ಈಗ ಅಸ್ತಿತ್ವದಲ್ಲಿರುವ ಕೋಮುವಾದಿ ನಾಗರಿಕ ಸಂಹಿತೆ ಬದಲಿಗೆ ಭಾರತಕ್ಕೆ ಜಾತ್ಯತೀತ ನಾಗರಿಕ ಸಂಹಿತೆ ಅಗತ್ಯವಿದೆ ಎಂದು ಪ್ರಧಾನಿ ಮೋದಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದ್ದಾರೆ.
ಗುರುವಾರ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸುಪ್ರೀಂ ಕೋರ್ಟ್ ಪದೇ ಪದೇ ಕರೆ ನೀಡಿದೆ ಎಂದರು.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರೂ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಯುಸಿಸಿಯನ್ನು ಜಾತ್ಯತೀತ ನಾಗರಿಕ ಸಂಹಿತೆಯಾಗಿ ಜಾರಿಗೆ ತರಬೇಕಿದೆ ಎಂದು ಅವರು ಹೇಳಿದರು.
ಸಂವಿಧಾನ ರಚನೆಯ 75ನೇ ವರ್ಷಾಚರಣೆಯಲ್ಲಿರುವ ನಾವು ಇಂತಹ ಸಂಹಿತೆಯನ್ನು ಜಾರಿಗೆ ತರುವ ಮೂಲಕ ಸಂವಿಧಾನ ರೂಪಿಸಿದವರ ಆಶಯಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ ಎಂಬುದಾಗಿ ತಿಳಿಸಿದರು.
ಸಂವಿಧಾನದ 44 ನೇ ವಿಧಿಯು ದೇಶದ ಎಲ್ಲ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯ ಸುರಕ್ಷೆ ದೊರೆಯುವಂತಾಗಲು ಸರ್ಕಾರ ಯತ್ನಿಸಬೇಕು ಎನ್ನುತ್ತದೆ. ಈಚೆಗೆ ಉತ್ತರಾಖಂಡ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದಿತ್ತು.
ಆದರೆ ದೇಶಾದ್ಯಂತ ಇದನ್ನು ಜಾರಿಗೊಳಿಸುವುದು ಇನ್ನೂ ಸಾಧ್ಯವಾಗಿಲ್ಲ. ಬದಲಿಗೆ ಕೆಲವು ಸಮುದಾಯಗಳು ವೈಯಕ್ತಿಕ ಧಾರ್ಮಿಕ ಕಾನೂನುಗಳಿಂದ ನಿಯಂತ್ರಿತರಾಗಿದ್ದಾರೆ.
ಮದುವೆ, ವಿಚ್ಛೇದನ, ಆನುವಂಶಿಕವಾಗಿ ಪಡೆದ ಭೌತಿಕ ಆಸ್ತಿ, ಉತ್ತರಾಧಿಕಾರ, ಜೀವನಾಂಶ, ದತ್ತು ಮತ್ತು ಪಾಲಕತ್ವದ ವಿಷಯಗಳಲ್ಲಿ ವೈಯಕ್ತಿಕ ಧಾರ್ಮಿಕ ಕಾನೂನನ್ನು ಮೀರಿ ಯುಸಿಸಿ ಏಕರೂಪದ ಕಾನೂನುಗಳನ್ನು ಜಾರಿಗೆ ತರುವ ಉದ್ದೇಶ ಹೊಂದಿದೆ.
ಯುಸಿಸಿ ಬಗ್ಗೆ ಅನೇಕ ವರ್ಷಗಳಿಂದ ವಿವಾದ ಎದ್ದಿದ್ದು ಇದು ಸಮಾಜವನ್ನು ಧರ್ಮದ ಆಧಾರದಲ್ಲಿ ಧ್ರುವೀಕರಣಗೊಳಿಸುವ ಬಿಜೆಪಿ ಸರ್ಕಾರದ ಪ್ರಣಾಳಿಕೆಯ ಭಾಗ ಎಂದು ಬಿಂಬಿತವಾಗಿದೆ.
ಅಂತೆಯೇ ಪ್ರಧಾನಿ ಮೋದಿ ಅವರು ಜಾತ್ಯತೀತ ನಾಗರಿಕ ಸಂಹಿತೆ ಜಾರಿ ಗಂಭೀರವಾದ ವಿಷಯವಾಗಿದ್ದು, ತೀವ್ರ ಚರ್ಚೆಯ ಅಗತ್ಯವಿದೆ ಎಂದಿದ್ದಾರೆ.
ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಕಾನೂನುಗಳಿಗೆ ಆಧುನಿಕ ಕಾಲದಲ್ಲಿ ಯಾವುದೇ ಸ್ಥಾನ ಇಲ್ಲ. ಅದಕ್ಕಾಗಿಯೇ ಜಾತ್ಯತೀತ ನಾಗರಿಕ ಸಂಹಿತೆ ಹೊಂದಲು ಇದು ಸಕಾಲ. ಕೋಮು ನಾಗರಿಕ ಸಂಹಿತೆಯ ನಡುವೆ ನಾವು 75 ವರ್ಷಗಳನ್ನು ಕಳೆದಿದ್ದು ಧಾರ್ಮಿಕ ತಾರತಮ್ಯದಿಂದ ಜನ ಇನ್ನಾದರೂ ದೂರವಾಗಲಿದ್ದಾರೆ ಎಂದು ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದರು.
ಸುಪ್ರೀಂ ಕೋರ್ಟ್, ಮಧ್ಯಪ್ರದೇಶ ಹೈಕೋರ್ಟ್, ಅಲಹಾಬಾದ್ ಹೈಕೋರ್ಟ್, ದೆಹಲಿ ಹೈಕೋರ್ಟ್, ಕೇರಳ ಹೈಕೋರ್ಟ್‌ಗಳು ವಿವಿಧ ಸಂದರ್ಭಗಳಲ್ಲಿ ಏಕರೂಪ ನಾಗರಿಕ ಸಂಹಿತೆಯ ಪರವಾಗಿ ಧ್ವನಿ ಎತ್ತಿದ ಉದಾಹರಣೆಗಳಿವೆ.
ಅಂತೆಯೇ ಸಂಹಿತೆ ಜಾರಿಗೆ ಅಪಸ್ವರಗಳೂ ಕೇಳಿ ಬಂದಿವೆ. ಜಾಮಿಯತ್ ಉಲಾಮಾ ಇ ಹಿಂದ್, ಡಿಎಂಕೆ ಪಕ್ಷಗಳು ನ್ಯಾಯಾಲಯದಲ್ಲಿ ಈ ಸಂಬಂಧ ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ನೆನೆಯಬಹುದು. ಮುಸ್ಲಿಮರನ್ನೇ ಗುರಿಯಾಗಿಸಿಕೊಂಡ ಯಾವುದೇ ಸಂಹಿತೆಯನ್ನು ತಾನು ಒಪ್ಪುವುದಿಲ್ಲ ಎಂದು ಜಾಮಿಯತ್ ಹೇಳಿದರೆ ನಾಗರಿಕ ಸಂಹಿತೆ ಜಾರಿ ದೇಶದ ವೈವಿಧ್ಯತೆಯನ್ನು ಹಾಳುಗೆಡವುತ್ತದೆ ಎಂದು ಡಿಎಂಕೆ ಪ್ರತಿಪಾದಿಸಿತ್ತು.