+ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೇರಳ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೇಶ್ ಕೊಡಿಯೇರಿ ಅವರನ್ನು ಆರೋಪ ಮುಕ್ತಗೊಳಿಲು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಈಚೆಗೆ ನಿರಾಕರಿಸಿದೆ. ಮಾದಕ ವಸ್ತು ಸೇವನೆ ಮತ್ತು ಅಕ್ರಮ ಮಾರಾಟಕ್ಕೆ ಬೆಂಬಲ ನೀಡಿದ ಆರೋಪವು ಅವರ ಮೇಲಿದೆ.
ಪ್ರಕರಣದಿಂದ ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ಕೋರಿ ಬಿನೇಶ್ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಚ್ ಎ ಮೋಹನ್ ಅವರು ವಜಾಗೊಳಿಸಿದ್ದಾರೆ.
“ಆರೋಪಿ ಬಿನೇಶ್ ಅವರು ಅನೂಪ್ ಅವರ ಮೂಲಕ ಅಕ್ರಮ ಉದ್ಯಮ ನಡೆಸಲು ಹೂಡಿಕೆ ಮಾಡಿರಬಹುದು ಎಂಬ ಸಾಕ್ಷಿಗಳ ಹೇಳಿಕೆಯು ಗಂಭೀರ ಅನುಮಾನಕ್ಕೆ ಕಾರಣವಾಗಿದೆ. ಇಲ್ಲವಾದರೆ, ಬಿನೇಶ್ ಅವರು ಖಂಡಿತವಾಗಿಯೂ ಅನೂಪ್‌ಗೆ ನೀಡಿರುವ ರೂ. ₹40 ಲಕ್ಷವನ್ನು ವಾಪಸ್ ಪಡೆಯಲು ಪ್ರಯತ್ನ ಮಾಡಿರುತ್ತಿದ್ದರು. ಅಲ್ಲದೇ, ಅದಕ್ಕೆ ಸಂಬಂಧಿಸಿದ ದಾಖಲೆ ಇಟ್ಟುಕೊಂಡಿರುತ್ತಿದ್ದರು. ಬಿನೇಶ್ ಅವರು ಕೊಕೇನ್ ಸೇವನೆ ಮಾಡುತ್ತಿದ್ದರು ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಗಣಿಸಿದರೆ ಬಿನೇಶ್ ಬಗ್ಗೆ ಗಂಭೀರ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಆರೋಪಿಯು ಎನ್‌ಡಿಪಿಎಸ್ ಕಾಯಿದೆ ಅಡಿ ಆರೋಪಿಯಲ್ಲ ಅಂದ ಮಾತ್ರಕ್ಕೆ ಪಿಎಂಎಲ್‌ಎ ಅಡಿ ಅವರನ್ನು ಆರೋಪಿಯನ್ನಾಗಿಸಬಾರದು ಎಂದೇನಿಲ್ಲ. ಈ ನೆಲೆಯಲ್ಲಿ ಬಿನೇಶ್ ಅವರನ್ನು ಆರೋಪ ಮುಕ್ತಗೊಳಿಸಲು ಸೂಕ್ತ ಆಧಾರಗಳು ಇಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಿರಣ್ ಜವಳಿ ಅವರು “ಬಿನೇಶ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಒಂದರಿಂದ ಮೂರನೇ ಆರೋಪಿಗಳಾದ ಮೊಹಮ್ಮದ್ ಅನೂಪ್, ರಿಜೇಶ್ ರವೀಂದ್ರನ್ ಮತ್ತು ಅನಿಕಾ ಡಿ ಅವರ ವಿರುದ್ಧ ಎನ್‌ಡಿಪಿಎಸ್ ಕಾಯಿದೆ ಅಡಿ ದಾಖಲಿಸಿರುವ ಪ್ರಕರಣದ ಬಗ್ಗೆ ತನಗೆ ತಕರಾರಿಲ್ಲ. ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್ 50(2) ಮತ್ತು (3) ಅಡಿ ಮೊಹಮ್ಮದ್ ಅನೂಪ್ ಬಂಧನ ಮತ್ತು ಅವರ ಹೇಳಿಕೆಯ ಬಗ್ಗೆಯೂ ಆಕ್ಷೇಪವಿಲ್ಲ. ಆದರೆ, ಆರೋಪಿತ ಅಪರಾಧಕ್ಕೂ ಬಿನೇಶ್‌ಗೂ ಯಾವುದೇ ಸಂಬಂಧವಿಲ್ಲ. ಬಿನೇಶ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಲು ಯಾವುದೇ ಸಾಕ್ಷಿ ಲಭ್ಯವಾಗಿಲ್ಲ” ಎಂದು ಹೇಳಿದ್ದಾರೆ.
