[ಪೋಕ್ಸೊ] ಮುರುಘಾ ಶ್ರೀ ವಿರುದ್ಧದ ಸಾಕ್ಷ್ಯ ವಿಚಾರಣಾ ಪ್ರಕ್ರಿಯೆಗೆ ತಡೆ ಮುಂದುವರಿಕೆ; ಅರ್ಜಿಗಳ ಪ್ರತ್ಯೇಕಿಸಲು ಅಸ್ತು

ಮುರುಘಾ ಶ್ರೀ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸುವಾಗ ಶಾಸನ ಪಾಲನೆಯಾಗಿಲ್ಲ. ಆರೋಪ ಪಟ್ಟಿಯಲ್ಲಿ ಪ್ರಸ್ತಾಪಿಸಿರುವ ವಿಚಾರಗಳಿಗೆ ಪೂರಕವಾಗಿ ದಾಖಲೆಗಳನ್ನು ಒದಗಿಸಿಲ್ಲ ಎಂದು ಆಕ್ಷೇಪಿಸಿರುವ ಅರ್ಜಿದಾರರು.
Karnataka HC and Shivamurthy Muruga Sharanaru
Karnataka HC and Shivamurthy Muruga Sharanaru

ಪೋಕ್ಸೊ ಪ್ರಕರಣ ಮತ್ತು ಆ ಆರೋಪಕ್ಕೆ ಪೂರಕವಾಗಿ ವಿವಿಧ ಗುರುತರ ಅಪರಾಧಗಳ ಅಡಿ ಜೈಲಿನಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧ ಚಿತ್ರದುರ್ಗದ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಗಳ ಸಾಕ್ಷಿ ವಿಚಾರಣಾ ಪ್ರಕ್ರಿಯೆಗೆ ತಡೆ ಮುಂದುವರಿಸಿರುವ ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಿಚಾರಣೆಯನ್ನು ಮುಂದಿನ ಜುಲೈ 20ಕ್ಕೆ ಮುಂದೂಡಿದೆ.

ಚಿತ್ರದುರ್ಗದ ಮುರುಘಾ ಶರಣರು ಸಲ್ಲಿಸಿರುವ ನಾಲ್ಕು ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರ ಪರವಾಗಿ ಹಾಜರಾಗಿದ್ದ ವಕೀಲ ವಿ ಎಸ್‌ ಹೆಗ್ಡೆ ಅವರು ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧ ಚಿತ್ರದುರ್ಗದ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಗಳ ಸಾಕ್ಷಿ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಿರುವ ಅರ್ಜಿಗಳು ಮತ್ತು ಇನ್ನೊಂದು ಪ್ರಕರಣದಲ್ಲಿ ಅಂತಿಮ ಆರೋಪ ಪಟ್ಟಿಯಲ್ಲಿ ಬಸವರಾಜನ್‌ ಮತ್ತು ಅವರ ಪತ್ನಿ ಸೌಭಾಗ್ಯ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸದಿರುವುದನ್ನು ಪ್ರಶ್ನಿಸಿರುವ ಅರ್ಜಿಗಳನ್ನು ಒಟ್ಟಾಗಿ ಪಟ್ಟಿ ಮಾಡಲಾಗಿದೆ. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪ್ರತ್ಯೇಕಗೊಳಿಸಬೇಕು. ಹೀಗೆ ಮಾಡುವುದರಿಂದ ವಾದ ಮಂಡನೆಗೆ ಅನುಕೂಲವಾಗುತ್ತದೆ. ಇಂದು ಹಿರಿಯ ವಕೀಲರು ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕನಿಷ್ಠ 10 ದಿನಗಳ ಕಾಲ ಮುಂದೂಡಬೇಕು ಎಂದು ಕೋರಿದರು.

Also Read
ಮುರುಘಾ ಶರಣರ ವಿರುದ್ಧದ ಪೋಕ್ಸೊ ಪ್ರಕರಣ: ಒಂದು ವಾರ ವಿಚಾರಣೆ ಮುಂದೂಡಲು ವಿಚಾರಣಾಧೀನ ನ್ಯಾಯಾಲಯಕ್ಕೆ ಹೈಕೋರ್ಟ್‌ ಆದೇಶ

ರಾಜ್ಯ ಸರ್ಕಾರದ ಪರ ವಕೀಲರು “ವಿಶೇಷ ಸರ್ಕಾರಿ ಅಭಿಯೋಜಕರ ನೇಮಕಾತಿ ನಿನ್ನೆ ಆಗಿದೆ. ಹೀಗಾಗಿ, ಅರ್ಜಿಗಳ ವಿಚಾರಣೆಯನ್ನು ಮುಂದೂಡಬೇಕು” ಎಂದು ಕೋರಿದರು.

ಉಭಯ ಪಕ್ಷಕಾರರ ವಾದ ಆಲಿಸಿದ ಪೀಠವು ಅರ್ಜಿದಾರರ ಪರ ವಕೀಲರ ಕೋರಿಕೆಯಂತೆ ಅರ್ಜಿಗಳನ್ನು ಪ್ರತ್ಯೇಕಗೊಳಿಸಬೇಕು. ಮಧ್ಯಂತರ ತಡೆಯಾಜ್ಞೆ ಮುಂದುವರಿಯಲಿದ್ದು, ಜುಲೈ 20ರಂದು ವಿಚಾರಣೆ ನಡೆಸಲಾಗುವುದು ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು. ಅರ್ಜಿದಾರರ ಪರವಾಗಿ ವಕೀಲ ಕೆ ಬಿ ಕೆ ಸ್ವಾಮಿ ವಕಾಲತ್ತು ಹಾಕಿದ್ದಾರೆ.

Also Read
ಪೋಕ್ಸೊ ಪ್ರಕರಣ: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧದ ಸಾಕ್ಷ್ಯ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ಪ್ರಕರಣದ ಹಿನ್ನೆಲೆ: ಮೊದಲಿಗೆ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ 2022ರ ಆಗಸ್ಟ್‌ 26ರಂದು ದೂರು ದಾಖಲಿಸಿದ ನಂತರ ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಿದ್ದರು. ಆನಂತರ ಮುರುಘಾ ಮಠದಲ್ಲಿ ಅಡುಗೆ ಸಹಾಯಕಿಯಾಗಿದ್ದ ಮಹಿಳೆಯು ತನ್ನ ಇಬ್ಬರು ಪುತ್ರಿಯರಿಗೆ ಮುರುಘಾ ಶರಣರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮೈಸೂರಿನ ನಜರಾಬಾದ್‌ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೋಕ್ಸೊ, ಎಸ್‌ಸಿ/ಎಸ್‌ಟಿ ಕಾಯಿದೆ, ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com