

ರಾಷ್ಟ್ರ ರಾಜಧಾನಿಯಲ್ಲಿ ಇ-ರಿಕ್ಷಾಗಳನ್ನು ನಿಯಂತ್ರಿಸುವ ನಿಯಮ ಜಾರಿಯಾಗದ ಕುರಿತು ಆತಂಕ ವ್ಯಕ್ತಪಡಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ದೆಹಲಿ ಹೈಕೋರ್ಟ್ ದೆಹಲಿ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಮನೀಶ್ ಪರಾಶರ್ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಪ್ರತಿವಾದಿ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠ ಎಂಟು ವಾರಗಳೊಳಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಿತು.
ದೆಹಲಿ ಸರ್ಕಾರ, ದೆಹಲಿ ಸರ್ಕಾರದ ಸಾರಿಗೆ ಇಲಾಖೆ, ದೆಹಲಿ ಟ್ರಾಫಿಕ್ ಪೊಲೀಸ್ ಹಾಗೂ ದೆಹಲಿ ಮಹಾನಗರ ಪಾಲಿಕೆಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಅರ್ಜಿದಾರ ಮಣೀಶ್ ಪರಾಶರ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
2025ರ ಆಗಸ್ಟ್‌ನಲ್ಲಿ ಅತಿವೇಗವಾಗಿ ಬಂದ ಇ-ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ತಮ್ಮ ಎಂಟು ವರ್ಷದ ಪುತ್ರಿ ಮೃತಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ. ಇ-ರಿಕ್ಷಾಗಳು ರಚನಾತ್ಮಕವಾಗಿ ಅನರ್ಹ. ಅವುಗಳಿಗೆ ವಿಮೆ ಇರುವುದಿಲ್ಲ ಮತ್ತು ಸಾರ್ವಜನಿಕರಿಗೆ ಜೀವಕ್ಕೆ ಕುತ್ತು ತರುವಂತಹವು. ಸ್ಥಾಪಿತ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಸಂಚರಿಸುತ್ತಿರುವ ಈ ವಾಹನಗಳು ಪ್ರಯಾಣಿಕರು, ಪಾದಚಾರಿಗಳು ಮತ್ತು ನಿರಪರಾಧ ಕುಟುಂಬಗಳಿಗೆ ಜೀವಕ್ಕೆ ನಿರಂತರ ಭೀತಿ ಒಡ್ಡುತ್ತಿವೆ. ತನ್ನ ಮಗಳ ಸಾವು ಸೇರಿದಂತೆ ಇಂತಹ ಅಪಘಾತಗಳ ಸರಣಿ ಸಮುದಾಯಕ್ಕೆ ಘಾಸಿ ಉಂಟು ಮಾಡುವಂತಿದ್ದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಜೀವಿಸುವ ಹಕ್ಕನ್ನು ದುರ್ಬಲಗೊಳಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇ-ರಿಕ್ಷಾಗಳಿಗೆ ಸಂಬಂಧಿಸಿದಂತೆ ಕೇಂದ್ರ ಮೋಟಾರ್ ವಾಹನ (ಹದಿನಾರನೇ ತಿದ್ದುಪಡಿ) ನಿಯಮಾವಳಿ, ಸುರಕ್ಷತಾ ಮಾನದಂಡ, 2014ರ ಇ-ರಿಕ್ಷಾ ಸೇವಾ ಯೋಜನೆ ಸೇರಿದಂತೆ ಹಲವು ಸರ್ಕಾರಿ ನಿಯಮಗಳು ಇದ್ದರೂ ಅವುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ದೊರಕದ ಕಾರಣ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಅರ್ಜಿ ವಿವರಿಸಿದೆ.
ಇ-ರಿಕ್ಷಾಗಳನ್ನು ನಿಯಂತ್ರಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು, ಅವುಗಳ ನೋಂದಣಿಗೆ ಕಠಿಣ ಮಿತಿ ವಿಧಿಸುವುದು, ಸಂಚಾರ ನಿಯಮಗಳ ಕಟ್ಟುನಿಟ್ಟಾದ ಪಾಲನೆ ಖಚಿತಪಡಿಸುವುದು ಹಾಗೂ ನಿಯಮ ಉಲ್ಲಂಘಿಸುವ ಇ-ರಿಕ್ಷಾಗಳನ್ನು ಜಪ್ತಿ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.
ಇದಲ್ಲದೆ, ಇಂತಹ ಅಪಘಾತಗಳಿಂದ ಗಾಯ, ಅಂಗವಿಕಲತೆ ಅಥವಾ ಮರಣ ಸಂಭವಿಸಿದಲ್ಲಿ ವೈದ್ಯಕೀಯ ಚಿಕಿತ್ಸೆ ಮತ್ತು ನೆರವಿಗಾಗಿ ಪರಿಹಾರ ನಿಧಿಯನ್ನು ಸ್ಥಾಪಿಸಬೇಕೆಂದು ಕೂಡ ವಾದಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 18ರಂದು ನಡೆಯಲಿದೆ.