ಮೆಟ್ರೊ ನಿಲ್ದಾಣಕ್ಕೆ ಹಾನಿ, ಕೊರೊನಾ ಮಾರ್ಗಸೂಚಿ ಉಲ್ಲಂಘನೆ: ಕರವೇ ಅಧ್ಯಕ್ಷ ನಾರಾಯಣಗೌಡಗೆ ಜಾಮೀನು ಮಂಜೂರು

ಒಂದನೇ ಎಸಿಎಂಎಂ ನ್ಯಾಯಾಲಯವು ನಾರಾಯಣಗೌಡ ಅವರ ಜಾಮೀನು ಅರ್ಜಿ ಪುರಸ್ಕರಿಸಿ, 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು 5 ಸಾವಿರ ರೂಪಾಯಿ ನಗದಿನ ಭದ್ರತಾ ಖಾತರಿ ಪಡೆದು ಜಾಮೀನು ಮಂಜೂರು ಮಾಡಿತು.
T A Narayana Gowda
T A Narayana Gowda

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಬಳಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿರುವುದು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ ಎನ್‌ ನಾರಾಯಣ ಗೌಡ ಕೊನೆಗೂ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ನಾಮಫಲಕ ಅಳವಡಿಕೆ ವಿಚಾರದಲ್ಲಿ ಪ್ರತಿಭಟನೆ ನಡೆಸಿ ಚಿಕ್ಕಜಾಲ ಠಾಣಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಾರಾಯಣ ಗೌಡ ಅವರು ಜಾಮೀನು ಮೇಲೆ ಮಂಗಳವಾರ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ 2017ರಲ್ಲಿ ಮೆಟ್ರೊ ನಿಲ್ದಾಣಕ್ಕೆ ಹಾನಿ ಮಾಡಿದ್ದ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್‌ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದ ಕಾರಣ ಅವರು ಮತ್ತೆ ಜೈಲು ಸೇರಿದ್ದರು. ಈ ಹಿನ್ನೆಲೆಯಲ್ಲಿ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಬುಧವಾರ ನಡೆಸಿದ 30ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ (ಎಸಿಎಂಎಂ) ಜಿ ತಿಮ್ಮಯ್ಯ ಅವರು ಜಾಮೀನು ಮನವಿಯನ್ನು ಪುರಸ್ಕರಿಸಿದರು.

ಇದರ ಬೆನ್ನಲ್ಲೇ 2020ರಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದ ಪ್ರಕರಣ ಸಂಬಂಧ ಸಂಜೆ 4 ಗಂಟೆಗೆ ಹಲಸೂರು ಗೇಟ್‌ ಠಾಣಾ ಪೊಲೀಸರು ನಾರಾಯಣಗೌಡ ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿ 1ನೇ ಎಸಿಎಂಎಂ ಮ್ಯಾಜಿಸ್ಟ್ರೇಟ್‌ ಆನಂದ್‌ ಎಸ್.‌ ಕರಿಯಮ್ಮನವರ್‌ ಅವರ ಮುಂದೆ ಹಾಜರುಪಡಿಸಿದ್ದರು.

Also Read
ಜಾಮೀನಿನ ಮೇಲೆ ಬಿಡುಗಡೆಯಾದ ಕೆಲ ಹೊತ್ತಿನಲ್ಲಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಕರವೇ ಅಧ್ಯಕ್ಷ ನಾರಾಯಣಗೌಡ

ಆಗ ಜಾಮೀನು ಕೋರಿ ನಾರಾಯಣಗೌಡ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು 1ನೇ ಎಸಿಎಂಎಂ ನ್ಯಾಯಾಲಯವು ಪುರಸ್ಕರಿಸಿ, 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು 5 ಸಾವಿರ ರೂಪಾಯಿ ನಗದಿನ ಭದ್ರತಾ ಖಾತರಿ ಪಡೆದು ಜಾಮೀನು ಮಂಜೂರು ಮಾಡಿತು.

Related Stories

No stories found.
Kannada Bar & Bench
kannada.barandbench.com