ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ, ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ: ಮಸೂದೆಗಳಿಗೆ ರಾಜ್ಯಸಭೆ ಅಂಗೀಕಾರ

ಡಿಸೆಂಬರ್ 6ರಂದು ಲೋಕಸಭೆಯಲ್ಲಿ ಅಂಗೀಕೃತವಾದ ಈ ಮಸೂದೆಗಳು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ, ಉದ್ಯೋಗ ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೆ ತರಲಿವೆ.
ಸಂಸತ್ತು
ಸಂಸತ್ತು
Published on

ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ- 2023 ಮತ್ತು 2023ರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆಯನ್ನು ರಾಜ್ಯಸಭೆ ಸೋಮವಾರ ಅಂಗೀಕರಿಸಿದೆ. 

ಡಿಸೆಂಬರ್ 6ರಂದು ಲೋಕಸಭೆಯಲ್ಲಿ ಅಂಗೀಕೃತವಾದ ಈ ಮಸೂದೆಗಳು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ, ಉದ್ಯೋಗ ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೆ ತರಲಿವೆ.

ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ಕಾಯ್ದೆ, 2004ನ್ನು ಬದಲಿಸಲಿರುವ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ- 2023 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸದಸ್ಯರಿಗೆ ಉದ್ಯೋಗ ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಲಿದೆ.

ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ, 2019ನ್ನು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ- 2023 ಬದಲಿಸಲಿದೆ. 2019ರ ಕಾಯಿದೆಯು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಸ್ಥಾನಗಳ ಸಂಖ್ಯೆಯನ್ನು (ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬರುವ ಪ್ರದೇಶಗಳಿಗೆ ಗೊತ್ತುಪಡಿಸಿದ ಸ್ಥಾನಗಳನ್ನು ಹೊರತುಪಡಿಸಿ) 83 ಎಂದು ನಿಗದಿಪಡಿಸಿತ್ತು. ಆ ಸ್ಥಾನಗಳಲ್ಲಿ 6 ಸ್ಥಾನಗಳನ್ನು ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಕಾಯ್ದಿರಿಸಲಾಗಿದೆ, ಆದರೆ ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಯಾವುದೇ ಮೀಸಲಾತಿ ಕಲ್ಪಿಸುತ್ತಿರಲಿಲ್ಲ.

ಹೊಸ ಮಸೂದೆಯು ಒಟ್ಟು ಸ್ಥಾನಗಳ ಸಂಖ್ಯೆಯನ್ನು 90 ಕ್ಕೆ ಹೆಚ್ಚಿಸಿದ್ದು, ಎಸ್‌ಸಿಗಳಿಗೆ 7 ಸ್ಥಾನ ಮತ್ತು ಎಸ್‌ಟಿಗಳಿಗೆ 9 ಸ್ಥಾನಗಳನ್ನು ಮೀಸಲಿಡುತ್ತದೆ.

ಇದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕಾಶ್ಮೀರಿ ವಲಸಿಗ ಸಮುದಾಯದಿಂದ ಇಬ್ಬರು ಸದಸ್ಯರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಲು ಅನುವು ಮಾಡಿಕೊಡುತ್ತದೆ. ಇವರಲ್ಲಿ ಒಬ್ಬರು ಮಹಿಳೆಯಾಗಿರಬೇಕು.

ಈ ಮಸೂದೆಯು 1947-48, 1965 ಅಥವಾ 1971ರಲ್ಲಿ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಿಂದ ಸ್ಥಳಾಂತರಗೊಂಡ ವ್ಯಕ್ತಿಗಳನ್ನು ಪ್ರತಿನಿಧಿಸುವ ಒಬ್ಬ ಸದಸ್ಯರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಲು ಈ ಮಸೂದೆ ಲೆ. ಗವರ್ನರ್‌ಗೆ ಅನುವು ಮಾಡಿಕೊಡುತ್ತದೆ.

ಮುಖ್ಯವಾಗಿ, ಸಂವಿಧಾನದ 370 ನೇ ವಿಧಿನು ರದ್ದುಪಡಿಸಿದ ಆದೇಶ ಎತ್ತಿ ಹಿಡಿದು ಸೋಮವಾರ ನೀಡಿದ ತೀರ್ಪಿನಲ್ಲಿ , ಜಮ್ಮು ಕಾಶ್ಮೀರದಲ್ಲಿ ಸೆಪ್ಟೆಂಬರ್ 30, 2024ರೊಳಗೆ ಚುನಾವಣೆ ನಡೆಸುವಂತೆ ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ , ಮರುಸಂಘಟನೆ ಮಸೂದೆಯು ಪರಿಶಿಷ್ಟ ಪಂಗಡಗಳಿಗೆ ಸ್ಥಾನಗಳನ್ನು ಕಾಯ್ದಿರಿಸಲಿದ್ದು 370 ನೇ ವಿಧಿ ರದ್ದುಪಡಿಸದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ರದ್ದತಿಯನ್ನು ಸಮರ್ಥಿಸಿಕೊಂಡ ಅವರು, 1949 ರಲ್ಲಿ ಭಾರತದೊಂದಿಗೆ ವಿಲೀನಗೊಂಡ ನಂತರ ಜಮ್ಮು ಕಾಶ್ಮೀರ ಯಾವುದೇ ಆಂತರಿಕ ಸಾರ್ವಭೌಮತ್ವ ಹೊಂದಿಲ್ಲ ಮತ್ತು 370 (3)ನೇ ವಿಧಿಯು ಜಮ್ಮು ಕಾಶ್ಮೀರದ ಸಂವಿಧಾನ ಸಭೆಯನ್ನು ವಿಸರ್ಜಿಸಿದ ಮಾತ್ರಕ್ಕೆ ಕಾರ್ಯನಿರ್ವಹಣೆ ನಿಲ್ಲಿಸಲಿಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪನ್ನು ಪ್ರಸ್ತಾಪಿಸಿದರು. .

ಅಮಿತ್ ಶಾ
ಅಮಿತ್ ಶಾಸಂಸದ್ ಟಿವಿ

ಚುನಾವಣಾ ಆಯೋಗಕ್ಕೆ ನೀಡಿದ ನಿರ್ದೇಶನ ಎತ್ತಿ ತೋರಿಸಿದ ವಿರೋಧ ಪಕ್ಷದ ಸಂಸದರಿಗೆ ಪ್ರತಿಕ್ರಿಯಿಸಿದ ಶಾ, "ಹಾಗಾದರೆ ಚುನಾವಣಾ ಆಯೋಗಕ್ಕೆ ಯಾವ ನಿರ್ದೇಶನ ನೀಡಲಾಗಿದೆ? ಚುನಾವಣೆ ನಡೆಸಲಾಗುತ್ತದೆ ಎಂದು ನಾನೇ ಹೇಳಿದ್ದೇನೆ. ಸೂಕ್ತ ಸಮಯದಲ್ಲಿ, ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಭುತ್ವವನ್ನು ಪುನಃಸ್ಥಾಪಿಸುತ್ತೇವೆ ಎಂದು ಹೇಳಿದ್ದೇನೆ" ಎಂದರು.

[ಮಸೂದೆಗಳ ಪ್ರತಿಯನ್ನು ಇಲ್ಲಿ ಓದಿ]

Attachment
PDF
Jammu and Kashmir Reservation (Amendment) Bill, 2023.pdf
Preview
Attachment
PDF
Jammu and Kashmir Reorganisation (Amendment) Bill, 2023.pdf
Preview
Kannada Bar & Bench
kannada.barandbench.com