ಭೀಮಾ ಕೋರೆಗಾಂವ್ ಪ್ರಕರಣ: ವಿಶೇಷ ನ್ಯಾಯಾಲಯದ ಮುಂದೆ ಹದಿನೇಳು ಆರೋಪಗಳನ್ನು ಮುಂದಿಟ್ಟ ಎನ್ಐಎ

ಆರೋಪಿಗಳು ಭಯೋತ್ಪಾದಕ ಚಟುವಟಿಕೆಗಾಗಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತು ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ನೇಮಿಸಿಕೊಂಡರು ಎಂಬುದು ಎನ್ಐಎ ಮಾಡಿರುವ ಆರೋಪಗಳಲ್ಲಿ ಒಂದು.
Mumbai Sessions Court, BHIMA KOREGAON
Mumbai Sessions Court, BHIMA KOREGAON

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯದ ಎದುರು ಎನ್‌ಐಎ ಹದಿನೇಳು ಆರೋಪಗಳನ್ನು ಮಾಡಿದೆ. ಪ್ರಕರಣದ 15 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರೆ, ಐವರು ತಲೆಮರೆಸಿಕೊಂಡಿದ್ದಾರೆ. ಒಬ್ಬ ಆರೋಪಿ ಫಾದರ್ ಸ್ಟಾನ್ ಸ್ವಾಮಿ ಬಂಧನದಲ್ಲಿದ್ದಾಗಲೇ ನಿಧನರಾದರು.

ಆರೋಪಿಗಳು (ಸ್ವಾಮಿ ಸೇರಿದಂತೆ) 2018 ಕ್ಕಿಂತ ಮೊದಲೇ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದರು. ಸರ್ಕಾರದಿಂದ ಅಧಿಕಾರ ಕಿತ್ತುಕೊಳ್ಳಲು ಕ್ರಾಂತಿ ಮತ್ತು ಸಶಸ್ತ್ರ ಹೋರಾಟದ ಮೂಲಕ ʼಜನತಾ ಸರ್ಕಾರʼ ಸ್ಥಾಪಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಭಾರತದ ಏಕತೆ, ಅಖಂಡತೆ, ಸಾರ್ವಭೌಮತೆಗೆ ಧಕ್ಕೆ ತರುವ ಉದ್ದೇಶದಿಂದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವುದು ಮತ್ತು ಕಾನೂನಿನಿಂದ ಸ್ಥಾಪಿತವಾದ ಸರ್ಕಾರದ ವಿರುದ್ಧ ಅತೃಪ್ತಿ ಹರಡುವುದು, ಪಿತೂರಿ ಮಾಡುವುದು ಆರೋಪಿಗಳ ಉದ್ದೇಶವಾಗಿದೆ ಎಂದು ಎನ್‌ಐಎ ಆರೋಪಿಸಿದೆ.

Also Read
ಭೀಮಾ ಕೋರೆಗಾಂವ್ ಪ್ರಕರಣ ತನಗೆ ವಹಿಸಬಾರದೆಂಬ ಅರ್ಜಿ ದಾರಿ ತಪ್ಪಿಸುವಂತಹುದು: ಬಾಂಬೆ ಹೈಕೋರ್ಟ್‌ಗೆ ಎನ್ಐಎ ಅಫಿಡವಿಟ್

ಕೆಲ ಪ್ರಮುಖ ಆರೋಪಗಳ ವಿವರ ಇಲ್ಲಿದೆ:

  • ಆರೋಪಿಗಳು ʼಭಾರತ ಮತ್ತು ಮಹಾರಾಷ್ಟ್ರ ಸರ್ಕಾರಗಳ ವಿರುದ್ಧ ಯುದ್ಧ ಮಾಡಲುʼ ಯತ್ನಿಸಿದ್ದಾರೆ.

