ಒಂದು ವರ್ಷ ಮೀರಿ ಬಂಧನ ವಿಸ್ತರಿಸಬಹುದೇ? ಮೆಹಬೂಬಾ ಮುಫ್ತಿ ಪ್ರಕರಣದಲ್ಲಿ ಕೇಂದ್ರವನ್ನು ಪ್ರಶ್ನಿಸಿದ ಸುಪ್ರೀಂ

‘ಜೈಲುಗಳಲ್ಲಿರುವ ವ್ಯಕ್ತಿಗಳಿಗೂ ಕೂಡ ತಮ್ಮ ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ಇರುತ್ತದೆ’ ಎಂದು ಮುಫ್ತಿ ಅವರ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲೆ ನಿತ್ಯಾ ರಾಮಕೃಷ್ಣನ್ ಪ್ರತಿಪಾದಿಸಿದರು.
ಸುಪ್ರೀಂಕೋರ್ಟ್, ಮೆಹಬೂಬಾ ಮುಫ್ತಿ
ಸುಪ್ರೀಂಕೋರ್ಟ್, ಮೆಹಬೂಬಾ ಮುಫ್ತಿ
Published on

ಕಳೆದ ವರ್ಷ ಆಗಸ್ಟ್ 5 ರಿಂದ ಬಂಧನಕ್ಕೊಳಗಾಗಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಬಂಧನವನ್ನು ಎಷ್ಟು ಅವಧಿಯವರೆಗೆ ವಿಸ್ತರಿಸಲು ಬಯಸಿದೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಒಂದು ವರ್ಷಕ್ಕೂ ಮಿಕ್ಕಿ ಮುಫ್ತಿ ಅವರ ಬಂಧನ ಅವಧಿಯನ್ನು ವಿಸ್ತರಿಸಬಹುದೇ ಎಂದು ಕೂಡ ಕೋರ್ಟ್ ಕೇಳಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್

ಮುಫ್ತಿ ಅವರ ಬಂಧನ ಪ್ರಶ್ನಿಸಿ, 1978ರ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಅವರ ಮಗಳು ಇಲ್ತಿಜಾ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠ ನಡೆಸಿತು.

Also Read
ಸೈಬರ್ ದಾಳಿ ಭೀತಿ, ಬಡ ವಿದ್ಯಾರ್ಥಿಗಳಿಗೂ ಫಜೀತಿ: ವರ್ಚುವಲ್ ತರಗತಿಗಳ ಸ್ಥಗಿತಕ್ಕೆ ‘ಸುಪ್ರೀಂ’ಗೆ ಮೊರೆ

ಮುಫ್ತಿ ಅವರು ಬಂಧನದಲ್ಲಿದ್ದಾಗ ಜನರನ್ನು ಭೇಟಿಯಾಗಲು ನ್ಯಾಯಾಲಯ ಅನುಮತಿ ನೀಡಬೇಕು ಎಂದು ಹಿರಿಯ ವಕೀಲೆ ನಿತ್ಯಾ ರಾಮಕೃಷ್ಣ ಇದೇ ಸಂದರ್ಭದಲ್ಲಿ ಕೋರಿದರು. "ಜೈಲುಗಳಲ್ಲಿರುವ ಜನರಿಗೆ ಸಹ ಅವರ ಕುಟುಂಬಗಳನ್ನು ಭೇಟಿ ಮಾಡಲು ಅವಕಾಶವಿದೆ" ಎಂದು ಅವರು ವಾದ ಮಂಡಿಸಿದರು.

Also Read
ಭೂಷಣ್‌ರನ್ನು ಶಿಕ್ಷಿಸುವ ಮೂಲಕ ಅವರನ್ನು ಹುತಾತ್ಮರನ್ನಾಗಿಸಬೇಡಿ - ಧವನ್; ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ಈ ಅಂಶದ ಕುರಿತು ಆದೇಶ ನೀಡಲು ಒಲವು ತೋರದ ನ್ಯಾಯಾಲಯ, ಭೇಟಿ ಮತ್ತು ಸಭೆಗಳ ಕೋರಿಕೆ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಪ್ರಸ್ತಾವನೆ ಸಲ್ಲಿಸಬಹುದು ಎಂದಿತು.

ದೀರ್ಘಕಾಲದವರೆಗೆ ಮುಫ್ತಿ ಅವರನ್ನು ಬಂಧನದಲ್ಲಿಡಲು ಯಾವ ಕಾರಣಗಳಿವೆ ಎಂದು ನ್ಯಾಯಾಲಯ ಪ್ರಶ್ನಿಸಿತು. "ಸಾಮಾಜಿಕ ಸುವ್ಯವಸ್ಥೆಯ ಆಧಾರದ ಮೇಲೆ," ಎಂದು ಮೆಹ್ತಾ ಪ್ರತಿಕ್ರಿಯೆ ನೀಡಿದರು.

ಕಳೆದ ವರ್ಷ ಇಲ್ತಿಜಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ ಎಂದು ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಯಿತು.

ಪ್ರತಿಕ್ರಿಯೆ ಪ್ರತಿ ಇನ್ನೂ ನ್ಯಾಯಾಲಯಕ್ಕೆ ಸಿಗದೇ ಇದ್ದುದರಿಂದ ಪ್ರತಿಕ್ರಿಯೆಯನ್ನು ಪರಿಶೀಲಿಸಿ ನಂತರ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಕೋರ್ಟ್ ಹೇಳಿತು.

ಕೋರ್ಟ್ ಅಕ್ಟೋಬರ್ 15ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.

Kannada Bar & Bench
kannada.barandbench.com