

ಭಾರತದಲ್ಲಿನ ಖಾಸಗಿ ಉನ್ನತ ಶಿಕ್ಷಣದ ಆಡಳಿತ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವ್ಯಾಪಕ ಸಾರ್ವಜನಿಕ ಹಿತಾಸಕ್ತಿ ಇದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ [ಆಯೇಷಾ ಜೈನ್ ಮತ್ತು ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯ ಹಾಗೂ ಇನ್ನಿತರರ ನಡುವಿನ ಪ್ರಕರಣ ]
ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಅವುಗಳ ಕಾರ್ಯನಿರ್ವಹಣೆ ಕುರಿತು ಆತಂಕ ವ್ಯಕ್ತಪಡಿಸಿ ದೇಶದ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಪತ್ರಗಳು ಮತ್ತು ಅರ್ಜಿಗಳು ಬಂದಿವೆ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠ ತಿಳಿಸಿತು.
ಪ್ರಸ್ತುತ ಅರ್ಜಿಯನ್ನು ಕೇವಲ ಒಂದು ಪ್ರಕರಣ ಎಂದು ಪರಿಗಣಿಸುತ್ತಿಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದ ಈ ಅರ್ಜಿ ಆಲಿಸಲಾಗುತ್ತಿದೆ. ಮುಂದಿನ ವಿಚಾರಣೆ ಹೊತ್ತಿಗೆ ಸಮಗ್ರ ಚಿತ್ರಣ ದೊರೆಯಲಿದೆ. ನಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ನಿಮ್ಮೆಲ್ಲರನ್ನು (ಕಕ್ಷಿದಾರರ ಪರ ವಕೀಲರಿಗೆ) ವಿಶ್ವಾಸಕ್ಕೆ ಪಡೆದು ತಿಳಿಸಲಾಗುವುದು. ಅದಕ್ಕೆ ಎಲ್ಲರೂ ಸಿದ್ಧವಾಗಿರಬೇಕಾಗುತ್ತದೆ. ನಂಬಲಸಾಧ್ಯವಾದಷ್ಟು ಸಂಖ್ಯೆಯಲ್ಲಿ ದೇಶದೆಲ್ಲೆಡೆಯಿಂದ ಈ ಕುರಿತಾಗಿ ಪತ್ರಗಳು ಬಂದಿವೆ, ಅಷ್ಟೇ ಅಲ್ಲ ಸಾಕ್ಷ್ಯಗಳನ್ನೂ ಒಳಗೊಂಡ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ನ್ಯಾ. ಅಮಾನುಲ್ಲಾ ಮೌಖಿಕವಾಗಿ ತಿಳಿಸಿದರು.
ಶಿಕ್ಷಣ ಉದ್ಯಮವಾಗಬಾರದು ಎಂಬ ವಕೀಲರೊಬ್ಬರ ಮಾತಿಗೆ ತಲೆದೂಗಿದ ನ್ಯಾಯಮೂರ್ತಿಯವರು, “ಖಂಡಿತ! ನಾವು ದೇಶದ ಭವಿಷ್ಯವನ್ನು ರೂಪಿಸುತ್ತಿದ್ದೇವೆ. ಜವಾಬ್ದಾರಿ ಸೂಕ್ತ ಕೈಗಳನ್ನು ತಲುಪುವಂತೆ ನೋಡಿಕೊಳ್ಳದಿದ್ದರೆ ನಾವು ಇಂದು ಮಾಡುವುದೆಲ್ಲವೂ ಅರ್ಥಹೀನವಾಗುತ್ತದೆ" ಎಂದರು.
