ಜೈಲು ಕೈಪಿಡಿಯ ಅಂತಿಮ ಪರಿಷ್ಕರಣೆ, ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ: ಹೈಕೋರ್ಟ್‌ಗೆ ಬಂಧಿಖಾನೆ ಇಲಾಖೆ ವಿವರಣೆ

“ಆರು ಉಪ ಜೈಲುಗಳಲ್ಲಿ ಸ್ಥಳಾವಕಾಶದ ಕೊರತೆ ಇದ್ದು, ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಸಂದರ್ಶಕರ ಕೊಠಡಿ ಇಲ್ಲ. ಅದಾಗ್ಯೂ, ಉಪಜೈಲುಗಳಲ್ಲಿ ಸಂದರ್ಶಕರ ಭೇಟಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು” ಎಂದು ಬಂಧಿಖಾನೆ ಇಲಾಖೆ ಲಿಖಿತವಾಗಿ ತಿಳಿಸಿದೆ.
Parappana Agrahara Central Prison and Karnataka HC
Parappana Agrahara Central Prison and Karnataka HC

ಕರ್ನಾಟಕ ಜೈಲು ಕೈಪಿಡಿಯ ಅಂತಿಮ ಪರಿಷ್ಕರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರದ ಒಪ್ಪಿಗೆಗೆ ಸಲ್ಲಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ಕಾರಾಗೃಹ ಮತ್ತು ಬಂಧಿಖಾನೆ ಇಲಾಖೆ ತಿಳಿಸಿದೆ.

ಜೈಲುಗಳ ಸುಧಾರಣೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಕೇಂದ್ರ ಗೃಹ ಇಲಾಖೆ ಮತ್ತು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಮಾದರಿ ಜೈಲು ಕೈಪಿಡಿ 2016ಕ್ಕೆ ಅನುಗುಣವಾಗಿ ರಾಜ್ಯ ಜೈಲು ಕೈಪಿಡಿ 1978 ಅನ್ನು ಪರಿಷ್ಕರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಬಂಧಿಖಾನೆ ಇಲಾಖೆಯ ಪರ ವಕೀಲ ಎಸ್‌ ಎಸ್‌ ಮಹೇಂದ್ರ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಕಳೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಆರ್‌ ಡಿ ಉಪಾಧ್ಯಾಯ ವರ್ಸಸ್‌ ಆಂಧ್ರ ಪ್ರದೇಶ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನಗಳ ಜಾರಿಗೆ ಸಂಬಂಧಿಸಿದಂತೆ ಸರ್ಕಾರವನ್ನು ಪ್ರಶ್ನಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರವು “ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಈಗಾಗಲೇ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ” ಎಂದು ಲಿಖಿತವಾಗಿ ತಿಳಿಸಿದೆ.

“ರಾಜ್ಯ ಜೈಲು ಕೈಪಿಡಿ 1978 ರಲ್ಲಿ 488ನೇ ಪ್ಯಾರಾವನ್ನು ಕೈಬಿಟ್ಟು, ಹೊಸದಾಗಿ ಪ್ಯಾರಾ 993 ಅನ್ನು ಸೇರ್ಪಡೆಗೊಳಿಸಲಾಗಿದೆ. ಇದನ್ನು ಪಾಲಿಸುವ ಸಂಬಂಧ ಎಲ್ಲಾ ಜೈಲುಗಳ ಮೇಲ್ವಿಚಾರಕರಿಗೆ ಸುತ್ತೋಲೆ ಕಳುಹಿಸಲಾಗಿದೆ. ಅಲ್ಲದೇ, ಕರ್ನಾಟಕ ಜೈಲು ನಿಯಮಗಳು 1974ರ ನಿಯಮ 86ಕ್ಕೆ ತಿದ್ದುಪಡಿ ಮಾಡಲಾಗಿದೆ” ಎಂದು ತಿಳಿಸಲಾಗಿದೆ.

