
ಎರಡು ವರ್ಷಗಳ ಹಿಂದೆ ಅಂದರೆ 2023ರಲ್ಲಿ ಆಮದಾದ ಕಿವಿ ಹಣ್ಣನ್ನು ಆಮದುದಾರನಿಗೆ ಬಿಡುಗಡೆ ಮಾಡುವಲ್ಲಿ ಉಂಟಾದ ಅಡೆತಡೆಗಳಿಂದಾಗಿ 89,420 ಕಿಲೋಗ್ರಾಂಗಳಷ್ಟು ತೂಕದ ಹಣ್ಣು ಹಾಳಾದ ಹಿನ್ನೆಲೆಯಲ್ಲಿ ಆಮದುದಾರನಿಗೆ ₹50 ಲಕ್ಷ ಪಾವತಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶುಕ್ರವಾರ ಕಸ್ಟಮ್ಸ್ ಅಧಿಕಾರಿಗಳಿಗೆ ಆದೇಶಿಸಿದೆ [ಪ್ರೆಂಡಾ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಹಣ್ಣನ್ನು ಆಮದು ಮಾಡಿಕೊಂಡಿದ್ದ ಪ್ರೆಂಡಾ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ವಾರ್ಷಿಕ ಶೇಕಡಾ 6ರಷ್ಟು ಹಣ ನೀಡಬೇಕು ಎಂದು ಅಧಿಕಾರಿಗಳಿಗೆ ನ್ಯಾಯಮೂರ್ತಿಗಳಾದ ಸಂಜೀವ್ ಪ್ರಕಾಶ್ ಶರ್ಮಾ ಮತ್ತು ಸಂಜಯ್ ವಶಿಷ್ಠ ಅವರಿದ್ದ ಪೀಠ ಆದೇಶಿಸಿತು.
"ಪ್ರತಿವಾದಿಗಳು ಕಿವಿ ಹಣ್ಣು ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿದ್ದಕ್ಕಾಗಿ 89,420 ಕಿಲೋಗ್ರಾಂಗಳಷ್ಟು ತೂಕದ ಕಿವಿ ಹಣ್ಣು ನಾಶವಾಯಿತು. ಹೀಗಾಗಿ ಅರ್ಜಿದಾರರು /ಆಮದುದಾರರು ₹50 ಲಕ್ಷಗಳ ವಿಧಿಬದ್ಧ ಪರಿಹಾರ ಪಡೆಯಬೇಕು ಎಂದು ನಿರ್ದೇಶಿಸುತ್ತೇವೆ. ಮಾರಾಟಗಾರರಿಗೆ ಈಗಾಗಲೇ ಆಮದುದಾರರು ಆ ಮೊತ್ತ ಪಾವತಿಸಿ ಭಾರತಕ್ಕೆ ಕಿವಿ ಹಣ್ಣು ತಂದಿರುವುದರಿಂದ ಈ ಮೊತ್ತದ ಪರಿಹಾರ ನೀಡಿದ್ದೇವೆ. ಕಿವಿ ಹಣ್ಣು ಹೆಚ್ಚು ಬೆಲೆ ಬಾಳುವಂಥದ್ದು. ಆಮದುದಾರರು/ಅರ್ಜಿದಾರರಿಗೆ ಪರಿಹಾರವಾಗಿ ನೀಡಬೇಕಾದ ಈ ಮೊತ್ತವನ್ನು ತಪ್ಪಿತಸ್ಥ ಅಧಿಕಾರಿಗಳಿಂದ ವಸೂಲಿ ಮಾಡಬೇಕು" ಎಂದು ನ್ಯಾಯಾಲಯ ಆದೇಶಿಸಿದೆ.
ಸರ್ಕಾರಿ ಅಧಿಕಾರಿಗಳು ಅನಗತ್ಯವಾಗಿ ಮತ್ತು ಅತಿಯಾಗಿ ನಿಯಮಗಳಿಗೆ ಅಂಟಿ ಕುಳಿತು ದಬ್ಬಾಳಿಕೆ ನಡೆಸುವುದಕ್ಕೆ (ರೆಡ್ ಟ್ಯಾಪಿಸಂ)ಈ ಪ್ರಕರಣ ಒಂದು ಉದಾಹರಣೆ ಎಂದು ನ್ಯಾಯಾಲಯ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿತು. ಸರಕು ಹಾಳಾಗಿ ನಿರುತ್ಸಾಹ ಮೂಡದಂತೆ ಮಾಡುವುದಕ್ಕಾಗಿ ರೆಡ್ ಟ್ಯಾಪಿಸಂ ತಪ್ಪಿಸಲು ಲಕ್ಷ್ಮಣ ರೇಖೆ ಎಳೆಯಬೇಕಿದೆ ಎಂದು ಅದು ಹೇಳಿದೆ.
