ಉದ್ಯಮಿ ಅನಿಲ್ ಅಂಬಾನಿಗೆ ರಕ್ಷಣೆ ನೀಡಿದ್ದ ತಡೆಯಾಜ್ಞೆ ರದ್ದತಿ ಕೋರಿ ಬಾಂಬೆ ಹೈಕೋರ್ಟ್‌ಗೆ ಬ್ಯಾಂಕ್‌ಗಳ ಮನವಿ

ಬಿಡಿಒ ಸಂಸ್ಥೆ ನೀಡಿದ ವಿಶೇಷ ಲೆಕ್ಕ ಪರಿಶೋಧನಾ ವರದಿಗೆ ಅರ್ಹ ಲೆಕ್ಕ ಪರಿಶೋಧಕರ ಸಹಿ ಇರಲಿಲ್ಲವಾದ್ದರಿಂದ ಅದು ನಂಬಲರ್ಹವಲ್ಲ ಎಂದು ತಿಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಲಾಗಿದೆ.
Anil Ambani and Bombay High CourtAnil Ambani ( Twitter)
Anil Ambani and Bombay High CourtAnil Ambani ( Twitter)
Published on

ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ಸಮೂಹ ಸಂಸ್ಥೆಗಳ ಕುರಿತು ಅಕ್ಟೋಬರ್ 2020ರಲ್ಲಿ ನಡೆದ ಲೆಕ್ಕ ಪರಿಶೋಧನಾ ತಪಾಸಣೆ ವರದಿ ಆಧರಿಸಿ ಉದ್ಯಮಿ ಅನಿಲ್ ಅಂಬಾನಿ ವಿರುದ್ಧ ಕೈಗೊಂಡಿದ್ದ ಎಲ್ಲ ಬಲವಂತದ ಕ್ರಮಗಳಿಗೆ ತಡೆ ನೀಡಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್ ಹಾಗೂ ಲೆಕ್ಕ ಪರಿಶೋಧಕ ಸಂಸ್ಥೆಯಾದ ಬಿಡಿಒ ಇಂಡಿಯಾ ಅರ್ಜಿ ಸಲ್ಲಿಸಿವೆ [ಬ್ಯಾಂಕ್‌ ಆಫ್‌ ಬರೋಡಾ ಇನ್ನಿತರರು ಮತ್ತು ಅನಿಲ್‌ ಅಂಬಾನಿ ಮತ್ತಿತರರ ನಡುವಣ ಪ್ರಕರಣ].

ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಖಡ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸೋಮವಾರ ವಿಚಾರಣೆ ಕೈಗೆತ್ತಿಕೊಂಡಿದ್ದು, ನಾಳೆ (ಜನವರಿ 14) ವಾದ ಮುಂದುವರೆಯಲಿದೆ.

Also Read
ಅನಿಲ್ ಅಂಬಾನಿ ವಿರುದ್ಧ ಬ್ಯಾಂಕ್‌ಗಳ ಕ್ರಮಕ್ಕೆ ಬಾಂಬೆ ಹೈಕೋರ್ಟ್ ತಡೆ

ಅನಿಲ್ ಅಂಬಾನಿಯ ಖಾತೆಯನ್ನು ವಂಚನೆ ಎಂದು ವರ್ಗೀಕರಿಸಲು ಉಲ್ಲೇಖಿಸಿದ್ದ ವಿಶೇಷ ಲೆಕ್ಕ ಪರಿಶೋಧನಾ ವರದಿಗೆ ಅರ್ಹ ಚಾರ್ಟರ್ಡ್ ಅಕೌಂಟೆಂಟ್ ಅವರ ಸಹಿ ಇರಲಿಲ್ಲವಾದ್ದರಿಂದ ಬಿಡಿಒ ಸಂಸ್ಥೆ ನೀಡಿದ ಲೆಕ್ಕಪರಿಶೋಧನಾ ವರದಿ ನಂಬಲರ್ಹವಲ್ಲ ಎಂದು ತಿಳಿಸಿದ್ದ ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರಿದ್ದ ಏಕಸದಸ್ಯ ಪೀಠ ಅಂಬಾನಿ ವಿರುದ್ಧ ಬ್ಯಾಂಕುಗಳು ಬಲವಂತದ ಕ್ರಮ ಕೈಗೊಳ್ಳದಂತೆ ತಡೆ ಹಿಡಿದಿತ್ತು.

ಈ ಆದೇಶ ಪ್ರಶ್ನಿಸಿ ಸಂಬಂಧಪಟ್ಟ ಬ್ಯಾಂಕ್‌ಗಳು ಹಾಗೂ ಲೆಕ್ಕಪರಿಶೋಧನಾ ಸಂಸ್ಥೆ ಬಿಡಿಒ ಇಂಡಿಯಾ ಬಾಂಬೆ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿವೆ.

