ರಾಜಕೀಯ ಉದ್ದೇಶಕ್ಕಾಗಿ, ಯೋಜನೆಗಳನ್ನು ಸ್ಥಗಿತಗೊಳಿಸಲು, ಅಧಿಕಾರಿಗಳ ಮೇಲೆ ಒತ್ತಡ ಹೇರಲು ಪಿಐಎಲ್‌ ಬಳಕೆ: ಸಿಜೆಐ ಬೇಸರ

ನವದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ನಡೆದ ಮುಖ್ಯಮಂತ್ರಿಗಳು ಮತ್ತು ದೇಶದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮಾವೇಶದಲ್ಲಿ ಅವರು ಮಾತನಾಡಿದರು.
CJI NV Ramana
CJI NV Ramana Twitter

ರಾಜಕೀಯ ಉದ್ದೇಶಗಳಿಗೆ, ಯೋಜನೆಗಳನ್ನು ಸ್ಥಗಿತಗೊಳಿಸುವುದಕ್ಕೆ, ಸಾರ್ವಜನಿಕ ಅಧಿಕಾರಿಗಳ ಮೇಲೆ ಒತ್ತಡ ಹೇರುವುದಕ್ಕೆ ಇಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್‌) ಬಳಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಶನಿವಾರ ಬೇಸರ ವ್ಯಕ್ತಪಡಿಸಿದರು.

ನವದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ನಡೆದ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ದೇಶದ ಎಲ್ಲ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮಾವೇಶದಲ್ಲಿ ಅವರು ಮಾತನಾಡಿದರು.

Also Read
ನ್ಯಾಯಾಲಯದ ತೀರ್ಪುಗಳನ್ನು ಸರ್ಕಾರ ವರ್ಷಗಟ್ಟಲೆ ಜಾರಿಗೆ ತರುವುದಿಲ್ಲ: ಸಿಜೆಐ ಎನ್ ವಿ ರಮಣ

“ಕ್ಷುಲ್ಲಕ ದಾವೆಗಳನ್ನು ನಿರ್ಧರಿಸುವುದು ಕೂಡ ಕಾಳಜಿಯ ವಿಚಾರವಾಗಿದೆ. ಸಾರ್ವಜನಿಕ ಹಿತಾಸಕ್ತಿ ದಾವೆ ಎಂಬ ಉತ್ತಮ ಅರ್ಥದ ಪರಿಕಲ್ಪನೆಯು ಇಂದು ವೈಯಕ್ತಿಕ ಹಿತಾಸಕ್ತಿ ದಾವೆ ಎಂದಾಗಿದೆ. ಕೆಲವೊಮ್ಮೆ ಯೋಜನೆಗಳನ್ನು ಸ್ಥಗಿತಗೊಳಿಸಲು ಅಥವಾ ಸಾರ್ವಜನಿಕ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಪಿಐಎಲ್‌ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ರಾಜಕೀಯ ಹಗೆತನಕ್ಕಾಗಿ ಅಥವಾ ರಾಜಕೀಯ ದಾಳವಾಗಿ ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಪಿಐಎಲ್‌ ದುರ್ಬಳಕೆಯ ಸಾಧ್ಯತೆಗಳಿರುವದರಿಂದ ಅವುಗಳನ್ನು ಪುರಸ್ಕರಿಸುವಲ್ಲಿ ನ್ಯಾಯಾಲಯಗಳು ಹೆಚ್ಚು ಜಾಗರೂಕವಾಗಿವೆ” ಎಂದು ಅವರು ಹೇಳಿದರು.

Also Read
ಸಾಮಾನ್ಯರಿಗೆ ಅರ್ಥವಾಗುವಂತೆ ಕಾನೂನು ಸರಳಗೊಳಿಸಲು ಕೇಂದ್ರ ಸರ್ಕಾರ ಸಮಿತಿ ರಚಿಸಿದೆ: ಪ್ರಧಾನಿ ಮೋದಿ

ಪ್ರಕರಣಗಳ ಬಾಕಿ ಉಳಿಯುವಿಕೆ ಕುರಿತು ಪ್ರಸ್ತಾಪಿಸಿದ ಅವರು ನ್ಯಾಯಾಲಯಗಳ ಜಾಲತಾಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನ್ಯಾಯಾಧೀಶರ ಮೇಲಿನ ಕೆಲಸದ ದೊಡ್ಡ ಹೊರೆ ನಿಮಗೆ ಅರಿವಾಗುತ್ತದೆ. ಪ್ರತಿದಿನ ದಾಖಲಾಗುವ ಮತ್ತು ವಿಲೇವಾರಿಯಾಗುವ ಪ್ರಕರಣಗಳ ಸಂಖ್ಯೆ ಊಹೆಗೂ ನಿಲುಕುವುದಿಲ್ಲ ಎಂದರು.

