ಅಪರಾಧಿಯ ಶಿಕ್ಷೆ ಮೊಟಕು ಅಥವಾ ಅವಧಿಪೂರ್ವ ಬಿಡುಗಡೆಯ ಅರ್ಜಿಯನ್ನು ಅಪರಾಧ ನಿಜವಾಗಿ ನಡೆದಿದ್ದ ರಾಜ್ಯದಲ್ಲಿನ ನೀತಿಗೆ ಅನುಗುಣವಾಗಿ ಪರಿಗಣಿಸಬೇಕೇ ವಿನಾ ವಿಚಾರಣೆ ವರ್ಗವಾದ ಮತ್ತು ಅದನ್ನು ಮುಕ್ತಾಯಗೊಳಿಸಿದ ರಾಜ್ಯದ ನೀತಿಯ ಅನುಸಾರ ಅಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ. [ರಾಧೇಶ್ಯಾಮ್ ಭಗವಾಂದಾಸ್ ಶಾ ಅಲಿಯಾಸ್ ಲಾಲಾ ವಕೀಲ್ ಮತ್ತು ಗುಜರಾತ್ ಇನ್ನಿತರರ ನಡುವಣ ಪ್ರಕರಣ].
ಸಿಆರ್‌ಪಿಸಿ ಸೆಕ್ಷನ್ 432 (7)ರ ಪ್ರಕಾರ ಶಿಕ್ಷೆ ಹಿಂಪಡೆಯುವ ಅಧಿಕಾರ ಕೇಂದ್ರ ಅಥವಾ ರಾಜ್ಯ ಸರ್ಕಾರದ ಕೈಯಲ್ಲಿದೆ. ಆದರೆ ಎರಡು ರಾಜ್ಯ ಸರ್ಕಾರಗಳ ಏಕಕಾಲೀನ ಅಧಿಕಾರ ವ್ಯಾಪ್ತಿಯಡಿ ಅದು ಇಲ್ಲ ಎಂದು ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ವಿಕ್ರಮ್ ನಾಥ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.
ಜುಲೈ 9, 1992ರ ನೀತಿಯ ಅಡಿಯಲ್ಲಿ ಅವಧಿಪೂರ್ವ ಬಿಡುಗಡೆಗಾಗಿ ತನ್ನ ಅರ್ಜಿ ಪರಿಗಣಿಸಲು ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಖೈದಿಯೊಬ್ಬ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಅರ್ಜಿದಾರ ಐಪಿಸಿ ಸೆಕ್ಷನ್ ಸೆಕ್ಷನ್ 149 ಸವಾಚನ ಸೆಕ್ಷನ್ 302 (2)(ಇ)(ಜಿ) ಅಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. 2004ರಲ್ಲಿ ಗುಜರಾತ್‌ನಲ್ಲಿ ಅಪರಾಧ ನಡೆದಿತ್ತು. 15 ವರ್ಷ 4 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ತನ್ನನ್ನು ಸಿಆರ್‌ಪಿಸಿ ಸೆಕ್ಷನ್ 433 ಮತ್ತು 433 ಎ ಅಡಿಯಲ್ಲಿ ಜೀವಾವಧಿ ಶಿಕ್ಷೆಯ ಗಡುವು ಮುಗಿಯುವ ಮುನ್ನವೇ ಬಿಡುಗಡೆ ಮಾಡುವಂತೆ ಕೋರಿದ್ದರು.
ಆದರೆ ಮಹಾರಾಷ್ಟ್ರದಲ್ಲಿ ವಿಚಾರಣೆ ಮುಕ್ತಾಯಗೊಂಡಿರುವುದರಿಂದ ಅವಧಿಪೂರ್ವ ಬಿಡುಗಡೆ ಅರ್ಜಿಯನ್ನು ಮಹಾರಾಷ್ಟ್ರದಲ್ಲಿ ಸಲ್ಲಿಸಬೇಕೇ ಹೊರತು ಗುಜರಾತ್‌ನಲ್ಲಿ ಅಲ್ಲ ಎಂಬ ಕಾರಣಕ್ಕಾಗಿ ಗುಜರಾತ್ ಹೈಕೋರ್ಟ್‌ನಲ್ಲಿ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು.
ಅಪರಾಧ ಗುಜರಾತ್‌ನಲ್ಲಿ ನಡೆದಿದ್ದರಿಂದ ಅದೇ ರಾಜ್ಯದಲ್ಲಿ ವಿಚಾರಣೆ ಮುಕ್ತಾಯಗೊಳ್ಳಬೇಕಿತ್ತು. ಆಗ ಶಿಕ್ಷೆ ಕಡಿತ ಕುರಿತು ನಿರ್ಧಾರ ಕೈಗೊಳ್ಳುವ ಸೂಕ್ತ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇರುತ್ತಿತ್ತು. ಆದರೆ ಅಸಾಧಾರಣ ಸಂದರ್ಭಗಳಿಂದಾಗಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಹಾರಾಷ್ಟ್ರಕ್ಕೆ ವರ್ಗಾಯಿಸಿತ್ತು. ವಿಚಾರಣೆ ಪೂರ್ಣಗೊಂಡ ಬಳಿಕ ಮತ್ತೆ ಪ್ರಕರಣ ಗುಜರಾತ್‌ಗೆ ರವಾನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಪರಾಧ ಗುಜರಾತ್‌ನಲ್ಲಿ ನಡೆದಿರುವುದರಿಂದ ಗುಜರಾತ್ ಸರ್ಕಾರದ ನೀತಿಗೆ ಅನುಗುಣವಾಗಿ ಮನವಿ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿತು.
ಪರಿಣಾಮ ಅರ್ಜಿಪುರಸ್ಕರಿಸಿದ ನ್ಯಾಯಾಲಯ ಅವಧಿಪೂರ್ವ ಬಿಡುಗಡೆಗೆ ಸಲ್ಲಿಸಲಾದ ಅರ್ಜಿದಾರರ ಮನವಿ ಪರಿಗಣಿಸುವಂತೆ ಗುಜರಾತ್ ಸರ್ಕಾರಕ್ಕೆ ನಿರ್ದೇಶಿಸಿತು.