ಪೋಕ್ಸೊ ಕಾಯಿದೆ ಅಡಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ಜಾಮೀನು ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಮಂಗಳವಾರ ಆದೇಶ ಕಾಯ್ದಿರಿಸಿದೆ.
ಜಾಮೀನು ಕೋರಿ ಶಿವಮೂರ್ತಿ ಶರಣರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.
ಪ್ರತಿವಾದಿ ಒಡನಾಡಿ ಸೇವಾ ಸಂಸ್ಥೆ ಪರ ವಕೀಲ ಡಿ ಸಿ ಶ್ರೀನಿವಾಸ್ ಅವರು ಆರೋಪಿ ಶರಣರು ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ನೀಡಿದರೆ ಸಂತ್ರಸ್ತ ಬಡ ಮಕ್ಕಳಿಗೆ ಬೆದರಿಕೆ ಎದುರಾಗುವ ಸಾಧ್ಯತೆ ಇದೆ. ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿರುವ ಶರಣರ ನಡೆ ಮ್ಯಾಜಿಸ್ಟ್ರೇಟರ ಮುಂದೆ ಬಾಲಕಿಯರು ನೀಡಿರುವ ಹೇಳಿಕೆಯಲ್ಲಿ ಸಂಪೂರ್ಣ ಬಿಂಬಿತವಾಗಿದೆ. ನ್ಯಾಯಾಲಯವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರಿದರು.
ವಾದ–ಪ್ರತಿವಾದ ಆಲಿಸಿದ ಪೀಠವು ನವೆಂಬರ್ 8ರಂದು ಆದೇಶ ಪ್ರಕಟಿಸಲಾಗುವುದು ಎಂದು ಸಂಭಾವ್ಯ ದಿನಾಂಕವನ್ನು ನೀಡಿದೆ.
ಪ್ರಕರಣದ ಹಿನ್ನೆಲೆ: ಶಿವಮೂರ್ತಿ ಶರಣರ ವಿರುದ್ಧ ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ, ಭಾರತೀಯ ದಂಡ ಸಂಹಿತೆ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯಿದೆ ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು, ಚಿತ್ರದುರ್ಗದ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆಗಸ್ಟ್ 26ರಂದು ದೂರು ದಾಖಲಿಸಿದ ನಂತರ ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಲಾಗಿತ್ತು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.