ನ್ಯಾಯದಾನದ ಭಾರತೀಕರಣವನ್ನು ಪ್ರತಿಪಾದಿಸುತ್ತಾ “ಭಾರತೀಕರಣದ ಮೂಲಕ ಜನಸಂಖ್ಯೆಯ ಅಗತ್ಯ ಮತ್ತು ಸಂವೇದನೆಗಳಿಗೆ ಅನುಗುಣವಾಗಿ ವ್ಯವಸ್ಥೆ ರೂಪಿಸಿ ಆ ಮೂಲಕ ನ್ಯಾಯ ಪಡೆಯುವ ಅವಕಾಶ ಹೆಚ್ಚಿಸಬೇಕು” ಎಂದು ಕರೆ ನೀಡಿದರು.

ಭಾರತೀಕರಣ ಎಂಬುದು ಸಾಮಾಜಿಕ ಮತ್ತು ಭೌಗೋಳಿಕ ಒಳಗೊಳ್ಳುವಿಕೆ, ನ್ಯಾಯ ಪಡೆಯುವ ಅವಕಾಶ, ಭಾಷಾ ತೊಡಕು ನಿವಾರಣೆ, ಆಚರಣೆ ಮತ್ತು ಕಾರ್ಯವಿಧಾನಗಳಲ್ಲಿ ಸುಧಾರಣೆ, ಮೂಲಸೌಕರ್ಯಗಳ ಅಭಿವೃದ್ಧಿ, ಹುದ್ದೆ ಭರ್ತಿ, ನ್ಯಾಯಾಂಗದ ಬಲವರ್ಧನೆ ಇತ್ಯಾದಿಗಳನ್ನು ಒಳಗೊಂಡಿದೆ ಎಂದರು. ʼಹಿಗ್ಗುತ್ತಿರುವ ಆರ್ಥಿಕತೆ ಮತ್ತು ಜನಸಂಖ್ಯೆಯ ಬೆಳವಣಿಗೆʼಯಿಂದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಬಗ್ಗೆ ಕೂಡ ಆತಂಕ ವ್ಯಕ್ತಪಡಿಸಿದರು.

ನ್ಯಾಯಾಂಗ ಮೂಲಸೌಕರ್ಯಕ್ಕೆ ತುರ್ತು ಗಮನ ನೀಡಬೇಕು ಎಂದ ಅವರು ಮೂಲಸೌಕರ್ಯಗಳ ಕೊರತೆಯಿಂದ ಮಹಿಳಾ ವಕೀಲರು ಮತ್ತು ಮಹಿಳಾ ಕಕ್ಷಿದಾರರ ದುಸ್ಥಿತಿಯನ್ನು ಎತ್ತಿ ತೋರಿಸಿದರು.

ಕೇಂದ್ರ ಸರ್ಕಾರ ಸಾಕಷ್ಟು ಬಜೆಟ್ ಹಂಚಿಕೆಗಳನ್ನು ಮಾಡುತ್ತಿರುವುದರಿಂದ ಮೂಲಸೌಕರ್ಯ ವಿಚಾರವಾಗಿ ಹಣದ ಕೊರತೆ ಇಲ್ಲ. ಆದರೆ ಈಗಿರುವ ತಾತ್ಕಾಲಿಕ ಸಮಿತಿಗಳು ಹೆಚ್ಚು ಸುವ್ಯವಸ್ಥಿತ, ಜವಾಬ್ದಾರಿಯುತ ಮತ್ತು ಸಂಘಟಿತ ರಚನೆಗಳಾಗಲು ಇದು ಸೂಕ್ತ ಸಮಯ” ಎಂದರು

Related Stories

No stories found.
Kannada Bar & Bench
kannada.barandbench.com