ಜುಲೈ 14ರಂದು ಕೆಎಸ್‌ಎಲ್‌ಎಸ್‌ಎ ತನ್ನ ವರದಿಯಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು, ತುಮಕೂರಿನ ತಿಪಟೂರು ಮತ್ತು ಮಧುಗಿರಿ, ರಾಯಚೂರಿನ ಲಿಂಗಸುಗೂರು ಮತ್ತು ದೇವದುರ್ಗ, ಕಲಬುರ್ಗಿಯ ಸೇಡಂ ಉಪ ಜೈಲುಗಳಲ್ಲಿ ಪ್ರತ್ಯೇಕ ಸಂದರ್ಶಕರ ಕೊಠಡಿಯಿಲ್ಲ. ನಂಜನಗೂಡು ಮತ್ತು ಸೇಡಂ ಉಪ ಜೈಲುಗಳಲ್ಲಿರುವ ಕೈದಿಗಳನ್ನು ಪ್ರಮುಖ ದ್ವಾರಕ್ಕೆ ಕರೆತಂದು ಸಂದರ್ಶಕರನ್ನು ಭೇಟಿ ಮಾಡಿಸಲಾಗುತ್ತಿದೆ. ತಿಪಟೂರು, ಮಧುಗಿರಿ, ಲಿಂಗಸಗೂರು ಮತ್ತು ದೇವದುರ್ಗದಲ್ಲಿ ಸಣ್ಣ ಕಿಟಕಿಯ ಮೂಲಕ ಕೈದಿಗಳನ್ನು ಕಾಣಲು ಅವಕಾಶ ಮಾಡಿಕೊಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಜೈಲು ಮೇಲ್ವಿಚಾರಕರ ಕೊಠಡಿಗೆ ಸೇರಿಕೊಂಡಂತಿರುವ ಖಾಲಿ ಜಾಗದಲ್ಲಿ ಕೈದಿಗಳನ್ನು ಭೇಟಿ ಮಾಡಲು ಸಂದರ್ಶಕರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ವರದಿಯಲ್ಲಿ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರವು “ಕೆಎಸ್‌ಎಲ್‌ಎಸ್‌ಎ ತನ್ನ ವರದಿಯಲ್ಲಿ ಹೇಳಿರುವಂತೆ ಆರು ಉಪ ಜೈಲುಗಳಲ್ಲಿ ಸ್ಥಳಾವಕಾಶದಲ್ಲಿ ಮತ್ತು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಸಂದರ್ಶಕರ ಕೊಠಡಿಯನ್ನು ಹೊಂದಿಲ್ಲ. ಅದಾಗ್ಯೂ, ಆರು ಉಪ ಜೈಲುಗಳಲ್ಲಿ ಸಂದರ್ಶಕರ ಭೇಟಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಿದೆ.