“ಬಿನೇಶ್ ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಆರಂಭಿಸಿ, ಉದ್ಯಮ ನಡೆಸುತ್ತಿದ್ದಾರೆ. ಅನೂಪ್‌ಗೆ ಹಣ ಸಾಲ ನೀಡಿದರು ಎಂದ ಮಾತ್ರಕ್ಕೆ ಅಪರಾಧಕ್ಕೆ ಕೈಜೋಡಿಸಿದ್ದಾರೆ ಎಂದಲ್ಲ. ಎನ್‌ಡಿಪಿಎಸ್ ಕಾಯಿದೆ ಅಡಿ ಅಪರಾಧದಲ್ಲಿ ಭಾಗಿಯಾಗಲು ಅನೂಪ್‌ಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನೆರವಾಗಿಲ್ಲ. ಬಿನೇಶ್ ನೀಡಿರುವ ಸಾಲವನ್ನು ಅನೂಪ್ ಅಪರಾಧಕ್ಕೆ ಬಳಸಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ದಾಖಲೆಗಳು ಇಲ್ಲ. ಎನ್‌ಡಿಪಿಎಸ್ ಪ್ರಕರಣದಲ್ಲಿ ಬಿನೇಶ್ ಆರೋಪಿಯಲ್ಲ. ಹೀಗಾಗಿ, ಬಿನೇಶ್ ವಿರುದ್ಧ ಪಿಎಂಎಲ್‌ಎ ಕಾಯಿದೆ ಸೆಕ್ಷನ್ 3ರ ಅಡಿ ಆರೋಪ ನಿಗದಿ ಮಾಡಿ, ಸೆಕ್ಷನ್ 4ರ ಅಡಿ ಶಿಕ್ಷೆ ವಿಧಿಸಲು ಯಾವುದೇ ಸಾಕ್ಷಿಗಳು ಇಲ್ಲ. ಹೀಗಾಗಿ, ಬಿನೇಶ್ ಖುಲಾಸೆಗೊಳಿಸಬೇಕು” ಎಂದು ಕೋರಿದ್ದರು.
“ಅನೂಪ್‌ಗೆ ಬ್ಯಾಂಕ್ ಮೂಲಕ ಮತ್ತು ನಗದಿನ ರೂಪದಲ್ಲಿ ಬಿನೇಶ್ ಹಣ ನೀಡಿದ್ದಾರೆ. ಅನೂಪ್‌ಗೆ ಬಿನೇಶ್ ಸಾಲ ನೀಡಿರುವುದು ಪಿಎಂಎಲ್‌ಎ ಸೆಕ್ಷನ್ 3ರ ಅಡಿ ಅಪರಾಧವೇ? ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕಿದೆ. ಯಾವುದೇ ದೃಷ್ಟಿಯಿಂದ ನೋಡಿದರೂ ಇದು ಸೆಕ್ಷನ್ 3ರ ಅಡಿ ಅಪರಾಧ ಎನಿಸುವುದಿಲ್ಲ. ಬಿನೇಶ್ ವಿರುದ್ಧ ಹೂಡಿರುವ ಪ್ರಕರಣಕ್ಕೆ ಕಾನೂನಿನ ಅಡಿ ನಿಲ್ಲುವುದಿಲ್ಲ. ಇದು ದೃಢೀಕೃತ ಅಪರಾಧವಲ್ಲ (ಪ್ರೆಡಿಕೇಟ್). ಹೀಗಾಗಿ, ಅರ್ಜಿ ಪುರಸ್ಕರಿಸಬೇಕು” ಎಂದು ಕೋರಿದ್ದರು.
