ರೋಗಿಗಳಿಗೆ ಶಿಫಾರಸು ಮಾಡಲೆಂದು ವೈದ್ಯರಿಗೆ ಉಚಿತವಾಗಿ ಔಷಧ ಪೂರೈಸುವ ಕಂಪೆನಿಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಔಷಧೀಯ ಮಾರುಕಟ್ಟೆ ಪದ್ಧತಿಗಳ ಏಕರೂಪ ಸಂಹಿತೆಗೆ ಶಾಸನಬದ್ಧ ಬೆಂಬಲ ನೀಡಲು ನಿರ್ದೇಶಿಸಬೇಕೆಂದು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ರೋಗಿಗಳಿಗೆ ಶಿಫಾರಸು ಮಾಡಲೆಂದು ವೈದ್ಯರಿಗೆ ಉಚಿತವಾಗಿ ಔಷಧ ಪೂರೈಸುವ ಕಂಪೆನಿಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ

ರೋಗಿಗಳಿಗೆ ತಮ್ಮ ಔಷಧವನ್ನೇ ಶಿಫಾರಸು ಮಾಡಿಸುವ ಸಲುವಾಗಿ ವೈದ್ಯರಿಗೆ ಉಚಿತವಾಗಿ ಔಷಧ ಪೂರೈಸುವ ಕಂಪೆನಿಗಳನ್ನು ಹೊಣೆಗಾರರನ್ನಾಗಿ ಮಾಡಲು ನಿರ್ದೇಶಿಸಬೇಕೆಂದು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ನೀಡಿದೆ. [ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘಟನೆಗಳ ಒಕ್ಕೂಟ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಏಕರೂಪದ ಔಷಧೀಯ ಮಾರುಕಟ್ಟೆ ಪದ್ದತಿಗೆ (ಯುಸಿಪಿಎಂಪಿಗೆ) ಗೆ ಶಾಸನಬದ್ಧ ಬೆಂಬಲವನ್ನು ನೀಡಲು ನಿರ್ದೇಶಿಸಬೇಕು ಎಂದು ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘಟನೆಗಳ ಒಕ್ಕೂಟ ಮನವಿ ಮಾಡಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಪಾರಿಖ್, ಕೋವಿಡ್‌ ವೇಳೆ ರೆಮ್‌ಡಿಸಿವಿರ್ ಔಷಧಿಯ ಎಗ್ಗಿಲ್ಲದ ಮಾರಾಟ ಮತ್ತು ಅದನ್ನೇ ವೈದ್ಯರು ಶಿಫಾರಸು ಮಾಡುತ್ತಿದ್ದುದನ್ನು ಉದಾಹರಣೆಯಾಗಿ ನೀಡಿದರು.

Also Read
ರಾಜಕಾರಣಿಗಳು, ಸಿನಿ ತಾರೆಯರು ರೆಮ್‌ಡಿಸಿವಿರ್‌ ಹಂಚಿಕೆ ಮಾಡುತ್ತಿರುವುದು ನಮ್ಮನ್ನು ಕಂಗೆಡಿಸಿದೆ: ಬಾಂಬೆ ಹೈಕೋರ್ಟ್‌

ಆಗ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ಪೀಠ ಕೇಂದ್ರ ಸರ್ಕಾರ ಏನು ಹೇಳುತ್ತದೆ ಮೊದಲು ನೋಡೋಣ ಎಂದು ತಿಳಿಸಿ ಆರು ವಾರದೊಳಗೆ ಉತ್ತರಿಸುವಂತೆ ನೋಟಿಸ್‌ ನೀಡಿತು.

ನ್ಯಾಯವಾದಿ ಅಪರ್ಣಾ ಭಟ್ ಅವರ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು ಅರ್ಜಿಯ ಪ್ರಮುಖಾಂಶಗಳು ಹೀಗಿವೆ:

Also Read
ಭಾರತ್ ಬಯೋಟೆಕ್, ಕೋವ್ಯಾಕ್ಸಿನ್‌ ವಿರುದ್ಧದ 14 ಲೇಖನಗಳನ್ನು ತೆಗೆದುಹಾಕಲು ʼದಿ ವೈರ್ʼಗೆ ಸೂಚಿಸಿದ ತೆಲಂಗಾಣ ನ್ಯಾಯಾಲಯ
  • ಆರೋಗ್ಯದ ಹಕ್ಕು ಜೀವನದ ಹಕ್ಕಿನ ಒಂದು ಭಾಗವಾಗಿದ್ದು ಇದಕ್ಕೆ ಅನುಗುಣವಾಗಿ ಔಷಧ ಕಂಪೆನಿಗಳು ನೈತಿಕ ಮಾರುಕಟ್ಟೆ ಅಭ್ಯಾಸಗಳನ್ನು ಪಾಲಿಸುವುದು ಅತ್ಯಗತ್ಯ.