"ವಿವಿಧ ದೇಶಗಳಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯುವ ಹಕ್ಕು ಭಾರತೀಯ ನಾಗರಿಕರಿಗೂ ಇದೆ; ಆದರೆ ಪ್ರತಿವಾದಿಗಳು ಅಳವಡಿಸಿಕೊಂಡ ವಿಧಾನ ಮುಂದುವರಿಸಲು ಅನುಮತಿಸಿದರೆ, ತಾಜಾತನ ಕಳೆದುಕೊಂಡಿರುವ ಕೊಳೆತ ಹಣ್ಣು, ತರಕಾರಿ ಮತ್ತು ವಸ್ತುಗಳನ್ನು ಬಿಡುಗಡೆ ಮಾಡಲಿದ್ದು ಇದರಿಂದ ಅಂತಿಮವಾಗಿ ಸಾರ್ವಜನಿಕರೇ ಹೆಚ್ಚಿನ ತೊಂದರೆಗೆ ಒಳಗಾಗುತ್ತಾರೆ. ಪ್ರಯೋಗಾಲಯಗಳು, ಹಡಗು ಕಂಪನಿಗಳು ಮತ್ತು ಕಸ್ಟಮ್ಸ್ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿ ಆಮದು ಮಾಡಿಕೊಂಡ ಸರಕುಗಳು ಸಾಧ್ಯವಾದಷ್ಟು ಬೇಗ ಸಾರ್ವಜನಿಕರಿಗೆ ತಲುಪುವ ವಾತಾವರಣ ಸೃಷ್ಟಿಯಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ನೀತಿ ರೂಪಿಸಬೇಕು " ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಪ್ರೆಂಡಾ ಕ್ರಿಯೇಷನ್ಸ್ ಏಪ್ರಿಲ್ 2023 ರಲ್ಲಿ ಗುಜರಾತ್ ಮೂಲದ ಶಿಪ್ಪಿಂಗ್ ಕಂಪನಿಯ ಮೂಲಕ ದುಬೈನಲ್ಲಿರುವ ಪೂರೈಕೆದಾರರಿಂದ ನಾಲ್ಕು ಕಂಟೇನರ್‌ಗಳಲ್ಲಿ ಕಿವಿ ಹಣ್ಣುಗಳನ್ನು ಆಮದು ಮಾಡಿಕೊಂಡಿತ್ತು. ಕಸ್ಟಮ್ಸ್ ಕಾಯಿದೆಯ ಸೆಕ್ಷನ್ 46ರ ಅಡಿಯಲ್ಲಿ, ಯಾವುದೇ ಸರಕುಗಳ ಆಮದುದಾರರು ಆಮದು ಮಾಡಿಕೊಂಡ ಸರಕುಗಳಿಗೆ ಪ್ರವೇಶ ಬಿಲ್ ನೀಡಬೇಕಾಗುತ್ತದೆ.
ಹಡಗು ಕಂಪನಿಯ ದಾಖಲೆಗಳಲ್ಲಿ ಅಂತಿಮ ವಿತರಣಾ ಸ್ಥಳಕ್ಕೆ ಸಂಬಂಧಿಸಿದ ಕೆಲವು ವಿರೋಧಾಭಾಸಗಳಿಂದಾಗಿ, ಮುಂದ್ರಾ ಬಂದರಿನಿಂದ ಲುಧಿಯಾನಕ್ಕೆ ಸರಕು ಸಾಗಣೆಯಾಗುವುದನ್ನು ಕಸ್ಟಮ್ಸ್ ಅಧಿಕಾರಿಗಳು ನಿರ್ಬಂಧಿಸಿದರು. ಕಾನೂನು ಅನುಮತಿಸಿದ್ದರೂ ಸಹ, ಹಡಗು ಕಂಪನಿ ಸಲ್ಲಿಸಿದ ಆಮದು ಸಾಮಾನ್ಯ ಪ್ರಣಾಳಿಕೆಯನ್ನು ತಿದ್ದುಪಡಿ ಮಾಡಲುತಮಗೆ ಅವಕಾಶ ದೊರೆತಿರಲಿಲ್ಲ ಎಂಬುದು ಅರ್ಜಿದಾರರ ಅಳಲಾಗಿತ್ತು.
