[ಪೋಕ್ಸೊ ಪ್ರಕರಣ] ಬಡ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಮುರುಘಾ ಶ್ರೀಗೆ ಜಾಮೀನು ನೀಡಬಾರದು: ಸರ್ಕಾರದ ವಿರೋಧ

ಶಿವಮೂರ್ತಿ ಶರಣರು ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಸೋಮವಾರ ಮುಂದುವರಿಸಿತು.
Karnataka HC and Shivamurthy Muruga Sharanaru
Karnataka HC and Shivamurthy Muruga Sharanaru
Published on

ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ತಮ್ಮ ಮಠದಲ್ಲಿನ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದುತ್ತಿದ್ದ ಮೂರು–ನಾಲ್ಕನೇ ತರಗತಿಯ ಬಡ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಅವರೊಬ್ಬ ಪ್ರಭಾವಿ ವ್ಯಕ್ತಿಯಾಗಿದ್ದು ಅವರಿಗೆ ಜಾಮೀನು ನೀಡಬಾರದು ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಶಿವಮೂರ್ತಿ ಶರಣರು ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಸೋಮವಾರ ಮುಂದುವರಿಸಿತು.

ವಿಚಾರಣೆ ವೇಳೆ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಸಂತ್ರಸ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ವೈದ್ಯಕೀಯ ವರದಿ ಹೇಳಿಲ್ಲ. ಇದು ಪೋಕ್ಸೊ ಪ್ರಕರಣವಾದ್ದರಿಂದ ಹಟಸಂಭೋಗ ನಡೆದಿದ್ದರೆ ಮಾತ್ರವೇ ಅಪರಾಧ ಎಂಬುದು ಇಲ್ಲಿ ಪರಿಗಣನಾರ್ಹವಲ್ಲ. ಸ್ವಾಮೀಜಿ ಮಕ್ಕಳನ್ನು ರಾತ್ರಿ ಊಟವಾದ ನಂತರ ತಮ್ಮ ಕೊಠಡಿಗೆ ಕರೆಸಿಕೊಂಡು ಲೈಂಗಿಕವಾಗಿ ಶೋಷಿಸುತ್ತಿದ್ದರು. ಸಂತ್ರಸ್ತ ಬಾಲಕಿಯರ ಖಾಸಗಿ ಅಂಗಾಂಗಳಿಗೆ ಕೈ ಹಾಕುತ್ತಿದ್ದರು ಎಂಬ ಅಂಶಗಳು ಮ್ಯಾಜಿಸ್ಟ್ರೇಟ್‌ ಮುಂದೆ ಬಾಲಕಿಯರು ನೀಡಿರುವ ತಮ್ಮ ಸ್ವಯಂ ಹೇಳಿಕೆಯಲ್ಲಿ ವ್ಯಕ್ತವಾಗಿವೆ” ಎಂದರು.

“ತನಿಖೆಯಲ್ಲಿ ಸ್ವಾಮೀಜಿ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದೊಂದು ಗಂಭೀರ ಮತ್ತು ಪ್ರಭಾವಿ ವ್ಯಕ್ತಿಯ ವಿರುದ್ಧದ ಕ್ರಿಮಿನಲ್‌ ಪ್ರಕರಣ. ಅವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ–2012ರ (ಪೋಕ್ಸೊ) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ” ಎಂದರು.

Also Read
ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ: ಅರ್ಜಿದಾರರ ಪರ ವಕೀಲರ ನಡೆಗೆ ಹೈಕೋರ್ಟ್‌ ಅಸಮಾಧಾನ

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಸ್ವಾಮೀಜಿ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರ ವಾದವನ್ನು ಪುಷ್ಟೀಕರಿಸಿತು, “ದೂರು ನೀಡುವ ಮುನ್ನ ಇಬ್ಬರೂ ಸಂತ್ರಸ್ತ ಬಾಲಕಿಯರು ಯಾರೂ ಜೊತೆ ಇಲ್ಲದೆ ಬೆಂಗಳೂರಿಗೆ ಹೇಗೆ ಬರಲು ಸಾಧ್ಯವಾಯಿತು? ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದಾಗಿದ್ದರೆ ಅವರೇಕೆ ತಮ್ಮ ಹಳ್ಳಿಗಳಿಗೆ ಹೋಗಲಿಲ್ಲ? ಪೋಷಕರನ್ನು ಯಾಕೆ ಭೇಟಿ ಮಾಡಲಿಲ್ಲ? ಮೈಸೂರಿಗೇ ಹೋಗಿ ಒಡನಾಡಿ ಸಂಸ್ಥೆಯ ಮುಖಾಂತರ ಏಕೆ ದೂರು ದಾಖಲಿಸಿದರು” ಎಂದು ಪ್ರಶ್ನಿಸಿತು. 

ದಿನದ ಕಲಾಪ ಮುಗಿದ ಕಾರಣ ವಿಚಾರಣೆಯನ್ನು ಮಂಗಳವಾರಕ್ಕೆ (ಅ.31) ಮುಂದೂಡಲಾಗಿದೆ. ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಅವರನ್ನು ಬಂಧಿಸಿದ್ದು, ಅಂದಿನಿಂದಲೂ ಅವರು ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Kannada Bar & Bench
kannada.barandbench.com