ಹೈಕೋರ್ಟ್‌ನಲ್ಲಿ ನಮಾಜ್‌ ವಿಡಿಯೊ ಚಿತ್ರೀಕರಣ, ಪ್ರಸಾರ: ʼಸಂವಾದʼ ಸಂಪಾದಕ ವೃಷಾಂಕ ಭಟ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

ವೃಷಾಂಕಗೆ ವಿಡಿಯೊ ಎಲ್ಲಿಂದ ಸಿಕ್ಕಿತು ಎಂಬುದು ಮಾತ್ರ ತನಿಖಾಧಿಕಾರಿಗೆ ಗೊತ್ತಾಗಬೇಕಿದೆ. ವೃಷಾಂಕ ಹೈಕೋರ್ಟ್‌ ಪ್ರವೇಶಿಸಿ, ವಿಡಿಯೊ ರೆಕಾರ್ಡ್‌ ಮಾಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಇಲ್ಲ ಎಂದಿರುವ ನ್ಯಾಯಾಲಯ.
ಹೈಕೋರ್ಟ್‌ನಲ್ಲಿ ನಮಾಜ್‌ ವಿಡಿಯೊ ಚಿತ್ರೀಕರಣ, ಪ್ರಸಾರ: ʼಸಂವಾದʼ ಸಂಪಾದಕ ವೃಷಾಂಕ ಭಟ್‌ಗೆ ನಿರೀಕ್ಷಣಾ ಜಾಮೀನು ಮಂಜೂರು
Vrishank Bhat, Editor of Samvada Facebook

“ಕರ್ನಾಟಕ ಹೈಕೋರ್ಟ್‌ನಲ್ಲಿ ನಮಾಜ್‌! 2022” ಎಂಬ ತಲೆಬರಹದಡಿಯಲ್ಲಿ ʼಸಂವಾದʼದ ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ ಚಾನೆಲ್‌ನಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ʼಸಂವಾದʼದ ಸಂಪಾದಕ ವೃಷಾಂಕ ಭಟ್‌ ಕೆ ಅವರಿಗೆ ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಲಯವು ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರಿನ ಚಾಮರಾಜಪೇಟೆಯ ನಿವಾಸಿ ವೃಷಾಂಕ ಭಟ್‌ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದ ಪ್ರಧಾನ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ್‌ ಎಂ. ಜೋಶಿ ಅವರು ಬಂಧನ ಪೂರ್ವ ಜಾಮೀನು ನೀಡಿ ಆದೇಶ ಮಾಡಿದ್ದಾರೆ.

“ದೂರುದಾರರಾದ ಕರ್ನಾಟಕ ಹೈಕೋರ್ಟ್‌ನ ಆಡಳಿತ ವಿಭಾಗದ ಉಸ್ತುವಾರಿ ರಿಜಿಸ್ಟ್ರಾರ್‌ ಎನ್‌ ಜಿ ದಿನೇಶ್‌ ಅವರು ಎರಡು ಸಮುದಾಯ ಅಥವಾ ಧರ್ಮಗಳ ನಡುವೆ ದ್ವೇಷ ಏರ್ಪಡುವುದಕ್ಕೆ ಸಂಬಂಧಿಸಿದಂತೆ ಏನನ್ನೂ ಉಲ್ಲೇಖಿಸಿಲ್ಲ. ಕಾನೂನುಬಾಹಿರವಾಗಿ ಹೈಕೋರ್ಟ್‌ ವ್ಯಾಪ್ತಿಯಲ್ಲಿ ವಿಡಿಯೊ ರೆಕಾರ್ಡ್‌ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಕರ್ನಾಟಕ ಹೈಕೋರ್ಟ್‌ ವ್ಯಾಪ್ತಿ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಸೂಚನೆ ಅಥವಾ ಆದೇಶವನ್ನು ಉಲ್ಲೇಖಿಸಲಾಗಿಲ್ಲ. ದೂರನ್ನು ಪರಿಗಣಿಸಬೇಕಾದರೆ ಸಾರ್ವಜನಿಕರು ಅಥವಾ ಮಾಧ್ಯಮ ಪ್ರತಿನಿಧಿಗಳಿಗೆ ಹೈಕೋರ್ಟ್‌ಗೆ ಪ್ರವೇಶ ನಿರ್ಬಂಧಿಸಬೇಕು. ಸಾಮಾನ್ಯವಾಗಿ ಎಲ್ಲಾ ನ್ಯಾಯಾಲಯಗಳು ಸಾರ್ವಜನಿಕ ಸ್ಥಳಗಳಾಗಿದ್ದು, ಸಾಮಾನ್ಯ ಜನರು ಹೈಕೋರ್ಟ್‌ ಪ್ರವೇಶಿಸಿದಂತೆ ನಿರ್ದಿಷ್ಟ ಆದೇಶ ಮಾಡಿದ್ದರೆ ಮಾತ್ರ ಐಪಿಸಿ ಸೆಕ್ಷನ್‌ 477 (ಕ್ರಿಮಿನಲ್‌ ಅತಿಕ್ರಮ ಪ್ರವೇಶ) ಅನ್ನು ಚಲಾಯಿಸಬಹುದಾಗಿದೆ” ಎಂದು ಹೇಳಲಾಗಿದೆ.

