ಸರ್ಕಾರಿ ಜಾಹೀರಾತು: ಮದ್ರಾಸ್ ಹೈಕೋರ್ಟ್ ವಿಧಿಸಿರುವ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಸುಂದರ್ ಮೋಹನ್ ಅವರಿದ್ದ ಹೈಕೋರ್ಟ್ ಪೀಠ ಜುಲೈ 31ರಂದು ಮಧ್ಯಂತರ ಆದೇಶ ನೀಡಿತ್ತು.
Madras High Court and Supreme Court
Madras High Court and Supreme Court
Published on

ಸರ್ಕಾರದ ಕಲ್ಯಾಣ ಯೋಜನೆಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಯಾವುದೇ ಜೀವಂತ ವ್ಯಕ್ತಿಯ ಹೆಸರು, ಮಾಜಿ ಮುಖ್ಯಮಂತ್ರಿಗಳು ಮತ್ತು ಸೈದ್ಧಾಂತಿಕ ನಾಯಕರ ಛಾಯಾಚಿತ್ರ ಅಥವಾ ಪಕ್ಷಗಳ ಚಿಹ್ನೆ ಪ್ರದರ್ಶಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ನಿಷೇಧ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರಿದ್ದ ಪೀಠದೆದುರು ಇಂದು ಪ್ರಕರಣ ಪ್ರಸ್ತಾಪಿಸಿದಾಗ ಆಗಸ್ಟ್ 6 ಬುಧವಾರದಂದು ವಿಚಾರಣೆ ನಡೆಸಲು ಪೀಠ ಸಮ್ಮತಿಸಿತು.

Also Read
ಸರ್ಕಾರಿ ಜಾಹೀರಾತು: ಜೀವಂತ ವ್ಯಕ್ತಿಯ ಹೆಸರು, ಮಾಜಿ ಸಿಎಂಗಳ ಫೋಟೋ, ಪಕ್ಷದ ಚಿಹ್ನೆ ಬಳಕೆಗೆ ಮದ್ರಾಸ್ ಹೈಕೋರ್ಟ್ ನಿಷೇಧ

ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದರು. " ಇದು ತುಂಬಾ ಅಸಾಮಾನ್ಯ ಮತ್ತು ತುರ್ತು ಪ್ರಕರಣ. ಸರ್ಕಾರದ ಯಾವುದೇ ಯೋಜನೆಯಲ್ಲಿ ಮುಖ್ಯಮಂತ್ರಿ ಅಥವಾ ಯಾವುದೇ ರಾಜಕೀಯ ವ್ಯಕ್ತಿಯ ಹೆಸರು ಪ್ರಸ್ತಾಪಿಸುವಂತಿಲ್ಲ (ಎಂಬುದರ ಕುರಿತಾದದ್ದು)" ಎಂದು ಅವರು ಹೇಳಿದರು.

ಸರ್ಕಾರ ಜಾರಿಗೆ ತಂದ ಸಾಮಾಜಿಕ ಸವಲತ್ತಿನ ಯೋಜನೆಗಳಿಗೆ ಆ ಹೆಸರುಗಳನ್ನು ಬಳಸುವುದಕ್ಕೆ ಏಕೆ ನಿಷೇಧ ಹೇರಬೇಕು ಎಂದು ಅವರು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಕಲ್ಯಾಣ ಕಾರ್ಯಕ್ರಮಗಳಿಗೆ ಜೀವಂತ ರಾಜಕೀಯ ವ್ಯಕ್ತಿಗಳ ಹೆಸರಿಡುವುದನ್ನು ಅಥವಾ ಅವರ ಫೋಟೋಗಳನ್ನು ಹಾಗೂ ಪ್ರಚಾರ ಸಾಮಗ್ರಿಗಳಲ್ಲಿ ಪಕ್ಷದ ಲಾಂಛನ ಅಥವಾ ಚಿಹ್ನೆಗಳನ್ನು ಬಳಸುವುದನ್ನು ತಡೆಯುವಂತೆ ಕೋರಿ ಎಐಎಡಿಎಂಕೆ ಸಂಸದ ಸಿ ವಿ ಷಣ್ಮುಗಂ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಸುಂದರ್ ಮೋಹನ್ ಅವರಿದ್ದ ಹೈಕೋರ್ಟ್‌ ಪೀಠ ಜುಲೈ  31ರಂದು ನಿಷೇಧ ಆದೇಶ ನೀಡಿತ್ತು.

ಸುಪ್ರೀಂ ಕೋರ್ಟ್ ಮಾರ್ಗಸೂಚಿ ಮತ್ತು 2014 ರ ಸರ್ಕಾರಿ ಜಾಹೀರಾತು (ವಸ್ತುವಿಷಯ ನಿಯಂತ್ರಣ) ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಹಾಲಿ ಮುಖ್ಯಮಂತ್ರಿಯ ಹೆಸರು, ಸೈದ್ಧಾಂತಿಕ ನಾಯಕರ ಚಿತ್ರಗಳು ಮತ್ತು ಆಡಳಿತ ಪಕ್ಷದ ಚಿಹ್ನೆಗಳನ್ನು ಬಳಸಿಕೊಂಡು ಹೊಸ ಯೋಜನೆ ಪ್ರಾರಂಭಿಸಲಾಗುತ್ತಿದೆ ಎಂದು ಅರ್ಜಿದಾರರು ಉಚ್ಚ ನ್ಯಾಯಾಲಯದಲ್ಲಿ ದೂರಿದ್ದರು.

Also Read
ದಾರಿತಪ್ಪಿಸುವ ಜಾಹೀರಾತು ಪ್ರಕರಣ: ದಿವ್ಯಾ ಫಾರ್ಮಸಿ, ಆಚಾರ್ಯ ಬಾಲಕೃಷ್ಣ ವಿರುದ್ಧದ ತನಿಖೆಗೆ ತಡೆ

ಕರ್ನಾಟಕ ಸರ್ಕಾರ ಮತ್ತು ಕಾಮನ್ ಕಾಸ್ ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ, ಹಾಲಿ ಮುಖ್ಯಮಂತ್ರಿಯ ಛಾಯಾಚಿತ್ರ ಪ್ರಕಟಿಸಲು ಅನುಮತಿ ಇದೆಯಾದರೂ  ಸೈದ್ಧಾಂತಿಕ ನಾಯಕರು ಅಥವಾ ಮಾಜಿ ಮುಖ್ಯಮಂತ್ರಿಗಳ ಚಿತ್ರಗಳನ್ನು ಬಳಸುವುದು ಪ್ರಾಥಮಿಕವಾಗಿ ನ್ಯಾಯಾಲಯದ ನಿರ್ದೇಶನಗಳಿಗೆ ವಿರುದ್ಧ ಎಂದು ಹೈಕೋರ್ಟ್‌ ಹೇಳಿತ್ತು.

ಸರ್ಕಾರಿ ಯೋಜನೆಯ ಜಾಹೀರಾತಿನಲ್ಲಿ ರಾಜಕೀಯ ವ್ಯಕ್ತಿಗಳ ಹೆಸರು ಸೇರಿಸಲು ಅವಕಾಶವಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.

Kannada Bar & Bench
kannada.barandbench.com