
ತಮಿಳುನಾಡಿನ ಖ್ಯಾತ ನಟ ವಿಜಯ್ ಮತ್ತು ಅವರು ಸ್ಥಾಪಿಸಿರುವ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪ್ರಸ್ತುತ ಬಳಸುತ್ತಿರುವ ಧ್ವಜವನ್ನು ಬಳಸದಂತೆ ಮಧ್ಯಂತರ ಆದೇಶ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ [ಜಿಬಿ ಪಚೈಯಪ್ಪನ್ ವಿ. ತಮಿಳಗ ವೆಟ್ರಿ ಕಳಗಂ].
ಟಿವಿಕೆ ಧ್ವಜವು ನೋಡಲು ಹಾಗೂ ಪರಿಕಲ್ಪನಾತ್ಮಕವಾಗಿ ತಮ್ಮ ಟ್ರಸ್ಟ್‌ನ ನೋಂದಾಯಿತ ವಾಣಿಜ್ಯ ಚಿಹ್ನೆಯನ್ನು ಹೋಲುತ್ತದೆ ಎಂದು ಜಿ ಬಿ ಪಚೈಯಪ್ಪನ್ ಮತ್ತು ಅವರು ಪ್ರತಿನಿಧಿಸುವ ಟ್ರಸ್ಟ್ - ಥೊಂಡೈ ಮಂಡಲ ಸಾಂಡ್ರೋರ್ ಧರ್ಮ ಪರಿಬಾಲನ ಸಭೈ ಹೂಡಿದ್ದ ಪ್ರಕರಣದ ವಿಚಾರಣೆ ನ್ಯಾ. ಸೆಂಥಿಲ್ ಕುಮಾರ್ ರಾಮಮೂರ್ತಿ ಅವರಿದ್ದ ಪೀಠದಲ್ಲಿ ನಡೆಯಿತು.
ನಟ ವಿಜಯ್ ಮತ್ತು ಟಿವಿಕೆ ಪಕ್ಷ ವಾಣಿಜ್ಯ ಚಿಹ್ನೆ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದ ನ್ಯಾಯಾಲಯ ಆದರೆ ಇವು ಟ್ರಸ್ಟ್‌ನ ಮಧ್ಯಂತರ ತಡೆಯಾಜ್ಞೆಯ ಅರ್ಜಿಯನ್ನು ನಿರ್ಧರಿಸುವ ಉದ್ದೇಶಕ್ಕಾಗಿ ಮಾತ್ರ ಮಾಡಲಾದ ತಾತ್ಕಾಲಿಕ ಅವಲೋಕನಗಳಾಗಿವೆ ಎಂದಿತು. ನ್ಯಾಯಾಲಯ ಇನ್ನಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.
"ಮೇಲ್ನೋಟಕ್ಕೆ ಹೋಲಿಕೆ ಮಾಡಿದರೂ ಸಹ, ಪ್ರತಿವಾದಿಯ ಧ್ವಜವು ವಾದಿಗಳ ಧ್ವಜದ ಗಣನೀಯ ನಕಲು ಎಂದು ಹೇಳಲಾಗುವುದಿಲ್ಲ. ಆದ್ದರಿಂದ, ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪಕ್ಕೆ ಸಂಬಂಧಿಸಿದಂತೆ (ಮಧ್ಯಂತರ) ಪರಿಹಾರಕ್ಕಾಗಿ ವಾದಿಯು ಕೋರಿರುವ ಹಕ್ಕನ್ನು ತಿರಸ್ಕರಿಸುತ್ತೇನೆ ... ಗಮನಾರ್ಹ ಅಂಶವೆಂದರೆ, ವಾದಿಗಳು ಬಣ್ಣ ಸಂಯೋಜನೆಗೆ ಪ್ರತ್ಯೇಕ (ಟ್ರೇಡ್‌ಮಾರ್ಕ್) ನೋಂದಣಿಯನ್ನು ಹೊಂದಿಲ್ಲ.. ನಿಸ್ಸಂದೇಹವಾಗಿ (ಬಣ್ಣಗಳನ್ನು), ಒಂದು ಗುರುತಿನ ಅಗತ್ಯ ವೈಶಿಷ್ಟ್ಯಗಳೆಂದು ಪರಿಗಣಿಸಬಹುದು ಎಂಬುದು ನಿಜ ... ಹಾಗಿದ್ದರೂ, ಪ್ರಾಥಮಿಕವಾಗಿ ಹೋಲಿಕೆ ಮಾಡಿದಾಗ, ಬಣ್ಣಗಳ ಸಂಯೋಜನೆಗಳನ್ನು ಅಗತ್ಯ ವೈಶಿಷ್ಟ್ಯವೆಂದು ನಿರೂಪಿಸಲಾಗುವುದಿಲ್ಲ. ವಾದಿಗಳ ಸೇವೆಗಳನ್ನು ಪಡೆಯುವ ದೃಷ್ಟಿಕೋನದಿಂದ ಗಮನಿಸಿದರೂ ಸಹ ಸರಾಸರಿ ಬುದ್ಧಿಮತ್ತೆ ಮತ್ತು ಅಪೂರ್ಣ ಸ್ಮರಣಶಕ್ತಿ ಹೊಂದಿರುವ ವ್ಯಕ್ತಿಗಳಿಗೆ ಕೂಡ, ಆಕ್ಷೇಪಿಸಲಾದ ಧ್ವಜದ ಬಳಕೆಯು ಗೊಂದಲ ಅಥವಾ ವಂಚನೆಯನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುವುದಿಲ್ಲ. ವಾದಿಗಳು ವಾದಿಯ ಧ್ವಜಕ್ಕೆ ಸಂಬಂಧಿಸಿದಂತೆ ಖ್ಯಾತಿ ಮತ್ತು ಸದ್ಭಾವನೆಯನ್ನು ಸ್ಥಾಪಿಸಿದ್ದಾರೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಈ ಎಲ್ಲ ಕಾರಣಗಳಿಂದ ಮಧ್ಯಂತರ ಪರಿಹಾರಕ್ಕಾಗಿ ಮಾಡಿರುವ ವಿನಂತಿಯನ್ನ ನಿರಾಕರಿಸಲಾಗಿದೆ," ಎಂದು ನ್ಯಾಯಾಲಯ ಇಂದು ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
ಇಂದಿನ ವಿಚಾರಣೆಯ ವೇಳೆ ಟ್ರಸ್ಟ್ ಪರವಾಗಿ ವಕೀಲ ರಮೇಶ್ ಗಣಪತಿ ಹಾಜರಾಗಿದ್ದರು. ಹಿರಿಯ ವಕೀಲ ವಿಜಯ್ ನಾರಾಯಣ್ ಅವರು ಟಿವಿಕೆ ಮತ್ತು ವಿಜಯ್ ಪರ ವಾದ ಮಂಡಿಸಿದರು.
ಆಗಸ್ಟ್ 2024 ರಲ್ಲಿ ಅನಾವರಣಗೊಂಡ ಟಿವಿಕೆ ಧ್ವಜವು ನೋಡಲು ಹಾಗೂ ಪರಿಕಲ್ಪನಾತ್ಮಕವಾಗಿ ತಮ್ಮ ಟ್ರಸ್ಟ್‌ನ ನೋಂದಾಯಿತ ವಾಣಿಜ್ಯ ಚಿಹ್ನೆಯನ್ನು ಹೋಲುತ್ತದೆ. ಇದು ಕೇಂದ್ರ ವೃತ್ತಾಕಾರದ ವಿಶಿಷ್ಟ ಲಕ್ಷಣದೊಂದಿಗೆ ಕೆಂಪು-ಹಳದಿ-ಕೆಂಪು ತ್ರಿವರ್ಣವನ್ನು ಒಳಗೊಂಡಿದೆ ಎಂದು ಅರ್ಜಿದಾರರು ದೂರಿದ್ದರು.
ಟ್ರೇಡ್‌ಮಾರ್ಕ್ ದಾಖಲೆಗಳ ಪ್ರಕಾರ, ಪಚೈಯಪ್ಪನ್ ನವೆಂಬರ್ 28, 2023 ರಂದು ವರ್ಗ 45 ರ ಅಡಿಯಲ್ಲಿ ಚಿಹ್ನೆಯ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು. ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಇತರರು ಸಲ್ಲಿಸುವ ವೈಯಕ್ತಿಕ ಮತ್ತು ಸಾಮಾಜಿಕ ಸೇವೆಯನ್ನು ಇದು ಒಳಗೊಳ್ಳುತ್ತದೆ.
ಅರ್ಜಿಯ ಪ್ರಕಾರ, 2023 ರಿಂದ ಅರ್ಜಿದಾರರು ಟ್ರಸ್ಟ್‌ನ ಸೇವೆಗಾಗಿ ಈ ಧ್ವಜವನ್ನು ಬಳಸುತ್ತಿದ್ದಾರೆ. ಟ್ರಸ್ಟ್ ಮೂಲಕ ಸಾಂಡ್ರೋರ್ ಕುರಲ್ ಎಂಬ ತಮಿಳು ನಿಯತಕಾಲಿಕೆಯ ಪ್ರಕಟಣೆ ಮತ್ತು ಅದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಕಾರ್ಯ ನಿರ್ವಹಿಸುತ್ತಿದೆ.
ವಾಣಿಜ್ಯ ಚಿಹ್ನೆ ಗುರುತನ್ನು ಜೂನ್ 1, 2024 ರಂದು ವರ್ಗ 45 ರ ಅಡಿಯಲ್ಲಿ ನೋಂದಾಯಿಸಲಾಗಿದೆ. ಅಲ್ಲದೆ, ಕೇಂದ್ರ ವಿನ್ಯಾಸವು ಹಕ್ಕುಸ್ವಾಮ್ಯ ರಕ್ಷಣೆಗೆ ಅರ್ಹವಾದ ಮೂಲ ಕಲಾತ್ಮಕ ಕೃತಿಯಾಗಿ ಅರ್ಹತೆ ಪಡೆದಿದೆ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ. ಟಿವಿಕೆ ಧ್ವಜವು ತಮ್ಮ ವಾಣಿಜ್ಯ ಚಿಹ್ನೆ ಮತ್ತು ಹಕ್ಕುಸ್ವಾಮ್ಯ ಎರಡನ್ನೂ ಉಲ್ಲಂಘಿಸುತ್ತದೆ. ಎರಡೂ ಗುರುತುಗಳ ನಡುವಿನ ಹೋಲಿಕೆಯು ಸಾರ್ವಜನಿಕರಲ್ಲಿ ಗೊಂದಲವನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ದಾವೆಯಲ್ಲಿ ಆರೋಪಿಸಲಾಗಿತ್ತು.
ಟ್ರಸ್ಟ್ ಸಮಾಜದಲ್ಲಿ ಹೊಂದಿರುವ ಸದ್ಭಾವನೆ ಮತ್ತು ಖ್ಯಾತಿಯ ಮೇಲೆ ಸವಾರಿ ಮಾಡಲು ದುರುದ್ದೇಶದಿಂದ ಅದರ ಚಿಹ್ನೆಯನ್ನು ಬಳಸಲು ಟಿವಿಕೆ ಮುಂದಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.