ಎರಡನೆಯದಾಗಿ, ಐಪಿಸಿ ಸೆಕ್ಷನ್‌ 505 (2) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವುದು) ಚಲಾಯಿಸಿರುವುದಕ್ಕೆ ಸಂಬಂಧಿಸಿದಂತೆ ದೂರಿನಲ್ಲಿ ಎರಡು ಸಮುದಾಯಗಳ ನಡುವೆ ಹಗೆತನಕ್ಕೆ ಕಾರಣವಾಗುವುದಕ್ಕೆ ಸಂಬಂಧಿಸಿದಂತೆ ಏನನ್ನೂ ಉಲ್ಲೇಖ ಮಾಡಲಾಗಿಲ್ಲ. ಅರ್ಜಿದಾರ ವೃಷಾಂಕ ಅವರಿಗೆ ವಿಡಿಯೊ ಎಲ್ಲಿಂದ ಸಿಕ್ಕಿತು ಎಂಬುದು ಮಾತ್ರ ತನಿಖಾಧಿಕಾರಿಗೆ ಗೊತ್ತಾಗಬೇಕಿದೆ. ಸಂವಾದದ ಸಂಪಾದಕರಾದ ವೃಷಾಂಕ ಅವರು ಹೈಕೋರ್ಟ್‌ ಪ್ರವೇಶಿಸಿ, ವಿಡಿಯೊ ರೆಕಾರ್ಡ್‌ ಮಾಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಇಲ್ಲ. ಹೀಗಾಗಿ, ಅರ್ಜಿದಾರರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲು ಯಾವುದೇ ಸಕಾರಣಗಳು ಇಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಹೀಗಾಗಿ, ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವೃಷಾಂಕ ಭಟ್‌ ಬಂಧಿಸಲ್ಪಟ್ಟರೆ ಅವರು 75,000 ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಒಂದು ಬಾಂಡ್‌ ಸಲ್ಲಿಸಿ ಬಿಡುಗಡೆಯಾಗಬಹುದು. ಈ ಆದೇಶವಾದ 15 ದಿನಗಳ ಒಳಗೆ ಅರ್ಜಿದಾರರು ಠಾಣಾಧಿಕಾರಿಯ ಮುಂದೆ ಹಾಜರಾಗಬೇಕು ಮತ್ತು ತನಿಖೆಗೆ ಸಹಕರಿಸಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವಿಸಬಾರದು. ಅರ್ಜಿದಾರರು ಯಾವುದೇ ಕ್ರಿಮಿನಲ್‌ ಚಟುವಟಿಕೆಯಲ್ಲಿ ಭಾಗಿಯಾಗಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ದೀಪಕ್‌ ಎಸ್.‌ ಶೆಟ್ಟಿ ಅವರು “ವೃಷಾಂಕ ಅವರು ಹೈಕೋರ್ಟ್‌ ವ್ಯಾಪ್ತಿಗೆ ಪ್ರವೇಶಿಸಿರಲಿಲ್ಲ. ಬೇರೊಬ್ಬರು ವಿಡಿಯೊ ರೆಕಾರ್ಡ್‌ ಮಾಡಿದ್ದು, ಅವರು ಕಳುಹಿಸಿದ ಬಳಿಕ ಅದನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗಿತ್ತು. ವೃಷಾಂಕ ಅವರು ಸಂವಾದ ಮೀಡಿಯಾದಲ್ಲಿ ಸಂಪಾದಕರಾಗಿದ್ದು, ಕೆಲವು ಪತ್ರಿಕೆಗಳಲ್ಲಿ ಲೇಖನಗಳನ್ನೂ ಬರೆಯುತ್ತಾರೆ. ಹೀಗಾಗಿ, ಅವರಿಗೆ ಐಪಿಸಿ ಸೆಕ್ಷನ್‌ 447 ಮತ್ತು 505(2) ಅನ್ವಯಿಸುವುದಿಲ್ಲ. ಸಮುದಾಯಗಳ ನಡುವೆ ದ್ವೇಷ ಹರಡುವ ಉದ್ದೇಶವನ್ನು ಅರ್ಜಿದಾರರು ಹೊಂದಿಲ್ಲ ಹಾಗೂ ಅಂಥ ಯಾವುದೇ ಪ್ರಕರಣ ನಡೆದಿಲ್ಲ. ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ಉದ್ದೇಶವನ್ನು ಅರ್ಜಿದಾರರು ಹೊಂದಿದ್ದಾರೆ ಎಂಬ ಆರೋಪವು ದೂರಿನಲ್ಲಿ ಇಲ್ಲ. ಹೀಗಾಗಿ ಐಪಿಸಿ ಸೆಕ್ಷನ್‌ 505 ಅನ್ವಯಿಸುವುದಿಲ್ಲ” ಎಂದು ವಾದಿಸಿದ್ದರು.