ಇದಕ್ಕೆ ಪ್ರಾಸಿಕ್ಯೂಷನ್ ಆಕ್ಷೇಪಿಸಿದ್ದು, “ಮೂಲಗಳ ಮಾಹಿತಿ ಆಧರಿಸಿ ಮೊಹಮ್ಮದ್ ಅನೂಪ್ ಮತ್ತು ರಿಜೇಶ್ ರವೀಂದ್ರನ್ ಬಳಿ ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ. ಮೊದಲಿಗೆ ಅನೂಪ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಆತನ ಹೇಳಿಕೆ ಆಧರಿಸಿ ರಿಜೇಶ್ ಮತ್ತು ಅನಿಕಾ ಅವರನ್ನು ಬಂಧಿಸಿ, ಅವರಿಂದಲೂ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ವಾದಿಸಿದ್ದರು.
“ಅನೂಪ್ ತನ್ನ ಹೇಳಿಕೆಯಲ್ಲಿ ಬಿನೇಶ್ ಅವರಿಂದ ಸಾಲ ಪಡೆದಿರುವುದಾಗಿ ಹೇಳಿದ್ದಾರೆ. ಹೀಗಾಗಿ, ಬಿನೇಶ್ ಅವರು ಅನೂಪ್ ಎನ್‌ಡಿಪಿಎಸ್ ಕಾಯಿದೆ ಅಡಿ ಅಪರಾಧ ಎಸಗಲು ಸಹಾಯ ಮಾಡಿರುವುದು ಸ್ಪಷ್ಟವಾಗಿದೆ. ಉದ್ಯಮ ನಡೆಸಲು ಬಿನೇಶ್ ಅವರು ಅನೂಪ್‌ಗೆ ಸಾಲ ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆ ಇಲ್ಲ. ಈ ಸಾಲದ ವಿಚಾರವು ಬಿನೇಶ್ ಆದಾಯ ತೆರಿಗೆಯ ದಾಖಲೆಯಲ್ಲಿ ಉಲ್ಲೇಖವಾಗಿಲ್ಲ. ಪಿಎಂಎಲ್‌ಎ ಕಾಯಿದೆ ಸೆಕ್ಷನ್ 3ರ ಅಡಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾರಾದರೂ ಅಪರಾಧಕ್ಕೆ ನೆರವು ನೀಡಿದರೆ ಪಿಎಂಎಲ್‌ಎ ಸೆಕ್ಷನ್ 4ರ ಅಡಿ ಶಿಕ್ಷಾರ್ಹ ಅಪರಾಧ. ಯಾವ ಕಾರಣಕ್ಕಾಗಿ ಅನೂಪ್‌ಗೆ ಸಾಲ ನೀಡಲಾಗಿದೆ ಎಂದು ಬಿನೇಶ್ ಸ್ಪಷ್ಟಪಡಿಸಲು ವಿಫಲರಾಗಿದ್ದಾರೆ. ಅನೂಪ್ ಬಳಿ ಎಂಡಿಎಂಎ ಮಾತ್ರೆಗಳು ದೊರೆತಿದ್ದು, ಬಿನೇಶ್‌ಗೆ ಸೇರಿದ ಸ್ಥಳದಲ್ಲಿ ಆತನನ್ನು ಬಂಧಿಸಲಾಗಿದೆ. ಇದರಿಂದ ಬಿನೇಶ್ ಅವರ ಮೇಲೆ ಪ್ರಕರಣ ದಾಖಲಿಸಲು ಮೇಲ್ನೋಟಕ್ಕೆ ದಾಖಲೆಗಳು ಇವೆ ಎಂಬುದು ಸ್ಪಷ್ಟವಾಗಿದೆ. ಪಿಎಂಎಲ್‌ಎ ಕಾಯಿದೆ ಸೆಕ್ಷನ್ 3 ಮತ್ತು 4ರ ಅಡಿ ಅವರ ವಿರುದ್ಧ ಆರೋಪ ನಿಗದಿ ಮಾಡಲು ದಾಖಲೆಗಳು ಇವೆ. ಹೀಗಾಗಿ, ಅರ್ಜಿ ವಜಾ ಮಾಡಬೇಕು" ಎಂದು ಕೋರಿದ್ದರು.