ಹಣ್ಣು ಬೇಗನೆ ಹಾಳಾಗುತ್ತಿದ್ದ ಹಿನ್ನೆಲೆಯಲ್ಲಿ, ಪ್ರೆಂಡಾ ಕ್ರಿಯೇಷನ್ಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು, ಹೈಕೋರ್ಟ್ ಮೇ 2023ರಲ್ಲಿ ಮುಂದ್ರಾ ಬಂದರಿನಿಂದ ಲುಧಿಯಾನಕ್ಕೆ ಸರಕುಗಳನ್ನು ವರ್ಗಾಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಆದರೆ, ಈ ಬಾರಿ, ಸರಕುಗಳನ್ನು ಸರಕು ನಿಲ್ದಾಣಕ್ಕೆ (ಸೌರಾಷ್ಟ್ರ ಫ್ರೈಟ್ ಪ್ರೈವೇಟ್ ಲಿಮಿಟೆಡ್) ವರ್ಗಾಯಿಸುವ ಹಡಗು ಕಂಪನಿಯ ನಿರ್ಧಾರ ನ್ಯಾಯಾಲಯದ ಆದೇಶ ಜಾರಿಗೆ ಅಡ್ಡಿಯಾಯಿತು. ಪರಿಣಾಮ, ನ್ಯಾಯಾಲಯ ಮತ್ತೆ ಸರಕುಗಳನ್ನು ಬಿಡುಗಡೆ ಮಾಡಲು ಆದೇಶ ನೀಡಬೇಕಾಯಿತು.
ಕಸ್ಟಮ್ಸ್ ಇಲಾಖೆ ಸೀಮಿತ ಜೀವಿತಾವಧಿ ಹೊಂದಿರುವ, ಬೇಗ ಹಾಳಾಗುವ ಉತ್ತಮ ವಸ್ತುವಾದ ಕಿವಿ ಹಣ್ಣನ್ನು ತಪ್ಪಾಗಿ ಮತ್ತು ಕಾನೂನುಬಾಹಿರವಾಗಿ ತಡೆಹಿಡಿದಿದೆ ಎಂದು ಏಪ್ರಿಲ್ 4ರಂದು ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೆ ಉತ್ಪನ್ನ ಲುಧಿಯಾನ ತಲುಪುವುವಂತೆ ನೋಡಿಕೊಳ್ಳಲು ನ್ಯಾಯಾಲಯ ಮತ್ತೆ ಮತ್ತೆ ಮಧ್ಯಪ್ರವೇಶಿಸಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿತು.
ಆಗಲೂ, ಅಧಿಕಾರಿಗಳು ಮೊದಲಿನಂತೆ ಹಣ್ಣುಗಳು ಇರಾನ್ ಮೂಲದವಲ್ಲ ಚಿಲಿ ದೇಶದವು ಎಂಬ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರಿಂದ ಸರಕುಗಳನ್ನು ಬಿಡುಗಡೆ ಮಾಡಲಿಲ್ಲ ಎಂದ ನ್ಯಾಯಾಲಯ, ಅಂತಿಮವಾಗಿ ಹಣ್ಣುಗಳನ್ನು ಬಿಡುಗಡೆ ಮಾಡಿದಾಗ, ಅವು ಸಂಪೂರ್ಣವಾಗಿ ಹಾನಿಗೊಳಗಾಗಿದ್ದವು ಎಂದಿತು
ಅಂತೆಯೇ ಆಮದುದಾರರಿಗೆ ನಷ್ಟ ಉಂಟುಮಾಡುವಲ್ಲಿ ಪ್ರತಿವಾದಿಗಳು ಅಳವಡಿಸಿಕೊಂಡ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದ ನ್ಯಾಯಾಲಯ ಪರಿಹಾರ ಧನ ಮತ್ತು ಕಸ್ಟಮ್ಸ್ ಸುಂಕ ಮರುಪಾವತಿಸುವಂತೆ ಆದೇಶಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]