ಪೊಲೀಸರನ್ನು ಪ್ರತಿನಿಧಿಸಿದ್ದ ಸಾರ್ವಜನಿಕ ಅಭಿಯೋಜಕರು “ವೃಷಾಂಕ ಅವರು ಯಾರಿಂದ ವಿಡಿಯೊ ಕ್ಲಿಪ್‌ ಪಡೆದಿದ್ದಾರೆ ಎಂಬುದು ಗೊತ್ತಾಗಬೇಕಾಗಿದೆ. ಹೀಗಾಗಿ, ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಪ್ರಕರಣ ತನಿಖೆ ನಡೆಯುತ್ತಿದೆ. ಪ್ರಾಸಿಕ್ಯೂಷನ್‌ ಸಾಕ್ಷಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು” ಎಂದು ವಾದಿಸಿದ್ದರು.

Also Read
ಅತಿಕ್ರಮವಾಗಿ ಪ್ರವೇಶಿಸಿ ವಿಡಿಯೊ ಚಿತ್ರೀಕರಣ ಮಾಡಿ 'ಸಂವಾದ'ದಲ್ಲಿ ಪ್ರಸಾರ: ಹೈಕೋರ್ಟ್‌ ಆಡಳಿತದಿಂದ ದೂರು

ಪ್ರಕರಣದ ಹಿನ್ನೆಲೆ: 2022ರ ಮೇ 14ರಂದು ಸಂವಾದ ಎಂಬ ಮಾಧ್ಯಮ ಸಂಸ್ಥೆಯು ತನ್ನ ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ ಚಾನೆಲ್‌ನಲ್ಲಿ “ಕರ್ನಾಟಕ ಹೈಕೋರ್ಟ್‌ನಲ್ಲಿ ನಮಾಜ್‌! 2022” ಎಂಬ ತಲೆಬರಹದಡಿ ವಿಡಿಯೊ ಒಂದನ್ನು ಅಪ್‌ಲೋಡ್‌ ಮಾಡಿದ್ದು, ಇದು ವೈರಲ್‌ ಆಗಿತ್ತು. ಈ ವಿಡಿಯೊವನ್ನು ಪರಿಶೀಲಿಸಲಾಗಿದ್ದು, ಕರ್ನಾಟಕ ಹೈಕೋರ್ಟ್‌ನ ಆವರಣದಲ್ಲಿ ವಿಡಿಯೊ ಚಿತ್ರೀಕರಿಸಿ ಅದನ್ನು ಸಂವಾದದ ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ ಎಂದು ಹೈಕೋರ್ಟ್‌ನ ಆಡಳಿತ ವಿಭಾಗದ ಉಸ್ತುವಾರಿ ರಿಜಿಸ್ಟ್ರಾರ್‌ ಎನ್‌ ಜಿ ದಿನೇಶ್‌ ಅವರು ಮೇ 16ರಂದು ವಿಧಾನ ಸೌಧ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ನ್ಯಾಯಾಲಯದ ಆವರಣಕ್ಕೆ ಅನುಮತಿ ಇಲ್ಲದೇ ಪ್ರವೇಶ ಮಾಡುವುದು ಮತ್ತು ವಿಡಿಯೊ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ನ್ಯಾಯಾಲಯಕ್ಕೆ ಅತಿಕ್ರಮ ಪ್ರವೇಶ ಮಾಡಿ, ಪೂರ್ವಾನುಮತಿ ಪಡೆಯದೇ ವಿಡಿಯೊ ಚಿತ್ರೀಕರಣ ಮಾಡಿ, ಅದನ್ನು ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿ ಎರಡು ವರ್ಗಗಳ ನಡುವೆ ದ್ವೇಷ ಉಂಟು ಮಾಡುವ ವಿಡಿಯೊ ಪ್ರಸಾರ ಮಾಡಿರುವವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿತ್ತು.

Attachment
PDF
Vrishank Bhat K V. State of Karnataka.pdf
Preview

Related Stories

No stories found.
Kannada Bar & Bench
kannada.barandbench.com