ಖುಷಿ ಜೈನ್ ಎಂಬ ವಿದ್ಯಾರ್ಥಿನಿ ತನ್ನ ಹೆಸರನ್ನು ಆಯೇಷಾ ಜೈನ್ ಎಂದು ಬದಲಿಸಿಕೊಂಡಿದ್ದಕ್ಕೆ ಮುಸ್ಲಿಂ ಹೆಸರಿನಂತೆ ಇದೆ ಎಂಬ ಕಾರಣಕ್ಕೆ ದಾಖಲೆಗಳಲ್ಲಿ ಹೆಸರು ಬದಲಿಸದೆ ಅಮಿಟಿ ವಿಶ್ವವಿದ್ಯಾಲಯ ಆಕೆಗೆ ಕಿರುಕುಳ ನೀಡಿತ್ತು ಎಂಬುದನ್ನು ಗಮನಿಸಿದ ನ್ಯಾಯಾಲಯ ದೇಶದಾದ್ಯಂತ ಖಾಸಗಿ ವಿಶ್ವವಿದ್ಯಾಲಯಗಳ ಸಮಗ್ರ ಪರಿಶೀಲನೆ ನಡೆಸುವಂತೆ ಈ ಹಿಂದೆ ನಿರ್ದೇಶನ ನೀಡಿದ್ದ ಪ್ರಕರಣವನ್ನು ಆಲಿಸಿತು.
ನವೆಂಬರ್ 2025 ರಲ್ಲಿ, ದೇಶಾದ್ಯಂತ ಖಾಸಗಿ ವಿಶ್ವವಿದ್ಯಾಲಯಗಳನ್ನು ಹೇಗೆ ಸ್ಥಾಪಿಸಲಾಯಿತು, ನಿಯಂತ್ರಿಸಲಾಯಿತು ಮತ್ತು ಮೇಲ್ವಿಚಾರಣೆ ಮಾಡಲಾಯಿತು ಎಂಬುದನ್ನು ಬಹಿರಂಗಪಡಿಸುವ ವಿವರವಾದ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರ ಸರ್ಕಾರ ಹಾಗೂ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಜೊತೆಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ನಿರ್ದೇಶನ ನೀಡಿತ್ತು.
ಪ್ರಕರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಕ್ರಿಯಿಸಿದ ರೀತಿ ಬಗ್ಗೆ ನ್ಯಾಯಾಲಯ ಇಂದು ಕೆಂಗಣ್ಣು ಬೀರಿದೆ. ಅದರಲ್ಲಿಯೂ ಕೇಂದ್ರ ಸರ್ಕಾರದ ಪ್ರಮಾಣಪತ್ರವನ್ನು ನಿಯಮಬದ್ಧವಾಗಿ ಕ್ಯಾಬಿನೆಟ್ ಕಾರ್ಯದರ್ಶಿಯವರು ಸಲ್ಲಿಸದೆ, ಉನ್ನತ ಶಿಕ್ಷಣ ಕಾರ್ಯದರ್ಶಿಯವರು ಸಲ್ಲಿಸಿದ್ದಾರೆ. ಇದು ಸರಿಯಲ್ಲ ಎಂದಿತು. ಕ್ಯಾಬಿನೆಟ್ ಕಾರ್ಯದರ್ಶಿಗಳೇ ಅಫಿಡವಿಟ್ ಸಲ್ಲಿಸಬೇಕು ಹಾಗೂ ವಿನಾಯಿತಿ ಪಡೆಯುವುದಕ್ಕೆ ಕಾರಣಗಳು ಏನಿವೆ ಎಂಬುದನ್ನು ವಿವರಿಸಬೇಕು ಎಂದಿದೆ. ಇನ್ನೂ ಅಫಿಡವಿಟ್ ಸಲ್ಲಿಸದಿರುವ ರಾಜ್ಯಗಳ ಕಾರ್ಯದರ್ಶಿಗಳು ಮುಂದಿನ ವಿಚಾರಣೆ ಹೊತ್ತಿಗೆ ಸ್ಪಷ್ಟನೆ ನೀಡಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ. ಎಲ್ಲಾ ಪ್ರತಿವಾದಿಗಳು ಅಫಿಡವಿಟ್ ಸಲ್ಲಿಸಲು ಮೂರುವಾರಗಳ ಅವಕಾಶ ನೀಡಿರುವ ನ್ಯಾಯಾಲಯ ವಿಚಾರಣೆಯನ್ನು ಜನವರಿ 28ಕ್ಕೆ ಮುಂದೂಡಿದೆ. ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.