
ಸನ್‌ರೈಸರ್ಸ್ ಹೈದರಾಬಾದ್ ಆಟಗಾರ ಟ್ರಾವಿಸ್ ಹೆಡ್ ಅವರು ನಟಿಸಿರುವ ಉಬರ್ ಬೈಕ್ ಟ್ಯಾಕ್ಸಿ ಸೇವೆಗೆ ಪ್ರಚಾರ ನೀಡುವ ಜಾಹೀರಾತೊಂದನ್ನು ಪ್ರಶ್ನಿಸಿ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ದೆಹಲಿ ಹೈಕೋರ್ಟ್ ಕದ ತಟ್ಟಿದೆ.
ಜಾಹೀರಾತು ಅವಹೇಳಕಾರಿಯಾಗಿದೆ ಎಂದು ಆರ್‌ಸಿಬಿ ನೀಡಿದ್ದ ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ , ಆರ್‌ಸಿಬಿ ಪರವಾಗಿ ಪ್ರಾಥಮಿಕವಾಗಿ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದರು.
"ಮೇಲ್ನೋಟಕ್ಕೆ ಕೆಲ ಬದಲಾವಣೆಗಳ ಅಗತ್ಯ ಇರುವಂತಿದೆ" ಎಂದು ಏಕ ಸದಸ್ಯ ಪೀಠ ವಿಚಾರಣೆ ವೇಳೆ ತಿಳಿಸಿತು. ಪ್ರಕರಣ ಅಂತಿಮವಾಗಿ ಇತ್ಯರ್ಥವಾಗುವವರೆಗೆ ಜಾಹೀರಾತು ಹಿಂತೆಗೆದುಕೊಳ್ಳುವಂತೆ ಆರ್‌ಸಿಬಿ ಮಾಡಿದ ಮಧ್ಯಂತರ ಮನವಿಯ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿತು.
ಬೈಕ್ ಟ್ಯಾಕ್ಸಿ ಸೇವೆ ಕುರಿತಂತೆ ಉಬರ್ ನಡೆಸುತ್ತಿರುವ 'ಹೈದರಾಬಾದೀ' ಜಾಹೀರಾತು ವಿವಾದದ ಕೇಂದ್ರಬಿಂದು. ಸನ್ ರೈಸರ್ಸ್ ಹೈದರಾಬಾದ್ ಆಟಗಾರ ಟ್ರಾವಿಸ್ ಹೆಡ್ ಕ್ರೀಡಾಂಗಣವೊಂದರ ಬೆಂಗಳೂರು ಎಂಬ ಫಲಕದ ಮೇಲೆ 'ರಾಯಲಿ ಚಾಲೇಂಜ್ಡ್ ಬೆಂಗಳೂರು' ಎಂದು ಸ್ಪ್ರೇ ಬಣ್ಣದಿಂದ ಚಿತ್ರಿಸುವುದು ಚರ್ಚೆಗೆ ಗ್ರಾಸ ಒದಗಿಸಿದೆ
ಜಾಹೀರಾತಿನಲ್ಲಿ ಅಪರಾತ್ರಿ ವೇಳೆ ಟ್ರಾವಿಸ್ ಕದ್ದು ಆರ್‌ಸಿಬಿಯ ತವರು ಕ್ರೀಡಾಂಗಣದೊಳಗೆ ಕಾಲಿಟ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹೈದರಾಬಾದ್ ತಂಡದ ನಡುವಿನ ಪಂದ್ಯವನ್ನು ಸಾರುವ ಫಲಕದಲ್ಲಿ ಆರ್‌ಸಿಬಿಯನ್ನು ಅವಹೇಳನ ಮಾಡುವ ರೀತಿಯಲ್ಲಿ ಬೆಂಗಳೂರಿನ ಹೆಸರನ್ನು ಸ್ಪ್ರೇ ಬಣ್ಣ ಬಳಸಿ ರಾಯಲಿ ಚಾಲೇಂಜ್ಡ್ ಬೆಂಗಳೂರು ಎಂದು ತಿದ್ದುತ್ತಾರೆ. ಆ ಹೊತ್ತಿಗೆ ಭದ್ರತಾ ಸಿಬ್ಬಂದಿ ಬೆನ್ನಟ್ಟಿದಾಗ ಕೆಲವೇ ನಿಮಿಷಗಳಲ್ಲಿ ಉಬರ್ ಬೈಕ್ ಟ್ಯಾಕ್ಸಿ ಸೇವೆ ಪಡೆದು ಟ್ರಾವಿಸ್ ಅಲ್ಲಿಂದ ಪರಾರಿಯಾಗುತ್ತಾರೆ. ಉಬರ್ ಬೈಕ್ ಟ್ಯಾಕ್ಸಿ ಸೇವೆಯ ಕ್ಷಿಪ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಜಾಹೀರಾತು ಹೇಳಲು ಯತ್ನಿಸುತ್ತದೆ.
