

ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಿಂದಾಗಿ 34 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ರಸ್ತೆ ಬದಿ ನಿರ್ಮಿಸಿದ ಡಾಬಾಗಳು ಹಾಗೂ ಹೆದ್ದಾರಿಗಳ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಈಚೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನಿರ್ದೇಶಿಸಿದೆ.
ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಅನಧಿಕೃತವಾಗಿ ರಸ್ತೆ ಬದಿ ನಿರ್ಮಿಸಿದ ಡಾಬಾಗಳು ಹಾಗೂ ರಸ್ತೆಯ ಕಳಪೆ ನಿರ್ವಹಣೆಯೇ ಅಪಘಾತಕ್ಕೆ ಕಾರಣ ಎಂಬ ಮಾಧ್ಯಮ ವರದಿಗಳನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠ ಈ ಬಗೆಯ ದುರಂತಗಳನ್ನು ನಿರ್ಲಕ್ಷಿಸಲಾಗದು ಎಂದಿತು.
ಸಂವಿಧಾನ ಒದಗಿಸಿರುವ ಜೀವಿಸುವ ಹಕ್ಕು (21ನೇ ವಿಧಿ) ಜನರಿಗೆ ಸುರಕ್ಷಿತ ರಸ್ತೆ ಸೌಕರ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ಹೆದ್ದಾರಿಗಳ ನಿರ್ವಹಣೆ, ಸುರಕ್ಷತಾ ಕ್ರಮಗಳು ಮತ್ತು ಡಾಬಾ ನಿಯಂತ್ರಿಸುವಲ್ಲಿನ ನಿರ್ಲಕ್ಷ್ಯವನ್ನು ಸಹಿಸಲಾಗದು. ಸರ್ಕಾರ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳು ಇನ್ನೆರಡು ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ಅದು ಆದೇಶಿಸಿತು.
ನವೆಂಬರ್ 2 ರಂದು, ರಾಜಸ್ಥಾನದ ಫಲೋಡಿಯ ಮಾತೋಡಾ ಬಳಿ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ನಿಂತಿದ್ದ ಟ್ರೇಲರ್ ಟ್ರಕ್‌ಗೆ ಡಿಕ್ಕಿ ಹೊಡೆದು 15 ಪ್ರಯಾಣಿಕರು ಸಾವನ್ನಪ್ಪಿದರು. ಭಾರತ್‌ಮಾಲಾ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸಿತ್ತು. ಡಾಬಾಗಳು ಇದ್ದುದರಿಂದ ರಸ್ತೆಗೆ ಹೊಂದಿಕೊಂಡಂತೆಯೇ ತಮ್ಮ ವಾಹನಗಳನ್ನು ಚಾಲಕರು ನಿಲ್ಲಿಸುತ್ತಿದ್ದುದರಿಂದ ಅಪಘಾತ ಸಂಭವಿಸಿತ್ತು ಎನ್ನಲಾಗಿತ್ತು.
ಮರುದಿನ ಬೆಳಿಗ್ಗೆ, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಜಲ್ಲಿಕಲ್ಲು ತುಂಬಿದ ಲಾರಿಯೊಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಶಿಶು ಸೇರಿದಂತೆ 19 ಜನರು ಸಾವನ್ನಪ್ಪಿದ್ದರು. ರಸ್ತೆಯಲ್ಲಿ ಬೆಳಕು, ವಿಭಜಕಗಳು ಮತ್ತು ಎಚ್ಚರಿಕೆ ಫಲಕಗಳು ಇರಲಿಲ್ಲ ಎಂಬುದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
ಅಪಘಾತಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ ಬಳಿಕವೇ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತರು ಎಂದು ಕುಟುಕಿದ ನ್ಯಾಯಾಲಯ ಜೀವಕ್ಕೆ ಮಾರಕವಾಗುವ ನಿರ್ಲಕ್ಷ್ಯಕ್ಕೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ಅಗತ್ಯ ಎಂದಿತು.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ತಮ್ಮ ಕರ್ತವ್ಯಗಳನ್ನು ಸರಿಯಾದ ಶ್ರದ್ಧೆಯಿಂದ ನಿರ್ವಹಿಸಿದ್ದರೆ ಅವುಗಳನ್ನು ತಪ್ಪಿಸುವುದು ಸಾಧ್ಯವಿದ್ದಾಗ ಇಂತಹ ದುರಂತದ ಬಗ್ಗೆ ಕಣ್ಣುಮುಚ್ಚಿ ಕೂರಲಾಗದು ಎಂದು ನ್ಯಾಯಾಲಯ ಹೇಳಿತು.
ಪ್ರಕರಣದ ಅಮಿಕಸ್ ಕ್ಯೂರಿಯಾಗಿ ಹಿರಿಯ ವಕೀಲ ಆತ್ಮಾರಾಮ್ ನಾಡಕರ್ಣಿ ಅವರನ್ನು ನೇಮಿಸಿದ ನ್ಯಾಯಾಲಯ ವಕೀಲರಾದ ಜೈ ಅನಂತ್ ದೇಹದ್ರಾಯ್ ಮತ್ತು ಸುಘೋಷ್ ಸುಬ್ರಹ್ಮಣ್ಯಂ ಅವರು ನಾಡಕರ್ಣಿ ಅವರಿಗೆ ಸಹಾಯ ಮಾಡುವಂತೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 15ರಂದು ನಡೆಯಲಿದೆ.
[ಆದೇಶದ ಪ್ರತಿ]