
ಗೋವಾದಲ್ಲಿ 2022ರಲ್ಲಿ ಮೃತಪಟ್ಟಿದ್ದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಸಾವಿಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಮಾನಹಾನಿ ಮಾಡಲಾಗಿದೆ ಎಂದು ದೂರಿ ಎಂದು ಹರಿಯಾಣದ ಮಾಜಿ ಶಾಸಕ ಮತ್ತು ಉದ್ಯಮಿ ಗೋಪಾಲ್ ಕಾಂಡಾ ಅವರು ಟಿವಿ ಟುಡೇ ನೆಟ್ವರ್ಕ್ ಒಡೆತನದ ಆಜ್ ತಕ್ ವಿರುದ್ಧ ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆ ರದ್ದತಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ [ಟಿವಿ ಟುಡೇ ನೆಟ್ವರ್ಕ್ ಲಿಮಿಟೆಡ್ ಮತ್ತು ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಮಾನಹಾನಿ ವಿಚಾರವಾಗಿ ಗುರುಗ್ರಾಮದ ಪೊಲೀಸರು ಆಜ್ ತಕ್ ಮತ್ತಿತರ ಮಾಧ್ಯಮಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಕಾಂಡಾ ಅವರ ದೂರಿನ ಹಿನ್ನೆಲೆಯಲ್ಲಿ ಅಸಂಜ್ಞೇಯ ಅಪರಾಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ನಿರ್ದೇಶನವನ್ನು ಟಿವಿ ಟುಡೇ ಪ್ರಶ್ನಿಸಿತ್ತು. ಅದು ಆರೋಪಪಟ್ಟಿಗೂ ಆಕ್ಷೇಪ ವ್ಯಕ್ತಪಡಿಸಿತ್ತು.
ಕಾಂಡಾ ಅವರ ದೂರಿನಲ್ಲಿ ಅಸಂಜ್ಞೇಯ ಅಪರಾಧ ಇದ್ದುದರಿಂದ, ಅವರು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 155ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸಿದ್ದರು ಎಂದು ನ್ಯಾಯಮೂರ್ತಿ ತ್ರಿಭುವನ್ ದಹಿಯಾ ತಿಳಿಸಿದರು. ನಂತರ ಮ್ಯಾಜಿಸ್ಟ್ರೇಟ್ ಅವರು ಪೊಲೀಸರಿಗೆ ಅಸಂಜ್ಞೇಯ ಅಪರಾಧ ವರದಿ ದಾಖಲಿಸಿ ತನಿಖೆ ನಡೆಸುವಂತೆ ನಿರ್ದೇಶಿಸಿದ್ದರು. ಸಿಆರ್‌ಪಿಸಿ ಸೆಕ್ಷನ್ 155(2) ರ ಅಡಿಯಲ್ಲಿ ಅಸಂಜ್ಞೇಯ ಅಪರಾಧವನ್ನು ತನಿಖೆ ಮಾಡಲು ನಿರ್ದೇಶನ ನೀಡುವ ಅಧಿಕಾರ ಮ್ಯಾಜಿಸ್ಟ್ರೇಟ್‌ಗೆ ಇದೆ ಎಂದು ನ್ಯಾಯಾಲಯ ತೀರ್ಪು ನೀಡಿತು. ಹೀಗಾಗಿ, ಎನ್‌ಸಿಆರ್ ನೋಂದಣಿಯ ನಂತರ ಅನುಸರಿಸುವ ಕಾರ್ಯವಿಧಾನ ಮತ್ತು ತನಿಖೆಗೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಅದು ಅಭಿಪ್ರಾಯಪಟ್ಟಿತು.
ಮಾನನಷ್ಟ ಪ್ರಕರಣದಲ್ಲಿ, ಎಫ್‌ಐಆರ್ ದಾಖಲಿಸುವುದು ಮತ್ತು ಅದರ ಪರಿಣಾಮವಾಗಿ ತನಿಖೆ ನಡೆಸುವುದಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್ 199ರ ಅಡಿಯಲ್ಲಿ ನಿರ್ದಿಷ್ಟ ನಿರ್ಬಂಧ ಇರುವ ಕಾರಣ, ಮ್ಯಾಜಿಸ್ಟ್ರೇಟ್ ಅವರು ಪೊಲೀಸರಿಗೆ ನಿರ್ದೇಶನಗಳನ್ನು ನೀಡುವಲ್ಲಿ ಅಳವಡಿಸಿಕೊಂಡ ಕಾರ್ಯವಿಧಾನ ಕಾನೂನುಬದ್ಧವಾಗಿಲ್ಲ ಎಂದು ಟಿವಿ ಟುಡೇ ವಾದಿಸಿತ್ತು.
ಆದರೆ ಪ್ರಸ್ತುತ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಅವರು ಎಫ್‌ಐಆರ್ ನೋಂದಣಿಗೆ ಸಿಆರ್‌ಪಿಸಿಯ ಸೆಕ್ಷನ್ 156(3) ರ ಅಡಿಯಲ್ಲಿ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಟಿವಿ ಟುಡೇ ನೆಟ್‌ವರ್ಕ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ "ಅರ್ಜಿದಾರರ ವಿರುದ್ಧ ಅಸಂಜ್ಞೇಯ ಅಪರಾಧವನ್ನು ಬಹಿರಂಗಪಡಿಸಿದ ಎರಡನೇ ಪ್ರತಿವಾದಿಯ ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಲಾಗಿದ್ದು ಸಿಆರ್‌ಪಿಸಿ ಸೆಕ್ಷನ್ 155(2) ಅಡಿಯಲ್ಲಿ ನೀಡಲಾದ ನಿರ್ದೇಶನಗಳ ಪ್ರಕಾರ ಆರೋಪಪಟ್ಟಿ ಸಲ್ಲಿಸಲಾಗಿದೆ" ಎಂದಿದೆ.
[ತೀರ್ಪಿನ ಪ್ರತಿ]