ಬ್ಯಾಂಕುಗಳ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅನಿಲ್ ಅಂಬಾನಿ ಸಲ್ಲಿಸಿದ ಮೊಕದ್ದಮೆ ಸಂಪೂರ್ಣವಾಗಿ ಕಾಲಾವಧಿ ಮೀರಿದ್ದು, ಮೂರನೇ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಆರ್‌ಟಿಐ ಅರ್ಜಿ ಹಾಗೂ ಅದಕ್ಕೆ ಐಸಿಎಐ ನೀಡಿದ ಪ್ರತಿಕ್ರಿಯೆಯ ಮೇಲೆಯೇ ಆಧಾರಿತವಾಗಿದೆ ಎಂದು ವಾದಿಸಿದರು.

2021ರ ವಿಶೇಷ ಲೆಕ್ಕಪರಿಶೋಧನಾ ವರದಿ ಕುರಿತು ಅಂಬಾನಿ ಅವರಿಗೆ ಸಂಪೂರ್ಣ ಮಾಹಿತಿ ಇದ್ದು, ನಿಧಿಯನ್ನು ಬೇರೆಡೆಗೆ ವರ್ಗಾಯಿಸಿರುವುದು, ಕಲ್ಪಿತ ಸಾಲಗಾರರು ಹಾಗೂ ಬ್ಯಾಂಕ್ ಸಾಲಗಳ ದುರುಪಯೋಗ ಕುರಿತ ವರದಿಯ ಅಂಶಗಳನ್ನು ಅವರು ಎಂದಿಗೂ ಪ್ರಶ್ನಿಸಿರಲಿಲ್ಲ ಎಂದರು.

Also Read
ವಂಚನೆ ವರ್ಗಕ್ಕೆ ಬ್ಯಾಂಕ್ ಖಾತೆ: ಸುಪ್ರೀಂ ಕೋರ್ಟ್ ಮೊರೆ ಹೋದ ಅನಿಲ್ ಅಂಬಾನಿ

ಲೆಕ್ಕಪರಿಶೋಧಕರು ಐಸಿಎಐ ಸದಸ್ಯರಲ್ಲ ಎಂಬ ಒಂದೇ ಕಾರಣಕ್ಕೆ ಇಡೀ ಪ್ರಕ್ರಿಯೆಯನ್ನು ಅಮಾನ್ಯಗೊಳಿಸುವುದು ಅಸಂಗತವಾಗಿದೆ. ಇದರಿಂದ ವಂಚನೆ ಎಂದು ವರ್ಗೀಕರಿಸಲ್ಪಟ್ಟ ವ್ಯಕ್ತಿಗಳು ಐದು ವರ್ಷಗಳ ಕಾಲ ಸಾಲ ಅಥವಾ ಹಣ ಸಂಗ್ರಹಿಸಲು ನಿರ್ಬಂಧಿಸುವ ಆರ್‌ಬಿಐ ನೀಡಿದ್ದ ಮಹಾ ನಿರ್ದೇಶನಗಳ ಆಶಯವೇ ಮುಕ್ಕಾಗುತ್ತದೆ. ಈ ಆದೇಶ ಭವಿಷ್ಯದಲ್ಲಿ ಇನ್ನೂ ಅನೇಕ ಪ್ರಕರಣಗಳಿಗೆ ದಿಡ್ಡಿ ಬಾಗಿಲು ತೆರೆಯಲಿದ್ದು ಹಿಂದಿನ ವಂಚನೆ ವರ್ಗೀಕರಣಗಳ ಮೇಲೂ ಸಂಶಯ ಮೂಡಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬಿಡಿಓ ಇಂಡಿಯಾ ಸೆಬಿ ಮಾನ್ಯತೆ ಪಡೆದ ವಿಶೇಷ ಲೆಕ್ಕಪರಿಶೋಧನಾ ಸಂಸ್ಥೆಯಾಗಿದ್ದು ಅದು ಇನ್ನಾವುದೋ ಲೆಕ್ಕಕ್ಕೆ ಬಾರದ ದಾರಿಹೋಕ ಸಂಸ್ಥೆಯಲ್ಲ ಎಂದ ಅವರು ಏಕಸದಸ್ಯ ಪೀಠದ ಮಧ್ಯಂತರ ಆದೇಶವನ್ನು ವಿಭಾಗೀಯ ಪೀಠವು ಸ್ಥಗಿತಗೊಳಿಸಬೇಕೆಂದು ಮನವಿ ಮಾಡಿದರು.

Kannada Bar & Bench
kannada.barandbench.com