ನಾಡಗೀತೆಯನ್ನು ಯಾವ ರಾಗದಲ್ಲಿ ಹಾಡಬೇಕು ಎನ್ನುವ ವಿಚಾರ ನ್ಯಾಯಾಲಯದ ಮೆಟ್ಟಿಲೇರಿರುವ ಬಗ್ಗೆ ರಸಋಷಿ ಕುವೆಂಪು ಅವರು ಏನೆಂದುಕೊಳ್ಳಬಹುದು ಎನ್ನುವ ಜಿಜ್ಞಾಸೆಗೆ ಕರ್ನಾಟಕ ಹೈಕೋರ್ಟ್ ಗುರುವಾರ ಸಾಕ್ಷಿಯಾಯಿತು.
“ರಸಋಷಿ (ಕುವೆಂಪು) ಮೇಲಿನಂದ ನಮ್ಮನ್ನು ನೋಡಿ ಏನಂದುಕೊಳ್ಳುತ್ತಾರೋ ಗೊತ್ತಿಲ್ಲ. ಇಂಥ ಉತ್ಕೃಷ್ಟವಾದ ಕಾವ್ಯವನ್ನು ಇವರಿಗೆ ನೀಡಿದೆ. ಆದರೆ, ಇದನ್ನು ಈ ರಾಗದಲ್ಲಿ ಹೇಳಬೇಕೋ, ಆ ರಾಗದಲ್ಲಿ ಹೇಳಬೇಕೋ, ಯಾವ ರಾಗದಲ್ಲಿ ಹೇಳಬೇಕು ಎಂಬುದು ಒಂದು ದೊಡ್ಡ ಜಿಜ್ಞಾಸೆಯಾಗಿ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಅಂದುಕೊಳ್ಳಬಹುದು” ಎಂದು ಕರ್ನಾಟಕ ಹೈಕೋರ್ಟ್ ಹೇಳಿತು.
ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರವು 2022ರ ಸೆಪ್ಟೆಂಬರ್ 25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು “ನಾಡಗೀತೆಯನ್ನು ಇದೇ ಧಾಟಿಯಲ್ಲಿ ಹಾಡಬೇಕು ಎಂದು ಆದೇಶ ಮಾಡಲು ರಾಜ್ಯ ಸರ್ಕಾರಕ್ಕೆ ಯಾವ ಅಧಿಕಾರವಿದೆ? ಸಿ ಅಶ್ವತ್ಥ್ ಅವರ ಸಂಯೋಜನೆ ಮತ್ತು ಹಾಡುಗಾರಿಕೆಯನ್ನು ಎಲ್ಲರೂ ಒಪ್ಪಿದ್ದಾರೆ. ಮೈಸೂರು ಅನಂತಸ್ವಾಮಿ ಅವರು ಪೂರ್ತಿಯಾಗಿ ಸ್ವರ ಸಂಯೋಜನೆ ಮಾಡಿಲ್ಲ. ಸರ್ಕಾರ ಈ ರೀತಿಯಲ್ಲಿ ಹಾಡಬೇಕು ಎಂದು ನಿರ್ದೇಶಿಸಲಾಗದು” ಎಂದು ಆಕ್ಷೇಪಿಸಿದರು.
ಆಗ ಪೀಠವು “ಶಾಲೆಯೊಂದರಲ್ಲಿ ಒಂದು ಸಾವಿರ ವಿದ್ಯಾರ್ಥಿಗಳ ಪೈಕಿ 500 ಮಂದಿ ಮೈಸೂರು ಅನಂತಸ್ವಾಮಿ ಅವರ ಸಂಯೋಜನೆಯಲ್ಲಿ ಹಾಡುತ್ತೇವೆ. ಉಳಿದವರು ಅಶ್ವತ್ಥ್ ಅವರ ಸಂಯೋಜನೆಯಲ್ಲಿ ಹಾಡುತ್ತೇವೆ ಎಂದರೆ ಏನು ಮಾಡುವುದು?” ಎಂದರು.
ಆಗ ಹಾರನಹಳ್ಳಿ ಅವರು “ಅದನ್ನು ಶಾಲೆಯ ಆಡಳಿತ ಮಂಡಳಿ ನಿರ್ಧರಿಸುತ್ತದೆ” ಎಂದರು. ಇದಕ್ಕೆ ಪೀಠವು “ಇದೇ ವಿದ್ಯಾರ್ಥಿಗಳು ಈ ಶಾಲೆ ಬಿಟ್ಟು ಬೇರೆ ಶಾಲೆಗೆ ತೆರಳಿದರೆ ಏನು ಮಾಡಬೇಕು? ಆಗ ಹಾಡಿನ ಘನತೆ ಉಳಿಯುವುದಿಲ್ಲ” ಎಂದಿತು.
