ಪೊಲೀಸರಿಗೆ ಬಾಡಿವೋರ್ನ್‌ ಕ್ಯಾಮೆರಾ ಖರೀದಿ: ಕಾರ್ಯಾದೇಶ ಸಲ್ಲಿಕೆಗೆ ಸರ್ಕಾರಕ್ಕೆ ವಾರದ ಗಡುವು ನೀಡಿದ ಹೈಕೋರ್ಟ್‌

ಬಾಡಿವೋರ್ನ್‌ ಕ್ಯಾಮೆರಾ ಧರಿಸುವುದರಿಂದ ಪೊಲೀಸ್ ಸಿಬ್ಬಂದಿಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಯನ್ನು ಪೊಲೀಸ್ ಠಾಣೆಯಿಂದಲೇ ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬಹುದು ಎಂದು ಹೇಳಲಾಗಿದೆ.
Karnataka HC and Police Personnel
Karnataka HC and Police Personnel

ಕಾನೂನು ಸುವ್ಯವಸ್ಥೆ ಹಾಗೂ ಮೇಲ್ವಿಚಾರಣೆ ದೃಷ್ಟಿಯಿಂದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯು ಬಳಸಲು ಬಾಡಿವೋರ್ನ್‌ ಕ್ಯಾಮೆರಾ (ದೇಹದ ಮೇಲೆ ಧರಿಸಲಾಗುವ ಕ್ಯಾಮೆರಾ) ಖರೀದಿಗಾಗಿ ಹೊರಡಿಸಿರುವ ಕಾರ್ಯಾದೇಶ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ದಾಖಲೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ಒಂದು ವಾರದ ಕಾಲಾವಕಾಶ ನೀಡಿದೆ.

ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠವು ಗುರುವಾರ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಎಚ್‌ ವಾಣಿ ಅವರು “ಬಾಡಿವೋರ್ನ್‌ ಕ್ಯಾಮೆರಾ ಖರೀದಿಗಾಗಿ ಹೊರಡಿಸಿರುವ ಕಾರ್ಯಾದೇಶ ಮತ್ತು ಇತರೆ ಎಲ್ಲಾ ದಾಖಲೆಗಳು ಸಿದ್ಧವಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಇ-ಫೈಲಿಂಗ್ ಮಾಡಲಾಗಲಿಲ್ಲ. ಒಂದು ವಾರ ಕಾಲಾವಕಾಶ ನೀಡಿದರೆ ನ್ಯಾಯಾಲಯಕ್ಕೆ ಎಲ್ಲಾ ಅಗತ್ಯ ದಾಖಲೆ ಸಲ್ಲಿಸಲಾಗುವುದು” ಎಂದರು. ಇದನ್ನು ಪುರಸ್ಕರಿಸಿದ ಪೀಠವು ಫೆಬ್ರವರಿ 7ಕ್ಕೆ ವಿಚಾರಣೆ ಮುಂದೂಡಿತು.

ಕಳೆದ ವಿಚಾರಣೆಯ ಸಂದರ್ಭದಲ್ಲಿ ಬಾಡಿವೋರ್ನ್‌ ಕ್ಯಾಮೆರಾ ಖರೀದಿಗಾಗಿ ಹೊರಡಿಸಿರುವ ಕಾರ್ಯಾದೇಶ ಮತ್ತು ಇತರೆ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪೀಠವು ಸರ್ಕಾರಕ್ಕೆ ಸೂಚಿಸಿತ್ತು.

Also Read
ಅಂಬೇಡ್ಕರ್‌ ಭಾವಚಿತ್ರ ಗೊಂದಲ: ವಕೀಲರು, ಸಂಘಟನೆಗಳಿಂದ ಮನವಿ ಸಲ್ಲಿಕೆ; ವರದಿ ಕೇಳಿದ ಹೈಕೋರ್ಟ್

ಅರ್ಜಿದಾರರ ಮನವಿ ಏನು?

ಬಾಡಿವೋರ್ನ್‌ ಕ್ಯಾಮೆರಾ ಧರಿಸುವುದರಿಂದ ಪೊಲೀಸ್ ಸಿಬ್ಬಂದಿಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಪೊಲೀಸ್ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಯನ್ನು ಪೊಲೀಸ್ ಠಾಣೆಯಿಂದಲೇ ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬಹುದು. ಕಾನೂನು ಉಲ್ಲಂಘನೆ ಪ್ರಕರಣಗಳಲ್ಲಿ ಪ್ರಶ್ನಿಸಿದ ಪೊಲೀಸರ ಮೇಲೆ ತಪ್ಪಿತಸ್ಥರೇ ತಿರುಗಿಬಿದ್ದಿರುವ ಘಟನೆಗಳು ಸಾಕಷ್ಟಿವೆ. ಬಾಡಿವೋರ್ನ್‌ ಕ್ಯಾಮೆರಾ ಧರಿಸುವುದರಿಂದ ಪೊಲೀಸರಿಗೆ ರಕ್ಷಣೆ ಸಿಗಲಿದೆ. ಆದ್ದರಿಂದ ಬೆಂಗಳೂರು ನಗರ ಪೊಲೀಸರಿಗಾಗಿ ಖರೀದಿಸಿರುವ 50 ಬಾಡಿವೋರ್ನ್‌ ಕ್ಯಾಮೆರಾ ಬಳಸುವಂತೆ ನಿರ್ದೇಶಿಸಬೇಕು. ರಾಜ್ಯಾದ್ಯಂತ ಪೊಲೀಸರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಅನುಕೂಲವಾಗುವಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಾಡಿವೋರ್ನ್‌ ಕ್ಯಾಮೆರಾ ಖರೀದಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com