ಸಿಖ್ಖರ ಬಗ್ಗೆ ಹೇಳಿಕೆ: ರಾಹುಲ್ ಗಾಂಧಿ ಅರ್ಜಿಯ ತೀರ್ಪು ಕಾಯ್ದಿರಿಸಿದ ಅಲಾಹಾಬಾದ್ ಹೈಕೋರ್ಟ್

ಮನವಿಯ ಮರು ವಿಚಾರಣೆ ನಡೆಸುವಂತೆ ಜುಲೈ 22 ರಂದು ಸೆಷನ್ಸ್ ನ್ಯಾಯಾಲಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸೂಚಿಸಿತ್ತು. ಇದನ್ನು ರಾಹುಲ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
Allahabad High Court, Rahul Gandhi
Allahabad High Court, Rahul Gandhi
Published on

ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ಭಾರತದ ಸಿಖ್ಖರಲ್ಲಿ ಅಭದ್ರತೆಯ ಭಾವನೆಯಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ವಾರಾಣಸಿ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಅಲಾಹಾಬಾದ್‌ ಹೈಕೋರ್ಟ್‌ ಬುಧವಾರ ಕಾಯ್ದಿರಿಸಿದೆ.

ರಾಹುಲ್ ಗಾಂಧಿಯವರ ಹೇಳಿಕೆಗಾಗಿ ಎಫ್ಐಆರ್ ದಾಖಲಿಸುವಂತೆ ಕೋರಿ ನಾಗೇಶ್ವರ ಮಿಶ್ರಾ ಎಂಬುವವರು ಸಲ್ಲಿಸಲಾದ ಅರ್ಜಿಯನ್ನು ಮರು ವಿಚಾರಣೆ ನಡೆಸುವಂತೆ ಜುಲೈ 22 ರಂದು ಸೆಷನ್ಸ್ ನ್ಯಾಯಾಲಯ  ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸೂಚಿಸಿತ್ತು. ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಅವಲಂಬಿಸಿದ್ದ ಸೆಷನ್ಸ್‌ ನ್ಯಾಯಾಲಯ ಪ್ರಕರಣವನ್ನು ಹೊಸದಾಗಿ ಆಲಿಸಿ ಆದೇಶ ನೀಡುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು.

Also Read
ಮತಗಳ್ಳತನ ಕುರಿತು ರಾಹುಲ್ ಆರೋಪ: ಎಸ್ಐಟಿ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ಈ ಆದೇಶದ ವಿರುದ್ಧ ರಾಹುಲ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಪ್ರಕರಣ ಆಲಿಸಿದ ಹೈಕೋರ್ಟ್‌ ನ್ಯಾಯಮೂರ್ತಿ ಸಮೀರ್ ಜೈನ್ ಅವರು  ತೀರ್ಪು ಕಾಯ್ದಿರಿಸಿದರು.

ವಾಷಿಂಗ್ಟನ್ ಡಿಸಿಯಲ್ಲಿ ಸೆಪ್ಟೆಂಬರ್ 10 ರಂದು ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ ಅವರು, “ ಈ ಹೋರಾಟವು ಭಾರತದಲ್ಲಿ ಸಿಖ್ಖರಿಗೆ ಪೇಟವನ್ನು ಧರಿಸಲು ಅವಕಾಶವಿದೆಯೇ, ಕಡಗವನ್ನು ಧರಿಸಲು ಅನುಮತಿ ಇದೆಯೇ, ಗುರುದ್ವಾರಕ್ಕೆ ಹೋಗಲು ಸಾಧ್ಯವಿದೆಯೇ ಎಂಬುದರ ಕುರಿತಾಗಿದೆ. ಇದಕ್ಕಾಗಿಯೇ ಈ ಹೋರಾಟ, ಇದು ಎಲ್ಲ ಧರ್ಮಗಳಿಗೆ ಸಂಬಂಧಿಸಿದ ಹೋರಾಟ" ಎಂದಿದ್ದರು. ಈ ಹೇಳಿಕೆಯ ವಿರುದ್ಧ ಮಿಶ್ರಾ ಅರ್ಜಿ ಸಲ್ಲಿಸಿದ್ದರು.

ರಾಹುಲ್‌ ಅವರ ಹೇಳಿಕೆ ಚೋದನಕಾರಿಯಾಗಿದೆ ಮತ್ತು ರಾಹುಲ್‌ ಗಾಂಧಿಯವರ ರಾಜಕೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಜನರನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿತ್ತು.

ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಡಿಸೆಂಬರ್ 14, 2019 ರಂದು ಆಯೋಜಿಸಲಾಗಿದ್ದ ಸಮಾವೇಶದಲ್ಲಿಯೂ ರಾಹುಲ್‌ ಗಾಂಧಿಯವರು ಇಂತಹದ್ದೇ ಅಪಪ್ರಚಾರ ಮಾಡಿದ್ದರು. ಇದರ ಪರಿಣಾಮವಾಗಿ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಬೃಹತ್ ಪ್ರತಿಭಟನೆ ನಡೆದು ಹಿಂಸಾಚಾರ ಮತ್ತು ಅರಾಜಕತೆಯೊಂದಿಗೆ ದುರಂತ ಅಂತ್ಯ ಕಂಡಿತು ಎಂದು ಮನವಿಯಲ್ಲಿ ಆರೋಪಿಸಲಾಗಿತ್ತು.

Also Read
ಸಾವರ್ಕರ್ ಮೊಕದ್ದಮೆ: ದೂರುದಾರ ಗೋಡ್ಸೆ ವಂಶಸ್ಥರಾಗಿದ್ದು ತನಗೆ ಜೀವ ಭೀತಿ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ರಾಹುಲ್

ಆರಂಭದಲ್ಲಿ ಅರ್ಜಿಯನ್ನು ತಿರಸ್ಕರಿಸಿದರೂ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 208ರ ಅಡಿಯಲ್ಲಿ, ಭಾರತದ ಹೊರಗೆ ನಡೆದ ಅಪರಾಧವನ್ನು ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಭಾರತದಲ್ಲಿ ವಿಚಾರಣೆ ನಡೆಸಲು ಅಥವಾ ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೇಳಿತ್ತು. 

ಇದರ ಪರಿಣಾಮವಾಗಿ ಸೆಷನ್ಸ್ ನ್ಯಾಯಾಲಯಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿತ್ತು. ಸೆಷನ್ಸ್‌ ನ್ಯಾಯಾಲಯವು ಪ್ರಕರಣವನ್ನು ಮರು ಆಲಿಸಲು ನಿರ್ದೇಶಿಸಿತ್ತು.  ನಂತರ ರಾಹುಲ್‌ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು. ರಾಹುಲ್‌ ಪರವಾಗಿ ಹಿರಿಯ ವಕೀಲ ಅಲೋಕ್ ರಂಜನ್ ಮಿಶ್ರಾ ವಾದ ಮಂಡಿಸಿದರು  .

Kannada Bar & Bench
kannada.barandbench.com