“ಸುಗಮ ಸಂಗೀತದಲ್ಲಿ ಒಂದು ಕಾವ್ಯದ ಅರ್ಥ ಮತ್ತು ಭಾವವನ್ನು ಒಯ್ಯುವ ವಾಹನವಾಗಿ ರಾಗದ ಬಳಕೆಯಾಗುತ್ತದೆ ಎನ್ನಬಹುದೇ? ಇಲ್ಲಿ ಸಾಹಿತ್ಯ ಪ್ರಧಾನವಾಗಿದ್ದು, ಇದನ್ನು ಪ್ರೇಕ್ಷಕರು ಮತ್ತು ಕೇಳುಗರಿಗೆ ಅರ್ಥ ಮತ್ತು ಭಾವ ಒಯ್ಯುವ ವಾಹಕವಾಗಿ ಸ್ವರ ಅಥವಾ ರಾಗ ಕೆಲಸ ಮಾಡುತ್ತದೆ” ಎಂದಿತು.
ಮುಂದುವರಿದು, “ರಾಗ ಸರಳವಾಗಿದೆ ಎನ್ನಲಾಗದು. ಯುದ್ದದಲ್ಲಿ ಪಾಂಚಜನ್ಯ ಘೋಷಣೆ, ಯುದ್ದಕ್ಕೆ ಬೇಕಾದ ರಾಗ ಬೇರೆ, ಪ್ರೇಮಕ್ಕೆ ಬೇಕಾದ ರಾಗ ಬೇರೆ. ಯುದ್ದರಂಗದಲ್ಲಿ ಪ್ರೇಮ ರಾಗ ಹೇಳಲಾಗದು. ಯುದ್ದರಂಗದ ರಾಗಗಳನ್ನು ಪ್ರೇಮದ ಪವಿತ್ರ ಭೂಮಿಯಲ್ಲಿ ಹಾಡಲಾಗದು. ಸಾಹಿತ್ಯ ಪ್ರಧಾನವಾಗಿದ್ದರೂ, ರಾಗಕ್ಕೆ ತನ್ನದೇ ಮೌಲ್ಯವಿದೆ. ಇದು ಕಲಾತಪಸ್ವಿಗಳಿಗೆ ಸಂಬಂಧಿಸಿದ ವಿಷಯ” ಎಂದಿತು.
ನ್ಯಾಯಾಲಯದ ಕೋರಿಕೆಯಂತೆ ಇಂದು ವಿಚಾರಣೆಯಲ್ಲಿ ಭಾಗಿಯಾಗಿದ್ದ ಹೆಸರಾಂತ ಹಾಡುಗಾರ್ತಿ ಬಿ ಕೆ ಸುಮಿತ್ರಾ ಅವರು “ಯಾವುದೇ ರಾಗ ಸಂಯೋಜಕರು ಎರಡು ಮತ್ತು ಮೂರು ಚರಣಗಳಿಗೆ ಮಾತ್ರ ಸ್ವರ ಸಂಯೋಜನೆ ಮಾಡುತ್ತಾರೆ. ಉಳಿದ ಚರಣಗಳಿಗೆ ಈ ಸಂಯೋಜನೆ ಅರ್ಪಿಸುತ್ತಾರೆ. ಎಲ್ಲದಕ್ಕೂ ಸ್ವರ ಸಂಯೋಜನೆ ಮಾಡುವ ಅಗತ್ಯವಿಲ್ಲ” ಎಂದು ಸಂಕ್ಷಿಪ್ತವಾಗಿ ಪೀಠಕ್ಕೆ ವಿವರಿಸುವ ಮೂಲಕ ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಯನ್ನು ಅನುಮೋದಿಸಿದರು.
ಅರ್ಜಿದಾರರ ಪರವಾಗಿ ಸಂಗೀತ ಸಂಯೋಜಕರು ಮತ್ತು ಹಾಡುಗಾರರಾದ ಕಿಕ್ಕೇರಿ ಕೃಷ್ಣಮೂರ್ತಿ, ಮುದ್ದು ಕೃಷ್ಣ, ವೈ ಕೆ ಕಾಳಿಂಗರಾವ್ ಹಾಗೂ ಪ್ರತಿವಾದಿಗಳ ಪರವಾಗಿ ಬಿ ಕೆ ಸುಮಿತ್ರಾ,, ಮೃತ್ಯುಂಜಯ ದೊಡ್ಡವಾಡ, ಆನಂದ ಮಾದಲಗೆರೆ ಅವರು ನ್ಯಾಯಾಲಯಕ್ಕೆ ರಾಗ ಸಂಯೋಜನೆ, ರಾಗಗಳ ವ್ಯತ್ಯಾಸ ಸೇರಿದಂತೆ ಹಲವು ವಿಚಾರಗಳ ಕುರಿತು ಪೀಠಕ್ಕೆ ವಿವರಿಸಿದರು.
