ಕುರುಬ ಸಮುದಾಯದ ವಿರುದ್ಧ ಪ್ರಚೋದನೆ: ಛಲವಾದಿ, ಶ್ರೀವತ್ಸಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಧ್ಯಂತರ ಜಾಮೀನು

ಕರ್ನಾಟಕ ಪ್ರದೇಶ ಕುರುಬರ ಎಸ್‌ಟಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ ಅವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಹಾಗೂ ಶ್ರೀವತ್ಸ ವಿರುದ್ಧ ದೂರು ದಾಖಲಾಗಿತ್ತು.
ಕುರುಬ ಸಮುದಾಯದ ವಿರುದ್ಧ ಪ್ರಚೋದನೆ: ಛಲವಾದಿ, ಶ್ರೀವತ್ಸಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಧ್ಯಂತರ ಜಾಮೀನು
Published on

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ವಿಚಾರದಲ್ಲಿ ಆ ಸಮುದಾಯದ ವಿರುದ್ಧ ಎಸ್‌ಟಿ ಹಾಗೂ ವಾಲ್ಮೀಕಿ ಸಮುದಾಯವನ್ನು ಎತ್ತಿಕಟ್ಟುವಂತಹ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ಛಲವಾದಿ ನಾರಾಯಣಸ್ವಾಮಿ ಹಾಗೂ ಶ್ರೀವತ್ಸ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಪುರಸ್ಕರಿಸಿದರು.

Also Read
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ: ಕೇಂದ್ರ, ರಾಜ್ಯ ಸರ್ಕಾರ, ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್‌ ನೋಟಿಸ್‌

ಪ್ರಜಾಪ್ರಭುತ್ವ ದೇಶವೊಂದರಲ್ಲಿ ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆಯಾದರೆ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತಾರದೆ ಶಾಂತಿಯುತ ರೀತಿಯಲ್ಲಿ ವಿರೋಧ ವ್ಯಕ್ತಪಡಿಸುವುದು ಆತನ ಹಕ್ಕಾಗಿದೆ. ಅಲ್ಲದೆ ಹೇಳಿಕೆಗಳಿಂದಾಗಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ನ್ಯಾಯಾಲಯ ಹೇಳಿತು.

ಇದೇ ವೇಳೆ, ಅರ್ಜಿದಾರರ ವಿರುದ್ಧ ಜೀವಾವಧಿ ಮತ್ತು ಮರಣದಂಡನೆ ಶಿಕ್ಷೆ ವಿಧಿಸುವಂತಹ ಅಪರಾಧವೆಸಗಿದ ಆರೋಪಗಳಿಲ್ಲ. ದೂರಿನಲ್ಲಿನ ಆರೋಪಗಳು ಉಹಾಪೋಹಗಳಿಂದ ಕೂಡಿವೆ.  ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಅರ್ಜಿದಾರರಿಗೆ ಮಧ್ಯಂತರ ರಕ್ಷಣೆ ನೀಡುವುದು ಸೂಕ್ತ ಎಂದು ಆದೇಶ ವಿವರಿಸಿದೆ.  