ಕೆಎಸ್‌ಎಲ್‌ಎಸ್‌ಎ ತನ್ನ ವರದಿಯಲ್ಲಿ ಉಪ ಜೈಲುಗಳಲ್ಲಿ ಅಡುಗೆ ಕೋಣೆಯ ವ್ಯವಸ್ಥೆ ಇಲ್ಲ ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರವು “ಎಲ್ಲಾ ಜೈಲುಗಳಲ್ಲಿ ಅಡುಗೆ ಕೋಣೆಯ ಜೊತೆಗೆ ಅಡುಗೆ ತಯಾರಿಸುವುದನ್ನು ಕೈದಿಗಳೇ ನಿರ್ವಹಿಸಬೇಕು. ಕೆಲವು ಉಪ ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಕಡಿಮೆ ಇದ್ದು, ಎಲ್ಲರೂ ವಿಚಾರಣಾಧೀನರಾಗಿರುವುದರಿಂದ ನಿರ್ದಿಷ್ಟ ಅವಧಿಗೆ ಮಾತ್ರ ಅಲ್ಲಿರುತ್ತಾರೆ. ಅಲ್ಲದೇ, ಉಪ ಜೈಲುಗಳಲ್ಲಿ ಸ್ಥಳಾವಕಾಶ ಕೊರತೆ ಇದೆ. ಹೀಗಾಗಿ, ಅಡುಗೆ ಕೋಣೆ ನಿರ್ವಹಿಸುವುದು ಕಷ್ಟವಾಗಿದೆ. ಇದೇ ಕಾರಣಕ್ಕಾಗಿ ಉಪ ಜೈಲುಗಳಲ್ಲಿರುವ ಕೈದಿಗಳಿಗೆ ಸಿದ್ಧಪಡಿಸಿದ ಅಡುಗೆಯನ್ನೇ ಪೂರೈಸಲಾಗುತ್ತಿದೆ. ಜೈಲಿನಲ್ಲಿ ಸ್ಥಳಾವಕಾಶ ಮತ್ತು ಅಡುಗೆ ಮಾಡಲು ಇರುವ ಸಾಧ್ಯತೆಯನ್ನು ನೋಡಿಕೊಂಡು ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಿದೆ.

Also Read
ಏಮ್ಸ್‌ ಹಲ್ಲೆ ಪ್ರಕರಣ: ಆಪ್ ಶಾಸಕ ಸೋಮನಾಥ್‌ ಭಾರ್ತಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ದೆಹಲಿ ನ್ಯಾಯಾಲಯ

ಈ ಸಂಬಂಧ ವಿಚಾರಣೆಯ ಸಂದರ್ಭದಲ್ಲಿ ಕೆಎಸ್‌ಎಲ್‌ಎಸ್‌ಎ ಪರ ವಕೀಲ ಶ್ರೀಧರ ಪ್ರಭು ಅವರು “ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ಪೀಠವು ಜನ್‌ ಅದಾಲತ್‌ ಪ್ರಕರಣದಲ್ಲಿ ಜೈಲು ಸುಧಾರಣೆಗೆ ಸಂಬಂಧಿಸಿದಂತೆ ಕೆಲವು ನಿರ್ದೇಶನಗಳನ್ನು ನೀಡಿದೆ. ಇದರ ಜೊತೆಗೆ ಮಾದರಿ ಜೈಲು ಕೈಪಿಡಿ ರೂಪಿಸುವ ಸಂಬಂಧ ಕೆಲವು ದಾಖಲೆಗಳನ್ನು ಸಲ್ಲಿಸಿ ಅವುಗಳನ್ನು ಆಧರಿಸಿ ತಮ್ಮದೇ ಆದ ಮಾದರಿ ಜೈಲು ಕೈಪಿಡಿ ರೂಪಿಸಲು ನಿರ್ದೇಶಿಸಿಬೇಕು” ಎಂದು ಪೀಠವನ್ನು ಕೋರಿದರು.

ಇದಕ್ಕೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ಪೀಠವು “ಹಳೆಯ ಕೈಪಿಡಿ ಹಾಕಲಾಗಿದೆ. ಇದನ್ನು ಕೈಬಿಟ್ಟು, ಕೇಂದ್ರ ಸರ್ಕಾರವು 2015ರಲ್ಲಿ ಮಾದರಿ ಜೈಲು ಕೈಪಿಡಿಯೊಂದನ್ನು ಸಿದ್ಧಪಡಿಸಿದೆ. ಇದರ ಜೊತೆಗೆ ಬಾಂಬೆ ಹೈಕೋರ್ಟ್‌ ತಮ್ಮ ನೇತೃತ್ವದ ಪೀಠದ ನಿರ್ದೇಶನಗಳನ್ನು ಇಟ್ಟುಕೊಂಡು ಕೈಪಿಡಿ ಸಿದ್ಧಪಡಿಸಬಹುದು” ಎಂದಿತು.

ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ 25ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com