ಹಣ ವಸೂಲಿ ಅಧಿಕಾರ ಪೊಲೀಸರಿಗೆ ಇಲ್ಲ; ಸಿವಿಲ್- ಕ್ರಿಮಿನಲ್ ತಪ್ಪುಗಳ ವ್ಯತ್ಯಾಸ ಕಡೆಗಣಿಸುತ್ತಿದ್ದಾರೆ: ಸುಪ್ರೀಂ ಕಿಡಿ

ಹಣ ಪಾವತಿಸದಿರುವುದು ಅಥವಾ ಒಪ್ಪಂದದ ಉಲ್ಲಂಘನೆ ಕ್ರಿಮಿನಲ್ ಅಪರಾಧಗಳಿಗಿಂತ ಭಿನ್ನವಾದ ಸಿವಿಲ್ ತಪ್ಪುಗಳಾಗಿವೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಹೇಳಿತು.
ಸುಪ್ರೀಂ ಕೋರ್ಟ್ ಮತ್ತು ಯುಪಿ ಪೊಲೀಸರು
ಸುಪ್ರೀಂ ಕೋರ್ಟ್ ಮತ್ತು ಯುಪಿ ಪೊಲೀಸರು

ಸಿವಿಲ್ ವಿಚಾರಣೆಗಳು ವಿಫಲವಾದ ನಂತರ ಹಣ ವಸೂಲಿ ಮಾಡಲು ಅಥವಾ ಸಿವಿಲ್ ನ್ಯಾಯಾಲಯವಾಗಿ ಕಾರ್ಯನಿರ್ವಹಿಸಲು ಪೊಲೀಸರಿಗೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಎಚ್ಚರಿಕೆ ನೀಡಿದೆ [ಲಲಿತ್ ಚತುರ್ವೇದಿ ಮತ್ತಿತರರು ಹಾಗೂ ಉತ್ತರಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಒಪ್ಪಂದದ ಉಲ್ಲಂಘನೆ ಮತ್ತು ಕ್ರಿಮಿನಲ್ ಅಪರಾಧಗಳ ನಡುವೆ ಸ್ಪಷ್ಟ ವ್ಯತ್ಯಾಸವಿದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ನುಡಿಯಿತು.

ಹಣವನ್ನು ಪಾವತಿಸದಿರುವುದು ಅಥವಾ ಒಪ್ಪಂದದ ಉಲ್ಲಂಘನೆ ಎಂಬುದು ಕ್ರಿಮಿನಲ್ ಅಪರಾಧಗಳಿಗಿಂತ ಭಿನ್ನವಾದ ಸಿವಿಲ್ ತಪ್ಪುಗಳಾಗಿವೆ ಎಂದು ನ್ಯಾಯಾಲಯ ಒತ್ತಿಹೇಳಿದೆ.

"ಅಪರಾಧ ಕೃತ್ಯವನ್ನು ಬಹಿರಂಗಪಡಿಸುವ ಆರೋಪಗಳ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು. ಹಣ ವಸೂಲಿ ಮಾಡಲು ಅಥವಾ ಸಿವಿಲ್ ನ್ಯಾಯಾಲಯವಾಗಿ ಕಾರ್ಯನಿರ್ವಹಿಸಲು ಪೊಲೀಸರಿಗೆ ಅಧಿಕಾರವಿಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು  ದೀಪಂಕರ್ ದತ್ತಾ. ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ. ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌.

ಆರೋಪಿಯ ವಿರುದ್ಧದ ಕ್ರಿಮಿನಲ್ ದೂರು ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣೆಗಳನ್ನು ರದ್ದುಗೊಳಿಸುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಆರೋಪಿ ಮತ್ತು ದೂರುದಾರರ ನಡುವಿನ ಒಪ್ಪಂದ ಮುರಿದುಬಿದ್ದ ನಂತರ ವಂಚನೆಯಷ್ಟೇ ಅಲ್ಲದೆ ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪವನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಲಾಗಿತ್ತಾದರೂ ಆರೋಪಿ ಪರವಾಗಿ ತೀರ್ಪು ಬಂದಿರಲಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಕ್ರಿಮಿನಲ್ ಮತ್ತು ಸಿವಿಲ್ ಅಪರಾಧಗಳನ್ನು ಪ್ರತ್ಯೇಕಿಸುವ ಬಗ್ಗೆ ತನ್ನ ತೀರ್ಪುಗಳನ್ನು ಅನ್ವಯಿಸುವ ಮತ್ತು ಜಾರಿಗೊಳಿಸದೆ ಕಡೆಗಣಿಸಲಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಬೇಸರ ವ್ಯಕ್ತಪಡಿಸಿತು.

ಹಣ ವಸೂಲಿ ಮಾಡಲು ಪೊಲೀಸ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಉದ್ದೇಶದಿಂದಷ್ಟೇ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಇಂತಹ ಪರೋಕ್ಷ ಉದ್ದೇಶಗಳಿಗಾಗಿ ಕ್ರಿಮಿನಲ್ ಪ್ರಕ್ರಿಯೆಯನ್ನು ಆರಂಭಿಸುವುದು ಕಾನೂನಿನಲ್ಲಿ ಕೆಟ್ಟದು ಎಂದಿತು. ಹೀಗಾಗಿ, ಹೈಕೋರ್ಟ್ ಆದೇಶ ಬದಿಗೆ ಸರಿಸಿದ ಅದು ಎಲ್ಲಾ ಕ್ರಿಮಿನಲ್ ವಿಚಾರಣೆಗಳನ್ನು ರದ್ದುಗೊಳಿಸಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Lalit Chaturvedi and ors vs State of Uttar Pradesh and anr.pdf
Preview

Related Stories

No stories found.
Kannada Bar & Bench
kannada.barandbench.com