ಚಿತ್ರದುರ್ಗ ಮುರುಘಾಮಠದ ಆಡಳಿತಾಧಿಕಾರಿಯಾಗಿದ್ದ ಸಮಯದಲ್ಲಿ ಮಠದ ಹಣದಲ್ಲಿ ಹಲವಾರು ಸ್ಥಿರಾಸ್ತಿಗಳನ್ನು ಖರೀದಿಸಿ ತನ್ನ ಹೆಸರಿಗೆ ನೋಂದಾಯಿಸಿಕೊಂಡು ಮಠಕ್ಕೆ ವಂಚಿಸಿದ್ದಾರೆ ಎಂಬ ಆರೋಪದಡಿ ಚಿತ್ರದುರ್ಗದ ಮಾಜಿ ಶಾಸಕ ಎಸ್ ಕೆ ಬಸವರಾಜನ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಜಾಗೊಳಿಸಿದೆ.
ಫಿರ್ಯಾದುದಾರ ಎ ವಿಜಯಕುಮಾರ್ (ಮಠದ ಪೀಠಾಧಿಪತಿ ಪರವಾದ ಅಧಿಕೃತ ದೂರುದಾರ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಎನ್ ಶಿವಕುಮಾರ್ ಬುಧವಾರ ಪ್ರಕಟಿಸಿದರು. ವಿಸ್ತೃತ ಆದೇಶ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣದ ಹಿನ್ನೆಲೆ: ಎಸ್ ಕೆ ಬಸವರಾಜನ್ ಮಠದ ಆಡಳಿತಾಧಿಕಾರಿಯಾಗಿ ಮತ್ತು ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿದ್ದ ಸಮಯದಲ್ಲಿ ಎಸ್‌ಜೆಎಂ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಕೌಂಟ್ ನಂಬರ್ 108ರಿಂದ ಹಣವನ್ನು ಪಡೆದು ವಿವಿಧೆಡೆಯಲ್ಲಿನ ಸ್ಥಿರಾಸ್ತಿಗಳನ್ನು ಖರೀದಿಸಿ ತಮ್ಮ ಹೆಸರಿಗೆ ಕ್ರಯಕ್ಕೆ ಮಾಡಿಸಿಕೊಂಡು ಮಠಕ್ಕೆ ವಂಚಿಸಿದ್ದಾರೆ ಎಂದು ವಿಜಯಕುಮಾರ್ ಚಿತ್ರದುರ್ಗ ಟೌನ್ ಪೊಲೀಸ್ ಠಾಣೆಯಲ್ಲಿ 2013ರ ಏಪ್ರಿಲ್ 16ರಂದು ದೂರು ನೀಡಿದ್ದರು.
ಈ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 406 (ಆಸ್ತಿ ಅಥವಾ ಸ್ವತ್ತುಗಳ ದುರುಪಯೋಗ) ಮತ್ತು 420 (ವಂಚನೆ) ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದರು. ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು.