ಮಕ್ಕಳ ಭಿಕ್ಷಾಟನೆ ನಿರ್ಮೂಲನೆ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಶಿಫಾರಸ್ಸುಗಳೇನು?

ಭಿಕ್ಷಾಟನೆಯನ್ನು ವೃತ್ತಿಯಾಗಿಸಿಕೊಂಡಿರುವವರು ಮತ್ತು ಮಕ್ಕಳು 52. ಕುಟುಂಬದ ವೈಯಕ್ತಿಕ ಸಮಸ್ಯೆಗಳಿಂದ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು 219. ಬಾಲ ಕಾರ್ಮಿಕರಾಗಿರುವ ಮಕ್ಕಳು 337.
Child Hawking and Karnataka HC
Child Hawking and Karnataka HC
Published on

ಬೆಂಗಳೂರಿನಲ್ಲಿ ಮಕ್ಕಳ ಭಿಕ್ಷಾಟನೆ, ಕಳ್ಳ ಸಾಗಣೆ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿರುವ ವರದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಪ್ರತಿಕ್ರಿಯಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ.

ರಸ್ತೆ ಬದಿಯಲ್ಲಿ ಗೊಂಬೆ, ಮತ್ತಿತರ ಪರಿಕರಗಳ ಮಾರಾಟ, ಭಿಕ್ಷಾಟನೆ ಮಾಡುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಲೆಟ್ಜ್‌ಕಿಟ್‌ ಫೌಂಡೇಶ್‌ನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ಇತ್ತೀಚೆಗೆ ನಡೆಸಿತು.

“ಕೆಎಸ್‌ಎಲ್‌ಎಸ್‌ಎ ಸಲ್ಲಿಸಿರುವ ವರದಿಯನ್ನು ಅಧಿಕೃತವಾಗಿ ಪರಿಗಣಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಪ್ರತಿಕ್ರಿಯಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪುತ್ತಿಗೆ ರಮೇಶ್‌ ಅವರು “ಭಿಕ್ಷಾಟನೆ ಮಾಡುವ ಮಕ್ಕಳ ದತ್ತಾಂಶ ಸಂಗ್ರಹಿಸಲು ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿಗೆ ಹೈಕೋರ್ಟ್‌ ಆದೇಶ ಮಾಡಿತ್ತು. ಈ ಸಂಬಂಧ ಕೆಎಸ್‌ಎಲ್‌ಎಸ್‌ಎ ಸಲ್ಲಿಸಿರುವ ವರದಿಯು ಆಘಾತ ಉಂಟು ಮಾಡಿದೆ. ಮಕ್ಕಳನ್ನು ಕಳ್ಳಸಾಗಣೆ ಸೇರಿದಂತೆ ಹಲವು ಕೃತ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ” ಎಂದರು.

ಕೆಎಸ್‌ಎಲ್‌ಎಸ್‌ಎ ಪ್ರತಿನಿಧಿಸಿದ್ದ ವಕೀಲೆ ಮೈತ್ರೇಯಿ ಕೃಷ್ಣನ್‌ ಅವರು “ಏಪ್ರಿಲ್‌ 27ರಂದು ಕೆಎಸ್‌ಎಲ್‌ಎಸ್‌ಎ ಸಲ್ಲಿಸಿರುವ ವರದಿಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಹಲವು ಶಿಫಾರಸ್ಸುಗಳನ್ನು ಮಾಡಲಾಗಿದೆ. ಜುಲೈ 7ರಂದು ಮೆಮೊ ಸಲ್ಲಿಸಿ ರಾಜ್ಯ ಸರ್ಕಾರವು ವರದಿಗೆ ಸಂಬಂಧಿಸಿದಂತೆ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಲಾಗಿದೆ. ಇಷ್ಟೆಲ್ಲಾ ಶ್ರಮವಹಿಸಿ ವರದಿ ಸಿದ್ಧಪಡಿಸುವುದರಿಂದ ಯಾವುದೇ ಲಾಭವಿಲ್ಲ. ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಆದೇಶಿಸಬೇಕು” ಎಂದು ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಪುನರ್ವಸತಿಗೆ ಸಂಬಂಧಿಸಿದಂತೆ ಕೆಎಸ್‌ಎಲ್‌ಎಸ್‌ಎ ವಿಸ್ತೃತವಾದ ವರದಿಯನ್ನು ಸಲ್ಲಿಸಿದ್ದು, ಅಲ್ಲಿರುವ ಆಸಕ್ತಿಕರ ಅಂಶಗಳು ಇಂತಿವೆ.

  • ಬೆಂಗಳೂರು ಮಹಾನಗರದ ಎಂಟು ವಲಯಗಳ ವ್ಯಾಪ್ತಿಯಲ್ಲಿ ಜನವರಿ 21ರಿಂದ 29ರವರೆಗೆ ಸಂಗ್ರಹಿಸಲಾದ ದತ್ತಾಂಶದಲ್ಲಿ 886 ದುರ್ಬಲ ಮಕ್ಕಳು ಪತ್ತೆಯಾಗಿದ್ದು, 432 ಪ್ರಮುಖ ಭಿಕ್ಷಾಟನಾ ಸ್ಥಳಗಳನ್ನು (ಹಾಟ್‌ಸ್ಪಾಟ್‌) ಪತ್ತೆ ಮಾಡಲಾಗಿದೆ.

  • ಮಾರ್ಚ್‌ 1ರಿಂದ 31ರ ಅವಧಿಯಲ್ಲಿ ಬೆಂಗಳೂರಿನ ಎಂಟು ವಲಯಗಳಲ್ಲಿ ಕೈಗೊಳ್ಳಲಾದ ಸಮೀಕ್ಷೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ 534 ಮಕ್ಕಳು ಪತ್ತೆಯಾಗಿದ್ದು, ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ 186 ಮಕ್ಕಳು ಪತ್ತೆಯಾಗಿದ್ದಾರೆ. ಒಟ್ಟಾರೆ 720 ಮಕ್ಕಳು ಸಮೀಕ್ಷೆಯಲ್ಲಿ ಕಂಡು ಬಂದಿದ್ದಾರೆ.

  • ಭಿಕ್ಷಾಟನೆಯನ್ನು ವೃತ್ತಿಯಾಗಿಸಿಕೊಂಡಿರುವವರು ಮತ್ತು ಮಕ್ಕಳು 52. ಕುಟುಂಬದ ವೈಯಕ್ತಿಕ ಸಮಸ್ಯೆಗಳಿಂದ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು 219. ಬಾಲ ಕಾರ್ಮಿಕರಾಗಿರುವ ಮಕ್ಕಳು 337. ಭಿಕ್ಷಾಟನೆಯಲ್ಲಿ ತೊಡಗಿಕೊಂಡಿರುವ ಅಂಗವಿಕಲ ಮಕ್ಕಳು 9. ಮಗುವನ್ನು ಸೆರಗಲ್ಲಿ ಹಾಕಿಕೊಂಡು ಭಿಕ್ಷಾಟನೆ ಮಾಡುವವರು 76. ಮಾಫಿಯಾದವರು 27 ಮಕ್ಕಳನ್ನು ಭಿಕ್ಷಾಟನೆಗೆ ದೂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Also Read
ಭಿಕ್ಷಾಟನೆ ತಡೆಗೆ ಗಣ್ಯ ನಿಲುವು ತಳೆಯಲಾಗದು ಎಂದ ಸುಪ್ರೀಂಕೋರ್ಟ್‌: ಕೇಂದ್ರ, ದೆಹಲಿ ಸರ್ಕಾರಕ್ಕೆ ನೋಟಿಸ್

ಭಿಕ್ಷಾಟನೆ ನಿರ್ಮೂಲನೆ ಮಾಡಲು ಹೈಕೋರ್ಟ್‌ ನಿರ್ದೇಶನದ ಮೇರೆಗೆ ಕೆಎಸ್‌ಎಲ್‌ಎಸ್‌ಎ ಸಲ್ಲಿಸಿರುವ ವರದಿಯಲ್ಲಿನ ಶಿಫಾರಸ್ಸುಗಳು ಇಂತಿವೆ.

  • ಗುಂಪಾಗಿ ಭಿಕ್ಷಾಟನೆ ಮಾಡುವುದನ್ನು ವೃತ್ತಿಯಾಗಿಸಿಕೊಂಡಿರುವ ಮಕ್ಕಳಿಗೆ ನಿಮ್ಹಾನ್ಸ್‌ ಮತ್ತು ಇತರೆ ತಜ್ಞರಿಂದ ಕೌನ್ಸೆಲಿಂಗ್‌ ಮಾಡಿಸುವ ಕೆಲಸವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಬೇಕು.

  • ಬಿಬಿಎಂಪಿಯಿಂದ ಅವರಿಗೆ ಗುರುತಿನ ಚೀಟಿ ನೀಡುವ ವ್ಯವಸ್ಥೆಯಾಗಬೇಕು. ಭಿಕ್ಷಾಟನೆಯಲ್ಲಿ ತೊಡಗಿರುವ ಗುಂಪುಗಳು ಬೆಂಗಳೂರಿನಲ್ಲಿ ನೆಲೆಸಲು ಇಚ್ಛಿಸದಿದ್ದಲ್ಲಿ ಅವರನ್ನು ಅವರ ತವರಿಗೆ ತಲುಪಿಸಲು ಸಾರಿಗೆ ವ್ಯವಸ್ಥೆ ಮಾಡಬೇಕು.

  • ಭಿಕ್ಷಾಟನೆಯಲ್ಲಿ ತೊಡಗಿರುವ ಗುಂಪುಗಳಿಗೆ ಮನೆ ನಿರ್ಮಿಸುವ ಕೆಲಸವನ್ನು ಬಿಬಿಎಂಪಿ ಮತ್ತು ಸಮಾಜ ಕಲ್ಯಾಣ ಇಲಾಖೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ, ಕೌಶಲಾಭಿವೃದ್ಧಿ, ಔದ್ಯಮಿಕ ಮತ್ತು ಜೀವನಕೌಶಲ ಇಲಾಖೆಗಳು ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಪೋಷಕರಿಗೆ ಉದ್ಯೋಗ ಕಲ್ಪಿಸಬೇಕು.

  • ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಬೇಕು. ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು ನೆಲೆಸಿರುವ ಸಮೀಪ ಸ್ಥಳಾಂತರ ಮಾಡಬಹುದಾದ (ಮೇಕ್‌ ಶಿಫ್ಟ್‌) ಶಾಲೆಗಳನ್ನು ತೆರೆಯಲು ಬಿಬಿಎಂಪಿ ಮತ್ತು ಶಿಕ್ಷಣ ಇಲಾಖೆ ಶ್ರಮಿಸಬೇಕು. ಈ ಜನರು ನೆಲೆಸಿರುವ ಕಡೆ ಅಂಗನವಾಡಿಗಳನ್ನು ತೆರೆಯಬೇಕು.

  • ಇಂಥ ಕುಟುಂಬಗಳು ನೆಲೆಸಿರುವ ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು. ಅವರಲ್ಲಿ ಕುಟುಂಬ ಯೋಜನೆಯ ಅರಿವು ಮೂಡಿಸುವುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಡಬೇಕು.

  • ಈ ಸಮುದಾಯದವರು ನೆಲೆಸಿರುವ ಕಡೆ ಮಕ್ಕಳ ಕಳ್ಳ ಸಾಗಣೆ ಅಥವಾ ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ಗೃಹ ಇಲಾಖೆಯು ಪೊಲೀಸರ ಮೂಲಕ ವಿಸ್ತೃತ ತನಿಖೆ ನಡೆಸಬೇಕು.

  • ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ಭಿಕ್ಷಾಟನೆ ಅಥವಾ ವಿವಿಧ ಆಟಿಕೆಗಳ ಮಾರಾಟದಲ್ಲಿ ತೊಡಗಿರುವ ಮಕ್ಕಳಿಗೆ ಹಣ ನೀಡದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ವಾರ್ತಾ ಮತ್ತು ಪ್ರಸಾರ ಇಲಾಖೆ, ಖಾಸಗಿ ಸಂಸ್ಥೆಗಳ ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ ಯೋಜನೆಯನ್ನು ಬಳಸಿಕೊಳ್ಳಬಹುದು. ಸಿನಿಮಾ, ಮುದ್ರಣ, ಟಿ ವಿ, ರೇಡಿಯೊಗಳಲ್ಲಿ ಜಾಗೃತಿ ಮೂಡಿಸಬಹುದು.

  • ಬಾಲ ಕಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಕಾನೂನುಗಳನ್ನು ಕಠಿಣವಾಗಿ ಜಾರಿಗೊಳಿಸುವಂತೆ ಕಾನೂನು ಇಲಾಖೆಗೆ ನಿರ್ದೇಶಿಸಬೇಕು.

