ಉಪ ಲೋಕಾಯುಕ್ತರಾಗಿ ನಿವೃತ್ತ ನ್ಯಾ. ಕೆ ಎನ್‌ ಫಣೀಂದ್ರ ನೇಮಕ

ಮತ್ತೊಂದು ಉಪ ಲೋಕಾಯುಕ್ತ ಹುದ್ದೆಯಲ್ಲಿ ನಿವೃತ್ತ ನ್ಯಾ. ಬಿ ಎಸ್‌ ಪಾಟೀಲ್‌ ಇದ್ದಾರೆ. ಲೋಕಾಯುಕ್ತರಾಗಿದ್ದ ನ್ಯಾ. ವಿಶ್ವನಾಥ್‌ ಶೆಟ್ಟಿ 2022ರ ಜನವರಿ 28ರಂದು ನಿವೃತ್ತಿಯಾಗಿದ್ದು, ಸುಮಾರು ಎರಡು ತಿಂಗಳಿಂದ ಲೋಕಾಯುಕ್ತ ಹುದ್ದೆ ಖಾಲಿ ಇದೆ.
Upa Lokayukta K N Phaneendra

Upa Lokayukta K N Phaneendra

ಕರ್ನಾಟಕ ಲೋಕಾಯುಕ್ತದ ಎರಡನೇ ಉಪ ಲೋಕಾಯುಕ್ತ ಹುದ್ದೆಗೆ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ ಎನ್‌ ಫಣೀಂದ್ರ ನೇಮಕಗೊಂಡಿದ್ದಾರೆ. ರಾಜ್ಯ ಸರ್ಕಾರದ ಶಿಫಾರಸ್ಸಿಗೆ ಸಮ್ಮತಿಸಿದ ರಾಜ್ಯಪಾಲರು ಸೋಮವಾರ ನೇಮಕಾತಿ ಆದೇಶಕ್ಕೆ ಸಹಿ ಹಾಕಿದ್ದು, ಮಂಗಳವಾರ ಈ ಕುರಿತಾದ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಸುಮಾರು ಒಂದು ವರ್ಷದಿಂದ ಈ ಹುದ್ದೆ ಖಾಲಿ ಇತ್ತು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಪರಿಷತ್‌ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ್ಯಾ. ಕೆ ಎನ್‌ ಫಣೀಂದ್ರ ಅವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದರು.

ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಸೆಕ್ಷನ್‌ 3(1) ರ ಅಡಿ ಅಧಿಕಾರ ಬಳಿಸಿ ರಾಜ್ಯಪಾಲರು ನೇಮಕಾತಿ ಆದೇಶಕ್ಕೆ ಸಹಿ ಹಾಕಿದ್ದಾರೆ.

2020ರ ಡಿಸೆಂಬರ್‌ 16ರಂದು ನಿವೃತ್ತ ನ್ಯಾ. ಎನ್‌ ಆನಂದ್‌ ಅವರು ಉಪ ಲೋಕಾಯುಕ್ತ ಹುದ್ದೆಯಿಂದ ನಿವೃತ್ತರಾದಾಗಿನಿಂದ ಈ ಹುದ್ದೆ ಖಾಲಿ ಇತ್ತು. ಮತ್ತೊಂದು ಉಪ ಲೋಕಾಯುಕ್ತ ಹುದ್ದೆಯಲ್ಲಿ ನಿವೃತ್ತ ನ್ಯಾ. ಬಿ ಎಸ್‌ ಪಾಟೀಲ್‌ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಅವರು 2022ರ ಜನವರಿ 28ರಂದು ಅಧಿಕಾರ ಪೂರ್ಣಗೊಳಿಸಿದ್ದು, ಸುಮಾರು ಎರಡು ತಿಂಗಳಿಂದ ಲೋಕಾಯುಕ್ತ ಹುದ್ದೆ ಖಾಲಿ ಇದೆ. ಈ ಹುದ್ದೆಗೆ ಇನ್ನಷ್ಟೇ ಅರ್ಹರನ್ನು ಸರ್ಕಾರ ನೇಮಕ ಮಾಡಬೇಕಿದೆ.

Also Read
ಅಕ್ರಮ ಆಸ್ತಿ ಪ್ರಕರಣಗಳ ತನಿಖೆಗೆ ಅನುಮತಿ ನಿರಾಕರಿಸಿದ ಸಕ್ಷಮ ಪ್ರಾಧಿಕಾರ: ಲೋಕಾಯುಕ್ತ ನ್ಯಾ. ವಿಶ್ವನಾಥ್‌ ಶೆಟ್ಟಿ

ನ್ಯಾ. ಫಣೀಂದ್ರ ಪರಿಚಯ

1958ರ ಮೇ 20ರಂದು ಜನಿಸಿರುವ ನ್ಯಾ. ಫಣೀಂದ್ರ ಅವರು 1985ರ ಆಗಸ್ಟ್‌ 7ರಂದು ವಕೀಲಿಕೆ ಆರಂಭಿಸಿದರು. ತುಮಕೂರು ಜಿಲ್ಲೆಯಲ್ಲಿ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣಗಳಲ್ಲಿ ವಕಾಲತ್ತು ನಡೆಸುತ್ತಿದ್ದ ನ್ಯಾ. ಫಣೀಂದ್ರ ಅವರು 1998ರ ಜೂನ್‌ 17ರಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾಗಿ ನೇರವಾಗಿ ನೇಮಕವಾಗಿದ್ದರು. ಬೆಂಗಳೂರು, ಶಿವಮೊಗ್ಗಗಳಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾಗಿ, ಉಡುಪಿ, ಹಾವೇರಿ ಮತ್ತು ಬೆಳಗಾವಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾಗಿದ್ದ ಅವರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೆ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕ, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

2013ರ ಆಗಸ್ಟ್‌ 24ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಫಣೀಂದ್ರ ಅವರನ್ನು 2016 ಮಾರ್ಚ್‌ 4ರಂದು ಖಾಯಂಗೊಳಿಸಲಾಗಿತ್ತು. 2020ರ ಮೇನಲ್ಲಿ ಅವರು ಸೇವೆಯಿಂದ ನಿವೃತ್ತಿ ಹೊಂದಿದ್ದರು.

Related Stories

No stories found.
Kannada Bar & Bench
kannada.barandbench.com