ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ ಜಾರಿ ಕೋರಿ ಬಾಂಬೆ ಹೈಕೋರ್ಟ್‌ಗೆ ಪಿಐಎಲ್

ಪ್ರಸ್ತುತ ಇರುವ ಮಿತಿಗಳು ಅನೇಕ ಅರ್ಹ ಕುಟುಂಬಗಳಿಗೆ ನೆರವು ನೀಡದೆ ಇರುವುದರಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ವ್ಯಾಪ್ತಿಯನ್ನು ನವೀಕರಿಸಬೇಕು ಮತ್ತು ಆದಾಯ ಮಿತಿ ಪರಿಷ್ಕರಿಸಬೇಕು ಎಂದು ಅರ್ಜಿ ವಾದಿಸಿದೆ.
Bombay High Court
Bombay High Court
Published on

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ " ಒಂದು ರಾಷ್ಟ್ರ ಒಂದು ಪಡಿತರ ಚೀಟಿ " (ಒಎನ್‌ಆರ್‌ಸಿ) ಯೋಜನೆಯನ್ನು ತಕ್ಷಣವೇ ಜಾರಿಗೆ ತರಬೇಕೆಂದು ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ದೇಶದೆಲ್ಲೆಡೆ ಒಂದೇ ಪಡಿತರ ಚೀಟಿಯನ್ನು ಬಳಸಲು ಅನುವು ಮಾಡಿಕೊಡಲಿರುವ ಯೋಜನೆ ಲಕ್ಷಾಂತರ ವಲಸೆ ಕಾರ್ಮಿಕರು ರಾಜ್ಯಗಳ ಗಡಿಯಾಚೆಗೆ ಅಗತ್ಯ ಆಹಾರ ಪಡೆಯಲು ಅವಕಾಶ ಕಲ್ಪಿಸುತ್ತದೆ.

Also Read
ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡಲು ರಾಜ್ಯ ಸರ್ಕಾರಗಳು ವಿಫಲ: ಸುಪ್ರೀಂ ಕೋರ್ಟ್ ಮತ್ತೆ ಅಸಮಾಧಾನ

ಸ್ವಯಂ ಪ್ರೇರಿತವಾಗಿ ಮೊಕದ್ದಮೆಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಜಾರಿಗೊಳಿಸಿಲ್ಲ ಎಂದು ಮನವಿದಾರರು ತಿಳಿಸಿದ್ದಾರೆ. ಹೀಗಾಗಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಬಹುದು ಎಂದು ಅಕ್ಟೋಬರ್ 11 ರಂದು ಪಿಐಎಲ್‌ನ ಪ್ರಾಥಮಿಕ ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರಿದ್ದ ಪೀಠ ತಿಳಿಸಿದೆ.   

 ಈ ಸಂಬಂಧ ಅರ್ಜಿದಾರರ ಪರ ವಕೀಲರು ತಮ್ಮ ಕಕ್ಷಿದಾರರೊಂದಿಗೆ ಚರ್ಚಿಸಲು ಅವಕಾಶ ಕಲ್ಪಿಸಿ ನ್ಯಾಯಾಲಯ ಪ್ರಕರಣವನ್ನು ಅಕ್ಟೋಬರ್ 23ಕ್ಕೆ ಮುಂದೂಡಿತು.

2013ರಲ್ಲಿ ಜಾರಿಗೊಳಿಸಲಾದ ಕಾಯಿದೆ, ಭಾರತದ ಜನಸಂಖ್ಯೆಯ ಸರಿಸುಮಾರು ಮೂರನೇ ಎರಡರಷ್ಟು ಅಂದರೆ ಗ್ರಾಮೀಣ ಪ್ರದೇಶದ ಶೇ 75  ಮತ್ತು ನಗರ ಪ್ರದೇಶದ ಶೇ 50ರಷ್ಟು  ಜನರಿಗೆ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ  ಒದಗಿಸಲು ಯತ್ನಿಸುತ್ತದೆ.

ಮೂವ್ಮೆಂಟ್ ಫಾರ್ ಪೀಸ್ ಮತ್ತು ಜಸ್ಟಿಸ್ ಫಾರ್ ವೆಲ್ಫೇರ್ ಸಂಘಟನೆ ವಕೀಲ ಹಮ್ಜಾ ಲಕ್ಡಾವಾಲಾ ಅವರ ಮೂಲಕ ಸಲ್ಲಿಸಿರುವ ಅರ್ಜಿ ಮೂರು ಪರಿಹಾರಗಳನ್ನು ಕೋರಿದೆ.

ಮೊದಲನೆಯದಾಗಿ, ಒಎನ್‌ಆರ್‌ಸಿ ಯೋಜನೆ ಜಾರಿಗೊಳಿಸುವುದನ್ನು ಕಡ್ಡಾಯಗೊಳಿಸುವ ಸುಪ್ರೀಂ ಕೋರ್ಟ್‌ನ ಎರಡು ನಿರ್ದೇಶನಗಳನ್ನು ಕೂಡಲೇ ಪಾಲಿಸಬೇಕು.

Also Read
ಲೈಂಗಿಕ ಕಾರ್ಯಕರ್ತರಿಗೆ ಪಡಿತರ, ಗುರುತಿನ ಚೀಟಿ ವಿತರಣೆಗೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಎರಡನೆಯದಾಗಿ, ಮಹಾರಾಷ್ಟ್ರಕ್ಕೆ ಸಂಬಂಧಿಸಿದಂತೆ 2011ರ ಜನಗಣತಿಯ ಆಧಾರದ ಮೇಲೆ ಒದಗಿಸಲಾದ ವ್ಯಾಪ್ತಿ ಹಳತಾಗಿದ್ದು ಸ್ವಾಭಾವಿಕ ಬೆಳವಣಿಗೆ ಮತ್ತು ವಲಸೆಯಿಂದಾಗಿ ರಾಜ್ಯದ ಜನಸಂಖ್ಯೆ ಗಣನೀಯವಾಗಿ ಹೆಚ್ಚಿರುವುದರಿಂದ ಕಾಯಿದೆಯ ವ್ಯಾಪ್ತಿಯನ್ನು 7 ಕೋಟಿ ಜನರಿಗೆ ಅನ್ವಯವಾಗುವಂತೆ ವಿಸ್ತರಿಸಬೇಕು.   

ಮೂರನೆಯದಾಗಿ, ಮಹಾರಾಷ್ಟ್ರ ಆಹಾರ ಭದ್ರತಾ ನಿಯಮಾವಳಿ, 2019ರ ಮೂಲಕ ನಿಗದಿಪಡಿಸಿದ ಗರಿಷ್ಠ ವಾರ್ಷಿಕ ಕುಟುಂಬದ ಆದಾಯ ಮಿತಿಗಳನ್ನು ಪರಿಷ್ಕರಿಸುವ ಅಗತ್ಯವಿದೆ. ಪ್ರಸ್ತುತ ಆದಾಯ ಮೀತಿ ಗ್ರಾಮೀಣ ಕುಟುಂಬಗಳಿಗೆ ₹44,000 ಮತ್ತು ನಗರದಲ್ಲಿರುವ ಕುಟುಂಬಗಳಿಗೆ ₹59,000 ಇದೆ. ನೈಜ ಜೀವನ ವೆಚ್ಚಕ್ಕೆ ಹೋಲಿಸಿದರೆ ಈ ಮಿತಿ ತೀರಾ ಕಡಿಮೆಯಾಗಿದೆ ಎಂದು ಅರ್ಜಿ ಹೇಳಿದೆ.

Kannada Bar & Bench
kannada.barandbench.com