ನ್ಯಾಯಾಂಗದ ವಿರುದ್ಧ ಹೇಳಿಕೆ ನೀಡಿದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ್ದ ಬಾಂಬೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ [ಬಾಂಬೆ ವಕೀಲರ ಸಂಘ ಮತ್ತು ಜಗದೀಪ್ ಧನಕರ್ ಇನ್ನಿತರರ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಆದೇಶ ನೀಡಿದ್ದು "ಹೈಕೋರ್ಟ್ ದೃಷ್ಟಿಕೋನ ಸರಿಯಾಗಿದೆ ಎನ್ನುವುದು ನಮ್ಮ ಅನಿಸಿಕೆಯಾಗಿದೆ. ಯಾವುದೇ ಪ್ರಾಧಿಕಾರವು ಯಾವುದೇ ಅನುಚಿತ ಹೇಳಿಕೆ ನೀಡಿದರೂ, ಸುಪ್ರೀಂ ಕೋರ್ಟ್ ಅದನ್ನು ಎದುರಿಸುವಷ್ಟು ಸಮರ್ಥವಾಗಿದೆ ಎಂದು ಈಗಾಗಲೇ ತಿಳಿಸಲಾಗಿದೆ" ಎಂದು ಹೇಳಿದೆ.
ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಕೌಲ್ ಅವರು ಮೇಲ್ಮನವಿದಾರರ ಪರ ವಕೀಲರಿಗೆ "ಇದೇನು? ಈಗ ಇಲ್ಲಿಗೆ ಯಾಕೆ ಬಂದಿದ್ದೀರಿ? ಸುಮ್ಮನೆ ವೃತ್ತ ಪೂರ್ಣಗೊಳಿಸಲೆಂದೇ?" ಎಂದು ಪ್ರಶ್ನಿಸಿದರು.
ಆ ಮೂಲಕ ಕೊಲಿಜಿಯಂ, ನ್ಯಾಯಾಂಗ ಹಾಗೂ ಸುಪ್ರೀಂ ಕೋರ್ಟ್ ವಿರುದ್ಧ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಮಾಡಿದ್ದ ಸಾರ್ವಜನಿಕ ಟೀಕೆಗಳಿಗೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ನ್ಯಾಯಾಲಯ ವಿಲೇವಾರಿ ಮಾಡಿತು.
ವ್ಯಕ್ತಿಗಳ ಹೇಳಿಕೆಗಳಿಂದ ಸುಪ್ರೀಂ ಕೋರ್ಟ್‌ನ ವಿಶ್ವಾಸಾರ್ಹತೆಗೆ ಧಕ್ಕೆಯಾಗುವುದಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.
ಜಗದೀಪ್ ಧನಕರ್ ಹಾಗೂ ರಿಜಿಜು ಅವರು ಸಂವಿಧಾನದ ಅಡಿಯಲ್ಲಿ ಲಭ್ಯವಿರುವ ಯಾವುದೇ ಆಸರೆಯನ್ನು ಬಳಸದೆ ʼಅತ್ಯಂತ ಅಪಮಾನಕರ ಹಾಗೂ ಅವಹೇಳನಕಾರಿ ಭಾಷೆಯಲ್ಲಿʼ ನ್ಯಾಯಾಂಗದ ಮೇಲೆ ತೀವ್ರ ಆಕ್ರಮಣ ನಡೆಸಿರುವುದಾಗಿ ಬಾಂಬೆ ವಕೀಲರ ಸಂಘ ಆರೋಪಿಸಿತ್ತು.