ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದ 44 ಸಿಆರ್‌ಪಿಎಫ್ ಪೊಲೀಸರು ಹುತಾತ್ಮರಾಗಿದ್ದಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಆರೋಪಮುಕ್ತಗೊಳಿಸಲು ಎನ್‌ಐಎ ವಿಶೇಷ ನ್ಯಾಯಾಲಯ ಈಚೆಗೆ ನಿರಾಕರಿಸಿದೆ (ಸಿಸಿಬಿ ವರ್ಸಸ್ ಫೈಜ್ ರಶೀದ್).
“ನ್ಯಾಯಾಲಯವು ಮಿನಿ ವಿಚಾರಣೆ ನಡೆಸುವ ಅಗತ್ಯವಿಲ್ಲ. ಬದಲಿಗೆ ಆರೋಪಿಯ ವಿರುದ್ಧ ಪ್ರಕ್ರಿಯೆ ಮುಂದುವರಿಸಲು ಮೇಲ್ನೋಟಕ್ಕೆ ಪ್ರಕರಣವಿದೆಯೇ ಎಂಬುದನ್ನು ಪರಿಶೀಲಿಸಬೇಕು” ನ್ಯಾಯಾಲಯವು ವಿಚಾರಣೆ ವೇಳೆ ಅಭಿಪ್ರಾಯಪಟ್ಟಿತು.
ರಾಷ್ಟ್ರದ್ರೋಹ ಮತ್ತು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಸೆಕ್ಷನ್‌ಗಳ ಅಡಿ ದಾಖಲಿಸಿರುವ ಪ್ರಕರಣದಿಂದ ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ಬೆಂಗಳೂರಿನ ಕಾಚರಕನಹಳ್ಳಿಯ ನಿವಾಸಿ 20 ವರ್ಷದ ಫೈಜ್ ರಶೀದ್ ಸಲ್ಲಿಸಿದ್ದ ಮನವಿಯನ್ನು ಎನ್‌ಐಎ ವಿಶೇಷ ನ್ಯಾಯಾಧೀಶ ಡಾ. ಕಸನಪ್ಪ ನಾಯ್ಕ್ ಅವರು ತಿರಸ್ಕರಿಸಿದ್ದಾರೆ.
“ಅಧಿಕೃತವಾಗಿ ಸಲ್ಲಿಸಲಾಗಿರುವ ಮಾಹಿತಿಯನ್ನು ಪರಿಗಣಿಸಿದ ಬಳಿಕ ಆರೋಪ ಮುಕ್ತಗೊಳಿಸುವಂತಹ ಯಾವುದೇ ಆಧಾರಗಳನ್ನು ಆರೋಪಿ ಪರ ವಕೀಲರು ಸಲ್ಲಿಸಿಲ್ಲ. ಇತ್ತ ಆರೋಪಿಯ ವಿರುದ್ಧ ಆರೋಪ ನಿಗದಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಮೌಖಿಕ ಮತ್ತು ಇತರ ದಾಖಲೆಗಳನ್ನು ಸಲ್ಲಿಸಿದೆ. ಹೀಗಾಗಿ, ಆರೋಪಿಯು ಸಿಆರ್‌ಪಿಸಿ ಸೆಕ್ಷನ್ 227ರ ಅಡಿ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಫೈಜ್ ಪರ ವಕೀಲ ವಿ ಜೆ ಬೆಂಜಮಿನ್ ಅವರು “ಆರೋಪಿಗೆ ಯಾವುದೇ ಕೋಮು ಅಥವಾ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕವಿಲ್ಲ. ಆರೋಪಿಯ ಫೇಸ್‌ಬುಕ್ ಪೋಸ್ಟ್‌ನಿಂದ ಗಲಭೆಯಾಗಿಲ್ಲ. ಮೊಬೈಲ್ ಫೋನ್ ಅನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಆರೋಪಿ ಮಾಡಿದ್ದ ಸಂದೇಶಗಳನ್ನು ನೋಡಿದ ಬಳಿಕವೂ ಸಮಾಜದಲ್ಲಿ ಏನೂ ಆಗಿಲ್ಲ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 153ರ (ಕೋಮು ಅಶಾಂತಿ) ಅಡಿ ಪ್ರಕರಣ ದಾಖಲಿಸಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಸಲ್ಲಿಸಲಾಗಿಲ್ಲ. ಐಪಿಸಿ ಸೆಕ್ಷನ್ 124-ಎ ಅಡಿ ಮೂರು ವರ್ಷ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಯುಎಪಿಎ ಸೆಕ್ಷನ್ 13ಕ್ಕೆ ಸಂಬಂಧಿಸಿದಂತೆ ಯಾವುದೇ ಆಧಾರವಿಲ್ಲ” ಎಂದು ವಾದಿಸಿದ್ದರು.
