[ನಾಡಗೀತೆಯ ರಾಗದ ಕುರಿತಾದ ಜಿಜ್ಞಾಸೆ] ಸಂಬಂಧಿತ ಎಲ್ಲರೂ ಒಮ್ಮತದ ನಿರ್ಧಾರ ಕೈಗೊಳ್ಳಬಹುದು: ಹೈಕೋರ್ಟ್‌

ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ರಾಜ್ಯ ಅಥವಾ ರಾಷ್ಟ್ರಗೀತೆಯನ್ನು ತನ್ನ ಇಚ್ಛೆಯ ಟ್ಯೂನ್‌ನಲ್ಲಿ ಹಾಡುವ ಹಕ್ಕು ಸೇರಿದೆ ಎಂದು ವಾದಿಸಿದ ಅರ್ಜಿದಾರರ ಪರ ವಕೀಲರು.
Karnataka HC and Kuvempu
Karnataka HC and Kuvempu
Published on

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ನಾಡಗೀತೆ ಹಾಡುವುದಕ್ಕೆ ಆಕ್ಷೇಪಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಎಲ್ಲರೂ ಒಮ್ಮತದ ನಿರ್ಧಾರ ಕೈಗೊಳ್ಳುವ ಅವಕಾಶವಿದೆ ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಹೇಳಿದೆ.

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವ ಸಂಬಂಧ ರಾಜ್ಯ ಸರ್ಕಾರ ಸೆಪ್ಟೆಂಬರ್ 25ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು “ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ರಾಜ್ಯ ಅಥವಾ ರಾಷ್ಟ್ರಗೀತೆಯನ್ನು ತನ್ನ ಇಚ್ಛೆಯ ಟ್ಯೂನ್‌ನಲ್ಲಿ ಹಾಡುವ ಹಕ್ಕು ಸೇರಿದೆ. ಸರ್ಕಾರಿ ಶಾಲೆ, ಅನುದಾನಿತ, ಅನುದಾನರಹಿತ ಶಾಲೆ, ಶಾಸನಬದ್ಧ ನಿಗಮ ಮಂಡಳಿಗೂ ಇದು ಅನ್ವಯಿಸುತ್ತದೆ. ಶಾಸನದ ಬೆಂಬಲವಿಲ್ಲದೇ ಆ ಹಕ್ಕನ್ನು ಮೊಟಕುಗೊಳಿಸಲಾಗದು. ಮೂಲಭೂತ ಹಕ್ಕನ್ನು ಮೊಟಕುಗೊಳಿಸಲು ಅಥವಾ ನಿರ್ಬಂಧಿಸಲು ಕಾರ್ಯಕಾರಿ ಅಧಿಕಾರವನ್ನು ಬಳಕೆ ಮಾಡಲಾಗದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಶಾಸನವಿಲ್ಲ” ಎಂದರು.

ಆಗ ಪೀಠವು “ಗದ್ದಲ ಆಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಒಂದೇ ರಾಗದಲ್ಲಿ ಹಾಡಬೇಕು ಎಂದು ಸರ್ಕಾರ ಹೀಗೆ ಮಾಡಿರಬಹುದು” ಎಂದಿತು.

ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು “ರಾಜ್ಯ ಸರ್ಕಾರವು ಮಾರ್ಪಾಡು ಮಾಡಿ ಆದೇಶ ಮಾಡಿದೆ. ಖಾಸಗಿ ಸ್ಥಳಗಳಲ್ಲಿ ಅರ್ಜಿದಾರರ ಹಕ್ಕಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ನಾಡಗೀತೆ/ರಾಷ್ಟ್ರಗೀತೆ ಹಾಡುವುದು ಕಾರ್ಯಕಾರಿ ಸೂಚನೆಯಲ್ಲ. ಕರ್ನಾಟಕ ಶಿಕ್ಷಣ ಕಾಯಿದೆ 1983ಯ ಸೆಕ್ಷನ್‌ 113 (3), 7(2)ಯಲ್ಲಿ ಅಧಿಕಾರ ನೀಡಲಾಗಿದೆ. ಅದಾಗ್ಯೂ, ಹಿಜಾಬ್‌ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ಪೂರ್ಣಪೀಠವು ಹಿಜಾಬ್‌ ಪ್ರಕರಣದಲ್ಲಿ ಶಾಲೆ ಸೇರಿದಂತೆ ನಿರ್ದಿಷ್ಟ ಸ್ಥಳಗಳು ಹಾಗೂ ಇತ್ಯಾದಿ ಪ್ರದೇಶಗಳಲ್ಲಿ ಬೇರೆ ಕಡೆ ಇರುವಂತೆ ಜನರ ಹಕ್ಕು ಇರುವುದಿಲ್ಲ ಎಂದು ಹೇಳಿದೆ” ಎಂದರು.

ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಹಾಡುವುದು ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ ಎಂಬುದು ಹಾಗೂ ಇತರೆ ವಿಚಾರಗಳ ಕುರಿತು ಸರ್ಕಾರದಿಂದ ಸೂಚನೆ ಪಡೆಯಲಾಗುವುದು ಎಂದು ಎಎಜಿ ಹೇಳಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿತು.

ಡಿವಿಜಿ ನೆನೆದ ನ್ಯಾಯಮೂರ್ತಿ 

ಡಿ ವಿ ಗುಂಡಪ್ಪ ಅವರು ಸಾಹಿತ್ಯಲೋಕಕ್ಕೆ ಅಭೂತಪೂರ್ವ ಕೊಡುಗೆ ನೀಡಿದವರು. ಅವರ ಜೀವನ ಧರ್ಮ ಯೋಗ ಅತ್ಯಂತ ಮಹತ್ವ ಪೂರ್ಣ ಕೃತಿ. ಅಂತಃಪುರದ ಗೀತೆಗಳು, ಡಿವಿಜಿಯ ಮುನ್ನುಡಿ, ,ಬಾಳಿಗೊಂದು ನಂಬಿಕೆ ಸೇರಿ ಅವರ ಹಲವು ಪುಸ್ತಕ ತಮಗೆ ಖುಷಿ ನೀಡಿದೆ ಹಾಗೂ ಪ್ರಭಾವ ಬೀರಿರುವುದಾಗಿ ತಿಳಿಸಿದರು.

ಏನಿದು ಪ್ರಕರಣ: ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವ ಸಂಬಂಧ ರಾಜ್ಯ ಸರ್ಕಾರ ಸೆಪ್ಟೆಂಬರ್ 25ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಅರ್ಜಿ ಸಲ್ಲಿಸಿದರು.

Also Read
ನಾಡಗೀತೆ ಯಾವ ರಾಗದಲ್ಲಿ ಹಾಡಬೇಕು ಎಂಬ ಜಿಜ್ಞಾಸೆ: ರಸಋಷಿ ಏನೆಂದುಕೊಳ್ಳುತ್ತಾರೋ ಎಂದ ಹೈಕೋರ್ಟ್‌

ನಾಡಗೀತೆಗೆ ಮೈಸೂರು ಅನಂತಸ್ವಾಮಿಯವರ ರಾಗ ಸಂಯೋಜನೆ ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವು 2013ರ ಜೂನ್ 12ರಂದು ವಸಂತ ಕನಕಪುರ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯ ವಿಚಾರಗಳಿಗೆ ವಿರುದ್ಧವಾಗಿದೆ. ಮೈಸೂರು ಅನಂತಸ್ವಾಮಿಯವರು ಪೂರ್ಣ ನಾಡಗೀತೆಗೆ ರಾಗ ಸಂಯೋಜನೆ ಮಾಡಿಲ್ಲ ಎಂದು ಆ ಸಭೆಯಲ್ಲಿ ಚರ್ಚಿಸಲಾಗಿತ್ತು. ಡಾ. ಸಿ ಅಶ್ವಥ್ ಅವರ ರಾಗ ಸಂಯೋಜನೆ ಮುಂದುವರಿಸುವ ಬಗ್ಗೆ ಸ್ವತಃ ಮೈಸೂರು ಅನಂತಸ್ವಾಮಿಯವರು ಒಪ್ಪಿಕೊಂಡಿದ್ದರು. ಅಲ್ಲದೇ, ರಾಜ್ಯ ಸರ್ಕಾರವು ನಾಡೋಜ ಚನ್ನವೀರ ಕಣವಿ ನೇತೃತ್ವದ ಸಮಿತಿಯ ಶಿಫಾರಸ್ಸನ್ನು ಕಡೆಗಣಿಸಿದೆ. ಡಾ. ಸಿ ಅಶ್ವಥ್ ಅವರ ರಾಗ ಸಂಯೋಜನೆಯನ್ನು ಸಮಿತಿ ಶಿಫಾರಸ್ಸು ಮಾಡಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮೈಸೂರು ಅನಂತಸ್ವಾಮಿಯವರು ಫೂರ್ಣ ನಾಡಗೀತೆಗೆ ರಾಗ ಸಂಯೋಜನೆ ಮಾಡಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ. ಈ ಸಂಬಂಧ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸಿಲ್ಲ. ಈ ಹಿನ್ನೆಲೆಯಲ್ಲಿ ನಾಡಗೀತೆಯ ರಾಗ, ಧಾಟಿ ಮತ್ತು ಸಮಯದ ಮಿತಿ ಕುರಿತು ರಾಜ್ಯ ಸರ್ಕಾರ ತರಾತುರಿಯಲ್ಲಿ ಆದೇಶ ಹೊರಡಿಸಿದೆ. ಹೀಗಾಗಿ, ಆಕ್ಷೇಪಾರ್ಹವಾದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಲಾಗಿದೆ.

Kannada Bar & Bench
kannada.barandbench.com