಎ ವಿಧಿಯಡಿ ಒಂದು ಅಂಶವಾಗಿದೆ. ಜೊತೆಗೆ 21 ನೇ ವಿಧಿಯಡಿ ಜೀವನೋಪಾಯಕ್ಕೆ ಸಂಬಂಧಿಸಿದ ಮೂಲಭೂತ ಹಕ್ಕಾಗಿದೆ. ಹೀಗಾಗಿ ಅದರ ಒಂದಂಶವನ್ನು ನೀಡದಿದ್ದರೂ ಅದನ್ನು ಒಪ್ಪಲಾಗದು ಎಂದಿರುವ ನ್ಯಾಯಾಲಯ “ನಿವೃತ್ತ ನೌಕರ ಸಭ್ಯತೆ, ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದಿಂದ ಬದುಕಲು ಕರ್ತವ್ಯದಿಂದ ಬಿಡುಗಡೆಗೊಳಿಸಿದಾಗಿನ ಸೌಲಭ್ಯಗಳು ಅವಕಾಶ ಒದಗಿಸುತ್ತವೆ. ಅಂತಹ ಹಕ್ಕುಗಳನ್ನು ಮೊಟಕುಗೊಳಿಸವುದು ಪಿಂಚಣಿದಾರರನ್ನು ಜೀವನದ ಮುಳ್ಳು ಹಾಸಿನ ಮೇಲೆ ರಕ್ತಹರಿಸಲು ದೂಡುವುದಾಗಿದೆ” ಎಂದು ಕಳವಳ ವ್ಯಕ್ತಪಡಿಸಿದೆ.
ಯಾವುದೇ ವಿಚಾರಣೆ ನಡೆಸದೆ ಕರ್ತವ್ಯಲೋಪ ಮತ್ತು ಕಳ್ಳತನದ ಆರೋಪ ಹೊರಿಸಿ ತಿಮ್ಮಯ್ಯ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಎರಡು ದಶಕಗಳಿಂದ, ಅಂದರೆ 1999ರಿಂದಲೂ ಕಾನೂನು ಹೋರಾಟ ನಡೆಸುತ್ತಿದ್ದಾರೆ. 2013ರಲ್ಲಿ ನ್ಯಾಯಾಲಯ ಕೆಪಿಟಿಸಿಎಲ್‌ಗೆ ಹತ್ತು ಸಾವಿರ ರೂ ದಂಡ ವಿಧಿಸಿತ್ತು. ಅದಾದ ಬಳಿಕ ತಿಮ್ಮಯ್ಯ ವಿರುದ್ಧ ಶಿಸ್ತುಕ್ರಮಕೈಗೊಳ್ಳಲು ಮುಂದಾಗುವುದನ್ನು ನಿಗಮ ಕೈಬಿಟ್ಟರೂ ಪಿಂಚಣಿ ಬಿಡುಗಡೆ ಮಾಡಿರಲಿಲ್ಲ. ತಿಮ್ಮಯ್ಯ ಅವರಿಗೆ 77 ವರ್ಷ ವಯಸ್ಸಾಗಿದ್ದು ಆರೋಗ್ಯದ ಪ್ರತಿಕೂಲ ಸ್ಥಿತಿಯಿಂದಾಗಿ ಖರ್ಚು ವೆಚ್ಚ ನಿಭಾಯಿಸಲು ಹೆಣಗುತ್ತಿದ್ದಾರೆ ಎಂಬ ಮನವಿಯನ್ನೂ ನಿಗಮ ಪರಿಗಣಿಸದೇ ಇದ್ದುದರಿಂದ ಅವರು ಹೈಕೋರ್ಟ್ ಕದ ತಟ್ಟಿದರು.
ತಿಮ್ಮಯ್ಯ ಪರ ವಕೀಲರು “ನಿಗಮದ ಕ್ರಮ ಸಂಪೂರ್ಣ ಆಧಾರರಹಿತವಾಗಿದೆ. ಏಕೆಂದರೆ ತಿಮ್ಮಯ್ಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದರಿಂದ ಸ್ವತಃ ನಿಗಮವೇ ದೂರ ಉಳಿದಿದೆ. ಶೇ 100ರಷ್ಟು ಪಿಂಚಣಿ ಒದಗಿಸಬೇಕೆಂದು ಅದು ಹೇಳಿದ್ದರೂ ಸೇವೆಯಿಂದ ವಜಾಗೊಳಿಸಿದಾಗ ನೀಡುವ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿದೆ” ಎಂದು ಆರೋಪಿಸಿದರು.