  • ಯುಸಿಪಿಎಂಪಿಗೆ ಯಾವುದೇ ಶಾಸನಬದ್ಧ ಆಧಾರಗಳು ಇಲ್ಲದಿರುವುದರಿಂದ ವೈದ್ಯರ ಅಂತಹ ಅಭ್ಯಾಸಗಳನ್ನು ನಿಷೇಧಿಸುವ ಯಾವುದೇ ಕಾನೂನು ಅಥವಾ ನಿಯಂತ್ರಣ ಈಗ ಇಲ್ಲ. ಯುಸಿಪಿಎಂಪಿ ಎಂಬುದು ಸ್ವಯಂಪ್ರೇರಿತ ನಿಯಮಗಳ ಗುಚ್ಛವಾಗಿದೆ.

  • ಭ್ರಷ್ಟಾಚಾರದ ವಿರುದ್ಧದ ವಿಶ್ವಸಂಸ್ಥೆ ಸಮಾವೇಶದಲ್ಲಿ ಭಾರತ ಸಹಿ ಹಾಕಿದ್ದರೂ ಇಲ್ಲಿ ಔಷಧೀಯ ಮಾರುಕಟ್ಟೆ ನಡೆಸುತ್ತಿರುವ ಭ್ರಷ್ಟಾಚಾರ ಅನಿಯಂತ್ರಿತವಾಗಿದೆ.

  • ಉಡುಗೊರೆ, ಮನರಂಜನೆ, ಆತಿಥ್ಯ ಮತ್ತಿತರ ಅನುಕೂಲಗಳನ್ನು ಪಡೆದು ವೈದ್ಯರು ಹೆಚ್ಚು ಶಿಫಾರಸು ಮಾಡಿದ ಅಥವಾ ತರ್ಕರಹಿತವಾಗಿ ಶಿಫಾರಸು ಮಾಡಿದ ಬ್ರಾಂಡೆಡ್‌ ಔಷಧಿಗಳಿಗೆ ಗ್ರಾಹಕರು ಹೆಚ್ಚು ಹಣ ಪಾವತಿಸಬೇಕಾದ ಸ್ಥಿತಿಗೆ ಇದು ಕಾರಣವಾಗುತ್ತದೆ.

  • ಇಂತಹ ಔಷಧ ಮತ್ತು ಮದ್ದು ಜನರ ಜೀವನ ಮತ್ತು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಸೂಕ್ತ ಔಷಧ ನೀಡದೇ ಇರುವುದಕ್ಕೆ ವೈದ್ಯರನ್ನು ಶಿಕ್ಷಿಸಬಹುದಾದರೂ ಔಷಧ ಕಂಪೆನಿಗಳು ಪರಿಶೀಲನೆಯಿಂದ ತಪ್ಪಿಸಿಕೊಳ್ಳುತ್ತವೆ.

  • ಯುಸಿಪಿಎಂಪಿಗೆ ಶಾಸನಬದ್ಧ ಮಾನ್ಯತೆ ನೀಡಲು ಮತ್ತು ಆ ಮೂಲಕ ಅದನ್ನು ಪರಿಣಾಮಕಾರಿಯಾಗಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು.

  • ಉನ್ನತ ನ್ಯಾಯಾಲಯ ಕೂಡ ಇಂತಹ ಮಾರ್ಗಸೂಚಿಗಳನ್ನು ನೀಡಬಹುದು ಇಲ್ಲವೇ ತನಗೆ ಸೂಕ್ತವಾಗಿ ಕಾಣುವ ರೀತಿಯಲ್ಲಿ ಯುಸಿಪಿಎಂಪಿ ನಿಯಮಗಳನ್ನು ಸರಿಹೊಂದಿಸಬಹುದು ಎಂದು ಅರ್ಜಿ ಕೋರಿದೆ.

Related Stories

No stories found.
Kannada Bar & Bench
kannada.barandbench.com