ಮಧ್ಯಂತರ ಅರ್ಜಿ ಸಲ್ಲಿಸಿರುವ ಮೃತ್ಯುಂಜಯ ದೊಡ್ಡವಾಡ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ಅವರನ್ನು ಕುರಿತು ಪೀಠವು “ಹಾಡು ಅರ್ಥಪೂರ್ಣವಾಗಿದ್ದು, ಯಾರೇ ಹಾಡಿದರೂ ಅರ್ಥ ಮತ್ತು ಭಾವ ಹೊಮ್ಮುತ್ತದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಇದೇ ರಾಗದಲ್ಲಿ ಹಾಡಬೇಕು ಎಂಬ ನಿಬಂಧನೆ ಮಾಡಲು ಕಾನೂನಿನ ಬೆಂಬಲ ಏನಿದೆ? ನಾಡಗೀತೆಯನ್ನು ಇಂಥದ್ಧೇ ರಾಗ ಅಥವಾ ದಾಟಿಯಲ್ಲಿ ಇದೇ ಸಂದರ್ಭದಲ್ಲಿ ಹಾಡಬೇಕು ಎಂದು ಹೇಳಲು ರಾಜ್ಯ ಸರ್ಕಾರಕ್ಕೆ ಯಾವ ಅಧಿಕಾರವಿದೆ” ಎಂದು ತಿಳಿಸುವಂತೆ ಸೂಚಿಸಿತು.
ವಾದ-ಪ್ರತಿವಾದಕ್ಕೂ ಮುನ್ನ ಪೀಠವು ಸಂಗೀತ ಸಂಯೋಜಕ ಮತ್ತು ಹಾಡುಗಾರ ಮೃತ್ಯುಂಜಯ ದೊಡ್ಡವಾಡ ಅವರು ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಮೂಲಕ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿತು. ವಕೀಲ ಎಚ್ ಸುನೀಲ್ ಕುಮಾರ್ ಅವರು ವಕಾಲತ್ತು ಹಾಕಿದ್ದಾರೆ.
“ಅರ್ಜಿದಾರ ಕಿಕ್ಕೇರಿ ಕೃಷ್ಣಮೂರ್ತಿ ಅವರು ವಾಸ್ತವಿಕ ವಿಚಾರಗಳನ್ನು ಸಂಪೂರ್ಣವಾಗಿ ನ್ಯಾಯಾಲಯದ ಮುಂದೆ ಇಟ್ಟಿಲ್ಲ. ಕೆಲವು ತಪ್ಪು ವಿಚಾರಗಳನ್ನು ಸೇರಿಸಿದ್ದು, ಮೈಸೂರು ಅನಂತ ಸ್ವಾಮಿ ಅವರು ಸಂಪೂರ್ಣವಾಗಿ ಹಾಡಿಗೆ ಸ್ವರ ಸಂಯೋಜನೆ ಮಾಡಿಲ್ಲ ಎಂದು ಹೇಳಿದ್ದಾರೆ. ಭಾಗಶಃ ಸಂಯೋಜನೆಯಾಗಿದ್ದು, ಅದನ್ನು ಅನುಷ್ಠಾನಗೊಳಿಸುವುದು ಕಷ್ಟ ಎಂದು ಹೇಳಿದ್ದಾರೆ. ಇದು ಸರಿಯಲ್ಲ” ಎಂದು ಮಧ್ಯಂತರ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
“ಮೈಸೂರು ಅನಂತಸ್ವಾಮಿ ಅವರು ಸಂಪೂರ್ಣವಾಗಿ ಸ್ವರ ಸಂಯೋಜನೆ ಮಾಡಿದ್ದು, ಕ್ಯಾಸೆಟ್‌ನಲ್ಲಿ ಹೆಚ್ಚು ಸ್ಥಳಾವಕಾಶ ಇರಲಿಲ್ಲ. ಹೀಗಾಗಿ, ನಿರ್ದಿಷ್ಟ ಅವಧಿಗೆ ಮಾತ್ರ ರೆಕಾರ್ಡ್ ಮಾಡಲಾಗಿದೆ ಎಂದು ಲಹರಿ ಆಡಿಯೊ ಸಂಸ್ಥೆಯು ಲಿಖಿತ ಪತ್ರ ನೀಡಿದೆ. ಇಂದಿಗೂ ಪೂರ್ಣ ಪ್ರಮಾಣದ ಸಂಯೋಜನೆಯನ್ನೇ ಹಾಡುಗಾರರು ಬಳಕೆ ಮಾಡುತ್ತಿದ್ದಾರೆ” ಎಂದು ಮಧ್ಯಂತರ ಅರ್ಜಿಯಲ್ಲಿ ವಿವರಿಸಲಾಗಿದೆ.
ಮಧ್ಯಂತರ ಅರ್ಜಿಯನ್ನು ಪೀಠವು ಪುರಸ್ಕರಿಸಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿತು. ಭಾಗಶಃ ವಾದ ಆಲಿಸಿದ ನ್ಯಾಯಾಲಯವು ವಿಚಾರಣೆ ಮುಂದೂಡಿತು.