ವಿಚಾರಣೆ ವೇಳೆ ನ್ಯಾಯಾಲಯ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್‌ನ ಹೆನ್ರಿ VIII ಕೃತಿಯ ಹೇಳಿಕೆಯೊಂದನ್ನು ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಕೆಲ ಮಾರ್ಪಾಡು ಮಾಡಿ ಪ್ರಸ್ತಾಪಿಸಿತು: ನಾನು ನನ್ನ ದೊರೆಗೆ ತೆತ್ತುಕೊಂಡಿದ್ದರಲ್ಲಿ ಅರ್ಧದಷ್ಟನ್ನಾದರೂ ನನ್ನ ದೇವರಿಗೆ ತೆತ್ತುಕೊಂಡಿದ್ದರೆ ಇಷ್ಟು ದರಿದ್ರನಾಗಿರುತ್ತಿರಲಿಲ್ಲ. ಇದೇ ಸ್ಥಿತಿ 21 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿರುವ ಅರ್ಜಿದಾರರಿಗೂ ಒದಗಿ ಬಂದಿದೆ” ಎಂದು ಹೇಳಿತು.
ಬಳಿಕ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳಗಿನ ಅಂಶಗಳನ್ನು ಉಲ್ಲೇಖಿಸಿತು:
ವಜಾ ಸೌಲಭ್ಯವನ್ನು ತಡೆಹಿಡಿಯಲು ಯಾವುದೇ ಸಮರ್ಥನೆ ಇಲ್ಲದಿದ್ದರೂ ಕಲ್ಪನೆಗೂ ಮೀರಿ ಕೆಪಿಟಿಸಿಎಲ್ ಸವಲತ್ತು ಒದಗಿಸುವುದನ್ನು ಮುಂದೂಡಿದೆ.
2016ರಿಂದ ಸಂಪೂರ್ಣ ಪಿಂಚಣಿಯನ್ನು ನೀಡುತ್ತಿರುವುದು ವಜಾ ಸೌಲಭ್ಯಗಳನ್ನು ತಡೆ ಹಿಡಿದಿರುವುದಕ್ಕೆ ಯಾವುದೇ ರೀತಿಯ ಸಮರ್ಥನೀಯವಲ್ಲ.
ಸಂವಿಧಾನದ 12ನೇ ವಿಧಿಯಡಿ ಕೆಪಿಟಿಸಿಎಲ್ ಎಂಬುದು ʼಸರ್ಕಾರʼ ಎಂಬುದಾಗಿದ್ದು ತನ್ನ ನೌಕರರೊಬ್ಬರು ತತ್ತರಿಸುವಂತೆ ಮಾಡುವುದು ʼಸರ್ಕಾರʼದ ಸ್ಥಾನಮಾನಕ್ಕೆ ಸರಿಹೊಂದುವುದಿಲ್ಲ.
ಅರ್ಜಿದಾರರಿಗೆ ನೀಡಬೇಕಾದ ಎಲ್ಲಾ ವಜಾ ಸವಲತ್ತುಗಳನ್ನು ಬಡ್ಡಿ ಸಮೇತ ಬಿಡುಗಡೆ ಮಾಡುವುದು ಕಡ್ಡಾಯ. ಜೊತೆಗೆ ಉದ್ಯೋಗಿಗೆ ಕಿರುಕುಳ ನೀಡಿದ್ದನ್ನೂ ಪರಿಗಣಿಸಿ ಪರಿಹಾರ ಒದಗಿಸಬೇಕು.
1999ರಿಂದ ಈವರೆಗೆ ಅವರಿಗೆ ನೀಡಬೇಕಾದ ಒಟ್ಟು ಮೊತ್ತಕ್ಕೆ ಶೇ 9ರಷ್ಟು ಬಡ್ಡಿ ಸೇರಿಸಿ ರೂ 50,000 ವೆಚ್ಚವನ್ನು ಭರಿಸಿ ಕೆಪಿಟಿಸಿಎಲ್ ಪಿಂಚಣಿದಾರರಿಗೆ ಹಣ ಪಾವತಿಸಬೇಕು.