ಅನೂಪ್ ಅವರು ಬಿನೇಶ್‌ರಿಂದ ಸಾಲ ಪಡೆದಿರುವುದು ಅಪರಾಧಕ್ಕೆ ನಾಂದಿ ಹಾಡಿದೆ ಎಂದು ಸಾಬೀತುಪಡಿಸಲು ನೇರ ಸಾಕ್ಷಿ ಇಲ್ಲದಿದ್ದರೂ ಬಿನೇಶ್ ಸಮಾಧಾನಕರ ಉತ್ತರ ನೀಡಲು ವಿಫಲರಾಗಿದ್ದಾರೆ. ಏತಕ್ಕಾಗಿ ಮತ್ತು ಯಾವ ಉದ್ದೇಶಕ್ಕಾಗಿ ಸಾಲ ನೀಡಲಾಗಿದೆ ಎಂದು ಹೇಳಿಲ್ಲ. ಬಿನೇಶ್ ಸ್ಥಳದಲ್ಲಿ ಅನೂಪ್ ಬಂಧನವಾಗಿದ್ದು, ಅವರ ಬಳಿ ಎಂಡಿಎಂಎ ಮಾತ್ರೆ ದೊರೆತಿವೆ. ಹಣ ಬಳಸಿ ಅನೂಪ್ ಮಾದಕ ವಸ್ತು ಪೂರೈಸಲು ಹಣ ಬಳಕೆ ಮಾಡುತ್ತಿರುವ ವಿಚಾರ ಬಿನೇಶ್‌ಗೆ ತಿಳಿದಿತ್ತು. ಮಾದಕ ವಸ್ತು ಖರೀದಿ ಮತ್ತು ಪೂರೈಸಲು ಅನೂಪ್‌ಗೆ ಬಿನೇಶ್ ನೇರವಾಗಿ ಸಹಕರಿಸಿದ್ದಾರೆ ಎಂಬುದನ್ನು ಇದು ತೋರುತ್ತದೆ. ಎಲ್ಲರೂ ಜೊತೆಗೂಡಿ ಈ ಗಂಭೀರ ಅಪರಾಧ ಎಸಗಿರುವುದರಿಂದ ಪಿಎಂಎಲ್‌ಎ 3 ಮತ್ತು 4ರ ಅಡಿ ಆರೋಪ ನಿಗದಿಪಡಿಸಲು ಇಷ್ಟು ಸಾಕಾಗಿದೆ ಎಂದು ವಾದಿಸಿದ್ದರು.
ಕೊಕೇನ್ ಸೇವನೆ: ಪಾರ್ಟಿಗಳಲ್ಲಿ ಅನೂಪ್ ಮತ್ತು ಬಿನೇಶ್ ಅವರು ಕೊಕೇನ್ ಸೇವನೆಯನ್ನು ನೋಡಿದ್ದೇನೆ ಎಂದು ಸುಹಾಸ್ ಕೃಷ್ಣೇಗೌಡ ಎಂಬವರು ಸಾಕ್ಷ್ಯ ನುಡಿದ್ದಾರೆ. ರಾಯಲ್ ಸೂಟ್ ಅಪಾರ್ಟ್‌ಮೆಂಟ್‌ನಲ್ಲಿ ಅನೂಪ್ ಜೊತೆಗೆ ಬಿನೇಶ್ ಕೊಕೇನ್ ಸೇವನೆ ಮಾಡುತ್ತಿರುವುದನ್ನು ನೋಡಿರುವುದಾಗಿ ಸೋನತ್ ಲೊಬೊ ಎಂಬವರು ಸಾಕ್ಷಿ ಹೇಳಿಕೆ ನೀಡಿದ್ದಾರೆ.