  • ಭಿಕ್ಷಾಟನೆಗೆ ದೂಡಲ್ಪಟ್ಟಿರುವ ಅಂಗವಿಕಲ ಮಕ್ಕಳು ಮತ್ತು ಅವರ ಪೋಷಕರಿಗೆ ಸರಿಯಾದ ಕೌನ್ಸೆಲಿಂಗ್‌ ಮಾಡಬೇಕು. ಈ ಜವಾಬ್ದಾರಿಯನ್ನು ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರು ವಹಿಸಿಕೊಳ್ಳಬೇಕು. ಅಲ್ಲದೇ ಈ ಮಕ್ಕಳಿಗೆ ವಿಶೇಷ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು.

  • ಮಕ್ಕಳನ್ನು ಸೆರಗಲ್ಲಿ ಕಟ್ಟಿಕೊಂಡು ಭಿಕ್ಷಾಟನೆ ಅಥವಾ ವಿವಿಧ ವಸ್ತುಗಳ ಮಾರಾಟ ಮಾಡುವಾಗ ಮಕ್ಕಳ ಕಳ್ಳ ಸಾಗಣೆಯಾಗುವ ಸಾಧ್ಯತೆಯಿದ್ದು ಇದನ್ನು ಪೊಲೀಸರು ತನಿಖೆ ಮಾಡಬೇಕು. ಇಂಥ ಸಾಧ್ಯತೆ ಕಂಡು ಬಂದಲ್ಲಿ ಅವರನ್ನು ತಕ್ಷಣ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಪ್ರಸ್ತುತಪಡಿಸಬೇಕು.

  • ಮಕ್ಕಳ ಕಲ್ಯಾಣ ಸದಸ್ಯರಿಗೆ ಇಂಥ ಪ್ರಕರಣ ಕಂಡುಬಂದಲ್ಲಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಬೇಕು. ಪ್ರತಿ ಮಗುವಿಗೂ ಪ್ರತ್ಯೇಕ ಯೋಜನೆ ರೂಪಿಸುವುದರ ಜೊತೆಗೆ ಅವರ ಮೇಲೆ ನಿಗಾ ಇಡಬೇಕು.

  • ಮಕ್ಕಳನ್ನು ಯಾವುದೇ ಮಾಫಿಯಾ ಭಿಕ್ಷಾಟನೆಗೆ ದೂಡಿರುವುದು ಕಂಡುಬಂದರೆ ಅವರನ್ನು ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪೊಲೀಸರ ನೆರವಿನೊಂದಿಗೆ ರಕ್ಷಿಸಬೇಕು.

  • ಮಕ್ಕಳಿಗೆ ಆರೈಕೆ ಮತ್ತು ರಕ್ಷಣೆ ನೀಡುವ ಉದ್ದೇಶದಿಂದ ಅವರನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಬೇಕು.

  • ಒಂದು ಕಡೆಯಿಂದ ಮತ್ತೊಂದು ಕಡೆಗೆ ಮಕ್ಕಳನ್ನು ಅಕ್ರಮವಾಗಿ ಸಾಗಣೆ ಮಾಡಿದ್ದರೆ ಅವರ ವರ್ಗಾವಣೆ ಮತ್ತು ಪುನರ್ವಸತಿಗೆ ಸಂಬಂಧಿಸಿದಂತೆ ಸಂಬಂಧ ಪಟ್ಟ ರಾಜ್ಯದ ಜೊತೆ ಒಪ್ಪಂದ ಮಾಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು.

  • ನಗರದಲ್ಲಿ ಮಕ್ಕಳ ಕಳ್ಳ ಸಾಗಣೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.

  • ವಿಶೇಷ ಮಕ್ಕಳ ಪೊಲೀಸ್‌ ಘಟಕ ಸ್ಥಾಪನೆ ಮಾಡಬೇಕು.

  • ಮಕ್ಕಳ ಸಹಾಯವಾಣಿ 1098 ಅನ್ನು ಮತ್ತಷ್ಟು ಬಲಪಡಿಸಬೇಕು.

  • ಮಕ್ಕಳ ರಕ್ಷಣೆ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನಾಲಯದಲ್ಲಿ ಜಾಗೃತಿ ಮೂಡಿಸಬೇಕು.

  • ಮಕ್ಕಳ ಆರೈಕೆ ಕೇಂದ್ರಗಳ ನೋಂದಣಿಗೆ ಸಂಬಂಧಿಸಿದಂತೆ ಬಾಲ ನ್ಯಾಯ ಕಾಯಿದೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು.

Kannada Bar & Bench
kannada.barandbench.com