ನಕಲಿ ಖಾತೆ ಸೃಷ್ಟಿಯಾಗಿದೆ ಎಂಬುದನ್ನು ಸಾಬೀತುಪಡಿಸಲು ಫೇಸ್‌ಬುಕ್ ಸ್ಕ್ರೀನ್‌ಶಾಟ್ ಮುದ್ರಿತ ಪ್ರತಿ ಪುರಾವೆಯಾಗದು ಎಂದು ಬಾಂಬೆ ಹೈಕೋರ್ಟ್ ಔರಂಗಾಬಾದ್ ಪೀಠ ಈಚೆಗೆ ಹೇಳಿದೆ [ಮಹೇಶ್ ಶಿವಲಿಂಗ್ ತಿಲಕರಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ನಕಲಿ ಫೇಸ್‌ಬುಕ್ ಖಾತೆ ತೆರೆದು ತನ್ನ ಭಾವಮೈದನ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ದಾಖಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿದ್ದ ವ್ಯಕ್ತಿಗುರುತಿನ ಕಳ್ಳತನ (ಐಡೆಂಟಿ ಥೆಪ್ಟ್) ಮತ್ತು ಅಶ್ಲೀಲತೆಯ ಪ್ರಕರಣವನ್ನು ರದ್ದುಗೊಳಿಸುವ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.
ಪುರಾವೆಯಾಗಿ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ, ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಎಸ್ ಜಿ ಚಾಪಲಗಾಂವ್ಕರ್ ಅವರನ್ನೊಳಗೊಂಡ ಪೀಠ, “ಫೇಸ್‌ಬುಕ್ ವಸ್ತುವಿಷಯದ ಸ್ಕ್ರೀನ್‌ಶಾಟ್‌ಗಳ ಮುದ್ರಣ ಯಾವುದೇ ರೀತಿಯಲ್ಲೂ ಆಕ್ಷೇಪಿಸಲಾದ ಪೋಸ್ಟ್ ಅನ್ನು ಆರೋಪಿಯು ನಕಲಿ ಖಾತೆಯಿಂದ ಸೃಷ್ಟಿಸಿದ್ದಾರೆ ಎಂಬುದನ್ನು ಸಾಬೀತುಪಡಿಸುವುದಿಲ್ಲ” ಎಂದಿತು.
ಪೋಸ್ಟ್‌ಗಳು ತನ್ನ ಮತ್ತು ತನ್ನ ಕುಟುಂಬದ, ಅದರಲ್ಲಿಯೂ ತನ್ನ ಹೆಂಡತಿಯ ಘನತೆಗೆ ಹಾನಿ ಉಂಟುಮಾಡುತ್ತಿವೆ ಎಂದು ಅರ್ಜಿದಾರ ಹೇಳಿದ್ದರು. ಆದರೆ ಆರೋಪಿ ನಕಲಿ ಖಾತೆ ಸೃಷ್ಟಿಸಿದ್ದಾನೆ ಎನ್ನಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯ ನುಡಿಯಿತು.
ಫೇಸ್‌ಬುಕ್ ಸ್ಕ್ರೀನ್‌ಶಾಟ್ ಇದ್ದ ಮಾತ್ರಕ್ಕೆ ಆ ಫೇಸ್‌ಬುಕ್ ಹೇಳಿಕೆಗಳನ್ನು ಆರೋಪಿಯೇ ಪ್ರಕಟಿಸಿದ್ದಾನೆ ಎಂದು ಹೇಳಲು ಯಾವ ಸಾಕ್ಷ್ಯಾಧಾರವೂ ಇಲ್ಲ. ಹೀಗಾಗಿ ವಿಚಾರಣೆ ಎದುರಿಸುವಂತೆ ಆರೋಪಿಗೆ ಹೇಳುವುದು ವ್ಯರ್ಥ ಕಸರತ್ತಾಗುತ್ತದೆ ಎಂಬುದಾಗಿ ನ್ಯಾಯಾಲಯ ತಿಳಿಸಿತು.
ಕಾನೂನಿನ ಸೆಕ್ಷನ್‌ಗಳ ಕುರಿತಾದ ಸಂಪೂರ್ಣ ಅಜ್ಞಾನವಿರುವ ಮತ್ತು ಸೈಬರ್ ಅಪರಾಧಗಳನ್ನು ಪತ್ತೆಹಚ್ಚುವಲ್ಲಿ ತರಬೇತಿ ಪಡೆಯದ ತನಿಖಾಧಿಕಾರಿ ಪ್ರಕರಣದ ತನಿಖೆ ನಡೆಸಿದ್ದಾರೆ ಎಂದು ನ್ಯಾಯಾಲಯ ಟೀಕಿಸಿತು.
ತಾನು ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿರುವುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂಬ ಆರೋಪಿಯ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಐಪಿ ಅಡ್ರೆಸ್ ಪತ್ತೆ ಅಥವಾ ನಕಲಿ ಖಾತೆ ಸೃಷ್ಟಿಸಲು ಬಳಸಿದ ಸಾಧನಗಳ ವಿಧಿವಿಜ್ಞಾನ ವಿಶ್ಲೇಷಣೆಯಂತಹ ನಿರ್ಣಾಯಕ ಪುರಾವೆಗಳನ್ನು ಒದಗಿಸಲು ತನಿಖೆ ವಿಫಲವಾಗಿದೆ ಎಂದಿತು. ಅಂತೆಯೇ ತನಿಖೆಯ ನ್ಯೂನತೆಗಳನ್ನು ಆಧರಿಸಿ ಆರೋಪಪಟ್ಟಿ ರದ್ದುಗೊಳಿಸಿತು.