ಅಂತೆಯೇ ಇಬ್ಬರಿಗೂ ಮಧ್ಯಂತರ ಜಾಮೀನು ನೀಡಿದ ಅದು ಆರೋಪಿತ ವ್ಯಕ್ತಿಗಳು ತಲಾ ₹1 ಲಕ್ಷ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ಆದೇಶಿಸಿದೆ. ಜೊತೆಗೆ 15 ದಿನಗಳ ಒಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಸಾಕ್ಷಿಗಳನ್ನು ಬೆದರಿಸುವಂತಿಲ್ಲ, ಅವರ ಮೇಲೆ ಪ್ರಭಾವ ಬೀರುವಂತಿಲ್ಲ ಹಾಗೂ ಅಡ್ಡಿಪಡಿಸುವಂತಿಲ್ಲ ಎಂದಿರುವ ಅದು ಇಂತಹ ಹೇಳಿಕೆಗನ್ನು ಮತ್ತೆ ನೀಡದಂತೆಯೂ ಎಚ್ಚರಿಕೆ ನೀಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ತಮ್ಮ ಕಕ್ಷಿದಾರರು ಸಾರ್ವಜನಿಕ ಶಾಂತಿ ಭಂಗ ಮಾಡುವ ಹೇಳಿಕೆ ನೀಡಿಲ್ಲ, ಧರ್ಮ, ಜಾತಿ, ಸಮುದಾಯ, ಭಾಷೆಯ ಆಧಾರದಲ್ಲಿ ದ್ವೇಷ ಮೂಡಿಸುವುದನ್ನು ನಿಗ್ರಹಿಸಲು ಬಳಸುವ ಬಿಎನ್‌ಎಸ್‌ ಸೆಕ್ಷನ್‌ 353(2) ಈ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ. ಶಾಸಕಾಂಗದ ಜವಾಬ್ದಾರಿಯುತ ಸದಸ್ಯರಾಗಿ, ಅರ್ಜಿದಾರರು ತಮ್ಮ ಕಳಕಳಿ ವ್ಯಕ್ತಪಡಿಸಿದ್ದರು. ಅವರಿಗೆ ಕಿರುಕುಳ ನೀಡುವ ಉದ್ದೇಶದಿಂದ ಅವರ ಹೇಳಿಕೆಗಳನ್ನು ತಿರುಚಲಾಗಿದೆ ಎಂದರು. ಇಮ್ರಾನ್ ಪ್ರತಾಪಗಢಿ ಹಾಗೂ ಗುಜರಾತ್ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ, ಶ್ಯಾಮ್‌ ಅವರು ತಮ್ಮ ವಾದ ಸಮರ್ಥಿಸಿಕೊಂಡರು.

Also Read
ಜಾತಿ ಸಮೀಕ್ಷೆ ಪ್ರಶ್ನಿಸಿರುವ ಅರ್ಜಿ ಊರ್ಜಿತತ್ವದ ಪ್ರಶ್ನೆ ಎತ್ತಿದ ಆಯೋಗ: ನವೆಂಬರ್‌ 4ಕ್ಕೆ ವಿಚಾರಣೆ ಮುಂದೂಡಿಕೆ

ಕರ್ನಾಟಕ ಪ್ರದೇಶ ಕುರುಬರ ಎಸ್‍ಟಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ ಅವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಹಾಗೂ ಶ್ರೀವತ್ಸ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 353(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಛಲವಾದಿ ನಾರಾಯಣಸ್ವಾಮಿ ಅವರು ಬೆಂಗಳೂರಿನಲ್ಲಿ, ಶ್ರೀವತ್ಸ ಅವರು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳನ್ನು ಟೀಕಿಸುವ ಭರದಲ್ಲಿ ಇಡೀ ಕುರುಬ ಸಮಾಜಕ್ಕೆ ಅವಮಾನ ಹಾಗೂ ದೌರ್ಜನ್ಯ ಎಸಗಿದ್ದಾರೆ. ಎಸ್‌ಟಿ ಹಾಗೂ ವಾಲ್ಮೀಕಿ ಸಮಾಜದವರು  ಕುರುಬ ಸಮಾಜದ ವಿರುದ್ಧ ದಂಗೆ ಏಳಬೇಕು ಎನ್ನುವ ರೀತಿಯಲ್ಲಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ್ದಾರೆ. ಸಮುದಾಯದ ಜನರನ್ನು ಪ್ರಚೋದಿಸುವ ಮೂಲಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳುಮಾಡಲು ಪ್ರಯತ್ನಿಸಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಿದ್ದಣ್ಣ ತೇಜಿ ಮನವಿ ಮಾಡಿದ್ದರು.

Kannada Bar & Bench
kannada.barandbench.com