ಸಿಸಿಬಿಯನ್ನು ಪ್ರತಿನಿಧಿಸಿದ್ದ ಸರ್ಕಾರಿ ಅಭಿಯೋಜಕ ಜೆ ಎನ್ ಅರುಣ್ ಅವರು “ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ 44 ಸಿಆರ್‌ಪಿಎಫ್ ಯೋಧರಿಗೆ ಸಂಬಂಧಿಸಿದಂತೆ ಆರೋಪಿಯು ಭಾರತೀಯ ಸೇನೆಯನ್ನು ಹೀನವಾಗಿ ಕಂಡು ಆಕ್ಷೇಪಾರ್ಹವಾದ ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ. ಆರೋಪಿ ಭಾಗಿಯಾಗಿರುವ ಅಪರಾಧಗಳು ಗಂಭೀರ ಸ್ವರೂಪದ್ದಾಗಿದ್ದು, ತನಿಖಾಧಿಕಾರಿ ಈಗಾಗಲೇ ಆರೋಪಪಟ್ಟಿ ಸಲ್ಲಿಸಿದ್ದಾರೆ” ಎಂದು ವಾದಿಸಿದ್ದರು.
ಘಟನೆಯ ಹಿನ್ನೆಲೆ: 2019ರ ಫೆಬ್ರವರಿ 14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದಾಗಿ ಮೃತಪಟ್ಟಿದ್ದ ಯೋಧರ ಸಾವನ್ನು ಅಣಕ ಮಾಡಿ ಫೈಜ್ ರಶೀದ್ ತನ್ನ ಫೇಸ್‌ಬುಕ್ ಖಾತೆಯಲ್ಲಿ “40 ಜನರ ಪ್ರಾಣಕ್ಕೆ ಒಬ್ಬ ಮುಸಲ್ಮಾನ್ ಎರವಾದ; ಕಾಶ್ಮೀರದ ಹೀರೊ" ಎಂದು ಹಾಕಿದ್ದ. ಅಲ್ಲದೆ, ಗುಂಪು ಹತ್ಯೆ, ರಾಮ ಮಂದಿರ, 2002ರ ದಾಳಿಗಳಿಗೆ ಇದು ಪ್ರತೀಕಾರವಾಗಿದೆ… ಇದು ಟ್ರೇಲರ್ ಅಷ್ಟೇ ಆಗಿದ್ದು, ಪಿಕ್ಚರ್ ಇನ್ನೂ ಬಾಕಿ ಇದೆ. ಭಾರತೀಯ ಸೇನೆ ಹೇಗಿದೆ ಭೀತಿ? ಎಂದು ಪೋಸ್ಟ್ ಹಾಕಿದ್ದ.
ಇದನ್ನು ಆಧರಿಸಿ, 2019ರ ಫೆಬ್ರವರಿ 17ರಂದು ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಕೆ ಎನ್ ಯಶವಂತ್ ಕುಮಾರ್ ನೀಡಿದ ದೂರಿನ ಮೇರೆಗೆ ಬಾಣಸವಾಡಿ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 153ಎ, 124ಎ, 201 ಮತ್ತು ಯುಎಪಿಎ ಸೆಕ್ಷನ್ 13ರ ಪ್ರಕರಣ ದಾಖಲಿಸಿದ್ದರು. 2019ರ ಫೆಬ್ರವರಿ 17ರಂದು ಫೈಜ್ ಬಂಧನವಾಗಿದ್ದು, ಅಂದಿನಿಂದ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.