  • ನೇಪಾಳ ಮತ್ತು ಮಣಿಪುರದಿಂದ ಎಂ-4 (ಸುಸಜ್ಜಿತ ಶಸ್ತ್ರಾಸ್ತ್ರ) ಸೇರಿದಂತೆ 4 ಲಕ್ಷ ಸುತ್ತು ಮದ್ದುಗುಂಡುಗಳು ಹಾಗೂ ಇತರ ಶಸ್ತ್ರಾಸ್ತ್ರಗಳ ವಾರ್ಷಿಕ ಪೂರೈಕೆಗಾಗಿ ರೂ 8 ಕೋಟಿ ಸಂಗ್ರಹಿಸಲು ಮುಂದಾಗಿದ್ದರು.

  • ಆರೋಪಿಗಳು ಇತರ ಸ್ಫೋಟಕ ವಸ್ತುಗಳು ಮತ್ತು ಚೀನಾ ನಿರ್ಮಿತ ಕ್ಯೂಎಲ್‌ಜಡ್‌ 87 ಸ್ವಯಂಚಾಲಿತ ಗ್ರೆನೇಡ್ ಲಾಂಚರ್ ಮತ್ತು ರಷ್ಯಾ ನಿರ್ಮಿತ ಜಿಎಂ -94 ಗ್ರೆನೇಡ್ ಲಾಂಚರ್ ರೀತಿಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಜನರ ಮನಸ್ಸಿನಲ್ಲಿ ಭಯ ಮೂಡಿಸುವ ಉದ್ದೇಶ ಹೊಂದಿದ್ದರು.

  • ಆರೋಪಿಗಳು ಪುಣೆಯಲ್ಲಿ ಪ್ರಚೋದನಕಾರಿ ಹಾಡುಗಳನ್ನು ಹಾಡುತ್ತಿದ್ದರು, ಕಿರು ನಾಟಕಗಳನ್ನು ಪ್ರದರ್ಶಿಸಿ ನೃತ್ಯ ಮಾಡಿದ್ದರು ಮತ್ತು ನಕ್ಸಲ್‌ ಸಾಹಿತ್ಯ ಹಂಚುತ್ತಿದ್ದರು.

  • ಭಾರತದ ಭೂಪ್ರದೇಶದಲ್ಲಿ ಪ್ರತ್ಯೇಕತೆ ಉಂಟು ಮಾಡಲು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರಲು ಜನರನ್ನು ಪ್ರೇರೇಪಿಸುವ ಉದ್ದೇಶದಿಂದ ಕ್ರಿಮಿನಲ್‌ ಪಿತೂರಿ ನಡೆಸಲಾಗಿದೆ.

  • ಆರೋಪಿಗಳು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ ಮತ್ತು ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿದ್ದರು.

ಪ್ರಕರಣದ ಮತ್ತೊಬ್ಬ ಆರೋಪಿ ಚಿಂತಕ ಆನಂದ್‌ ತೇಲ್ತುಂಬ್ಡೆ ವಿರುದ್ಧ ʼಆಪಾದಿತರನ್ನು ಕಾನೂನು ಶಿಕ್ಷೆಯಿಂದ ಪಾರು ಮಾಡಲು ಸಾಕ್ಷ್ಯಾಧಾರಗಳನ್ನು ನಾಶ ಮಾಡಿದ್ದಾರೆʼ ಎಂಬ ನಿರ್ದಿಷ್ಟ ಆರೋಪ ಮಾಡಲಾಗಿದೆ. ಇನ್ನು ಆರೋಪ ನಿಗದಿಪಡಿಸಬೇಕೆ ಅಥವಾ ಆರೋಪಿಗಳನ್ನು ಖುಲಾಸೆಗೊಳಿಸಬೇಕೆ ಎಂದು ನಿರ್ಧರಿಸುವ ಮೊದಲು ವಿಶೇಷ ನ್ಯಾಯಾಲಯ ಎಲ್ಲಾ ಪಕ್ಷಗಳ ವಿಚಾರಣೆ ನಡೆಸಲಿದೆ.

Related Stories

No stories found.
Kannada Bar & Bench
kannada.barandbench.com