ಅಡೆತಡೆಯಿಲ್ಲದ ಪಾದಚಾರಿ ಮಾರ್ಗ ಬಳಸುವುದು ಜೀವಿಸುವ ಹಕ್ಕಿನ ಭಾಗ: ಸುಪ್ರೀಂ ಕೋರ್ಟ್

ಪಾದಚಾರಿಗಳ ಸುರಕ್ಷತೆಗಾಗಿ, ಅದರಲ್ಲಿಯೂ ವಿಕಲಚೇತನರಿಗಾಗಿ ಮಾರ್ಗಸೂಚಿಗಳನ್ನು ರೂಪಿಸುವಂತೆ ನ್ಯಾಯಾಲಯಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತು.
Footpath
FootpathImage for representative purpose
Published on

ಯಾವುದೇ ಅಡೆತಡೆಯಿಲ್ಲದ ಪಾದಚಾರಿ ಮಾರ್ಗಗಳನ್ನು ಬಳಸುವುದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಜೀವಿಸುವ ಮೂಲಭೂತ ಹಕ್ಕಿನ ಅತ್ಯಗತ್ಯ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ತಿಳಿಸಿದೆ [ಎಸ್. ರಾಜಶೇಖರನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಅಂತೆಯೇ ಪಾದಚಾರಿಗಳ ಅದರಲ್ಲಿಯೂ ವಿಕಲಚೇತನರ ಸುರಕ್ಷತೆಗಾಗಿ ಎರಡು ತಿಂಗಳೊಳಗೆ ಮಾರ್ಗಸೂಚಿ ರೂಪಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ನಿರ್ದೇಶನ ನೀಡಿತು.

Also Read
ಪಾದಚಾರಿ ಮಾರ್ಗದಲ್ಲಿದ್ದ 1,911 ಟ್ರಾನ್ಸ್‌ಫಾರ್ಮರ್‌ ಸುರಕ್ಷಿತ ಜಾಗಕ್ಕೆ ಸ್ಥಳಾಂತರ: ಹೈಕೋರ್ಟ್‌ಗೆ ಬೆಸ್ಕಾಂ ಮಾಹಿತಿ

ರಸ್ತೆ ಅಪಘಾತ ಪ್ರಕರಣಗಳಲ್ಲಿ ಸಾವನ್ನಪ್ಪಿದವರಲ್ಲಿ ಶೇ 19.5ರಷ್ಟು ಮಂದಿ ಪಾದಚಾರಿಗಳೇ ಆಗಿದ್ದು ಪಾದಚಾರಿ ಮಾರ್ಗಗಳಿಗೆ ಸುರಕ್ಷತೆ ಒದಗಿಸುವ ತುರ್ತು ಅಗತ್ಯವಿದೆ ಎಂದು ಕೋರಿ ವಕೀಲ ಕಿಶನ್ ಚಂದ್ ಜೈನ್ ಅವರು ಸಲ್ಲಿಸಿದ್ದ ಮಧ್ಯಪ್ರವೇಶ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ವಿಚಾರಣೆಯ ಸಮಯದಲ್ಲಿ, ಅಮಿಕಸ್ ಕ್ಯೂರಿ ಗೌರವ್ ಅಗರ್‌ವಾಲ್‌ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), ರಾಜ್ಯ ಸರ್ಕಾರಗಳು ಮತ್ತು ಪುರಸಭೆ ಅಧಿಕಾರಿಗಳಂತಹ ರಸ್ತೆ ಮಾಲೀಕತ್ವದ ಸಂಸ್ಥೆಗಳು ಪಾದಚಾರಿ ಸ್ನೇಹಿ ಮೂಲಸೌಕರ್ಯವನ್ನು ಒದಗಿಸುವ ಜವಾಬ್ದಾರಿ ಹೊಂದಿವೆ. ಭಾರತೀಯ ರಸ್ತೆ ಕಾಂಗ್ರೆಸ್ (ಐಆರ್‌ಸಿ) ವಿಕಲಚೇತನರು ಸೇರಿದಂತೆ ಪಾದಚಾರಿಗಳಿಗೆ ಸೂಕ್ತವಾದ ರಸ್ತೆ ಮೂಲಸೌಕರ್ಯ ವಿವರಿಸುವ ರೇಖಾಚಿತ್ರ ಪ್ರಾತಿನಿಧ್ಯಗಳನ್ನು ಒಳಗೊಂಡ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಅವರು ಒತ್ತಿ ಹೇಳಿದರು. ಕೇಂದ್ರ ನಗರ ವ್ಯವಹಾರಗಳ ಸಚಿವಾಲಯ ಪಾದಚಾರಿ ಮೂಲಸೌಕರ್ಯಕ್ಕಾಗಿ ಸಾಮರಸ್ಯದ ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ ಎಂದು ಅವರು ಹೇಳಿದರು.

Also Read
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ: ಪರಿಷ್ಕೃತ ಯೋಜನೆ ರೂಪಿಸಲಿರುವ ಹಿನ್ನೆಲೆಯಲ್ಲಿ ಪಿಐಎಲ್‌ ಇತ್ಯರ್ಥಪಡಿಸಿದ ಹೈಕೋರ್ಟ್‌

ಸುರಕ್ಷಿತ ಪಾದಚಾರಿ ಮಾರ್ಗಗಳ ಅಗತ್ಯವನ್ನು ಗಮನಿಸಿದ ನ್ಯಾಯಾಲಯ, ವಿಕಲಚೇತನರು ಸೇರಿದಂತೆ ಎಲ್ಲಾ ಬಳಕೆದಾರರಿಗೆ ಅನುಕೂಲವಾಗುವ ಪಾದಚಾರಿ ಮಾರ್ಗಗಳನ್ನು ವಿನ್ಯಾಸಗೊಳಿಸಬೇಕು ಮತ್ತು ಅಂತಹ ಮಾರ್ಗಗಳು ಅತಿಕ್ರಮಣಗಳಿಂದ ಮುಕ್ತವಾಗಿರಬೇಕು ಎಂದಿತು.

ಅಡೆತಡೆಯಿಲ್ಲದ ಪಾದಚಾರಿ ಮಾರ್ಗ ಸಂವಿಧಾನದ  21ನೇ ವಿಧಿಯಡಿ ಮೂಲಭೂತ ಹಕ್ಕು ಎಂದು ಸಾರಿ ಓಲ್ಗಾ ಟೆಲ್ಲಿಸ್ ಮತ್ತು ಬಾಂಬೆ ಮಹಾನಗರ ಪಾಲಿಕೆ ಪ್ರಕರಣದಲ್ಲಿ ನೀಡಲಾದ ಚಾರಿತ್ರಿಕ ತೀರ್ಪನ್ನು ಅದು ಉಲ್ಲೇಖಿಸಿತು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 1ರಂದು ನಡೆಯಲಿದೆ.

Kannada Bar & Bench
kannada.barandbench.com