
ಜಾರಿ ನಿರ್ದೇಶನಾಲಯವು ವಶಕ್ಕೆ ಪಡೆದಿರುವ ದಾಖಲೆಗಳಲ್ಲಿ ತನಿಖೆ ಅಥವಾ ವಿಚಾರಣೆಗೆ ಅವಲಂಬಿಸದ ದಾಖಲೆಗಳ ಪ್ರತಿ ಪಡೆಯಲು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ 2002ರ ಅಡಿಯ ಆರೋಪಿಗಳು ಅರ್ಹರು ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ [ಸರಳಾ ಗುಪ್ತಾ ಮತ್ತಿತರರು ಹಾಗೂ ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].
ಸಂವಿಧಾನದ 21ನೇ ವಿಧಿಯಡಿಯಲ್ಲಿ ನ್ಯಾಯಯುತ ವಿಚಾರಣೆ ಆರೋಪಿಯ ಹಕ್ಕು ಎಂದು ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತೀರ್ಪು ನೀಡಿದೆ.
"ತನಿಖಾಧಿಕಾರಿ ಅವಲಂಬಿಸದೆ ಇರುವ ಹೇಳಿಕೆಗಳು, ದಾಖಲೆಗಳು, ಸಾಕ್ಷಗಳು, ವಸ್ತುಗಳು, ಪ್ರದರ್ಶಕಗಳ ಪಟ್ಟಿಯ ಪ್ರತಿಯನ್ನೂ ಆರೋಪಿಗೆ ಒದಗಿಸಬೇಕು" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತನಿಖಾಧಿಕಾರಿಯ ವಶದಲ್ಲಿರುವ, ಅವಲಂಬಿಸದ ದಾಖಲೆಗಳ ಬಗ್ಗೆ ಆರೋಪಿಗಳಿಗೆ ತಿಳಿದಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶ. ಸೂಕ್ತ ಹಂತದಲ್ಲಿ, ಆರೋಪಿಗಳು ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 91 ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಸೆಕ್ಷನ್ 94 ರ ಅಡಿಯಲ್ಲಿ ಅಂತಹ ದಾಖಲೆಗಳ ಪ್ರತಿಗಾಗಿ ಅರ್ಜಿ ಸಲ್ಲಿಸಬಹುದು. ಎಂದು ನ್ಯಾಯಾಲಯ ಹೇಳಿದೆ.
ತಮ್ಮನ್ನು ಸಮರ್ಥಿಸಿಕೊಳ್ಳುವ (ಡಿಫೆಂಡ್) ಹಕ್ಕನ್ನು ನ್ಯಾಯಯುತ ವಿಚಾರಣೆ ಒಳಗೊಂಡಿದೆ. ಸಾಕ್ಷಿಗಳನ್ನು ಪರೀಕ್ಷಿಸುವ ಮತ್ತು ದಾಖಲೆಗಳನ್ನು ಒದಗಿಸುವ ಮೂಲಕ ಡಿಫೆನ್ಸ್ ಸಾಕ್ಷ್ಯವನ್ನು ಮುನ್ನಡೆಸುವ ಹಕ್ಕನ್ನು ಇದು ಒಳಗೊಂಡಿದೆ. ಸಿಆರ್‌ಪಿಸಿಯ ಸೆಕ್ಷನ್ 233ರಲ್ಲಿ ತಿಳಿಸಿರುವಂತೆ, ಪ್ರಾಸಿಕ್ಯೂಷನ್ ಅಥವಾ ಮೂರನೇ ವ್ಯಕ್ತಿ ತಮ್ಮ ಸ್ವಾಧೀನದಲ್ಲಿರುವ ಅಥವಾ ವಶದಲ್ಲಿರುವ ದಾಖಲೆ ಅಥವಾ ಸಾಕ್ಷ್ಯವನ್ನು ಹಾಜರುಪಡಿಸುವಂತೆ ಒತ್ತಾಯಿಸುವುದಕ್ಕೂ ಈ ಹಕ್ಕು ವಿಸ್ತರಿಸುತ್ತದೆ ಎಂದು ನ್ಯಾಯಾಲಯ ವಿವರಿಸಿತು.
ವಿಚಾರಣೆ ವಿಳಂಬಗೊಳಿಸಲು, ನ್ಯಾಯದ ಉದ್ದೇಶ ಮಣಿಸಲು ಅಥವಾ ಕಿರಿಕಿರಿ ಉಂಟುಮಾಡುವುದಕ್ಕಾಗಿ ಈ ರೀತಿಯ ಮನವಿ ಮಾಡಿದ್ದಾಗ ಮಾತ್ರ ಸಿಆರ್‌ಪಿಸಿ ಸೆಕ್ಷನ್ 233 (3) ರಲ್ಲಿ ತಿಳಿಸಿರುವಂತೆ ವಿಚಾರಣಾ ನ್ಯಾಯಾಲಯಗಳು ಅಂತಹ ದಾಖಲೆಗಳನ್ನು ಹಂಚಿಕೊಳ್ಳುವ ಮನವಿಯನ್ನು ನಿರಾಕರಿಸಬಹುದು ಎಂದು ಪೀಠ ಸ್ಪಷ್ಟಪಡಿಸಿದೆ.
ಗಮನಾರ್ಹವಾಗಿ, ಆರೋಪಿಗಳು ಸಿಆರ್‌ಪಿಸಿಯ ಸೆಕ್ಷನ್ 311 ರ ಅಡಿಯಲ್ಲಿ ಅಂತಹ ದಾಖಲೆಗಳ ಆಧಾರದ ಮೇಲೆ ಆರೋಪಿಗಳು ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಮರಳಿ ಕರೆಸಿಕೊಳ್ಳಲು ಹಾಗೂ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. "ಎರಡೂ ಕಡೆಯ ಸಾಕ್ಷ್ಯಗಳು ಅಂತಿಮಗೊಂಡಿದ್ದರೂ ಸಹ ಈ ಹಕ್ಕನ್ನು ಚಲಾಯಿಸಬಹುದು " ಎಂದು ನ್ಯಾಯಾಲಯ ಹೇಳಿದೆ.