ಆರ್‌ಸಿಬಿ ಪರ ಹಾಜರಾದ ವಕೀಲೆ ಶ್ವೇತಶ್ರೀ ಮಜುಂದಾರ್, ಜಾಹೀರಾತು ಎಲ್ಲೆ ಮೀರಿ ವಾಣಿಜ್ಯಕ ಅವಹೇಳನದಲ್ಲಿ ತೊಡಗುತ್ತದೆ ಎಂದು ದೂರಿದರು. ಆರ್‌ಸಿಬಿಯ ವಾಣಿಜ್ಯ ಚಿಹ್ನೆಯ ಅವಹೇಳನಕಾರಿ ರೂಪವನ್ನು ಉಬರ್ ಬಳಸಿದೆ. ಅದು ಆರ್‌ಸಿಬಿಯನ್ನು ಟೀಕಿಸುತ್ತಿರುವುದು ಅಭಿಮಾನಿಗಳ ಗುಂಪಿನಲ್ಲಿರುವ ಎಲ್ಲರಿಗೂ ತಿಳಿದಿದೆ. ಟ್ರಾವಿಸ್ ಹೆಡ್ ಆರ್‌ಸಿಬಿಯನ್ನು ನಗೆಪಾಟಲಿನ ವಸ್ತುವನ್ನಾಗಿ ಮಾಡಿದ್ದಾರೆ. ಜಾಹೀರಾತು ಆರ್‌ಸಿಬಿಯನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ ಮತ್ತು ತನ್ನ ವಾಣಿಜ್ಯ ಚಿಹ್ನೆಯಲ್ಲಿರು ʼಈ ಸಲ ಕಪ್ ನಮ್ದೇʼ ಪದಗಳನ್ನೂ ಜಾಹೀರಾತಿನಲ್ಲಿ ಬಳಸಲಾಗಿದೆ ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಉಬರ್ ಪರ ವಕೀಲ ಸಾಯಿಕೃಷ್ಣ ರಾಜಗೋಪಾಲ್, ಜಾಹೀರಾತಿನ ಹಾಸ್ಯ ಮತ್ತು ಪ್ರಚಾರಾಂದೋಲನದ ಸಂದರ್ಭವನ್ನು ಆರ್‌ಸಿಬಿಯ ದಾವೆ ಕಡೆಗಣಿಸಿದೆ ಎಂದರು.
ಬೆಂಗಳೂರಿನಲ್ಲಿರುವ ಭಾರೀ ಟ್ರಾಫಿಕ್ ಅನ್ನು ತಪ್ಪಿಸಲು ಅಭಿಮಾನಿಗಳು ಪಂದ್ಯದ ದಿನದಂದು ಉಬರ್ ಮೋಟೋವನ್ನು ಬಳಸಬಹುದು ಎಂಬುದು ಈ ಜಾಹೀರಾತಿನ ಅರ್ಥ. ಉಬರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಯಾವುದೇ ವಿಶೇಷ ಸಂಬಂಧ ಇಲ್ಲ. ಉಬರ್ ಸನ್ ರೈಸರ್ಸ್ ತಂಡದ ಪರ ಪ್ರಚಾರ ಮಾಡುತ್ತಿಲ್ಲ. ಇದು ಅವಹೇಳನಕಾರಿಯೇ? ಇದು ಕೀಟಲೆ ಅಥವಾ ಕುಮ್ಮಕ್ಕು ನೀಡುವಂಥದ್ದಿರಬಹುದು. ಜಾಹೀರಾತನ್ನು ಸುಮಾರು 10 ದಿನಗಳ ಹಿಂದೆ ಪ್ರಕಟಿಸಲಾಗಿದ್ದು, ಈಗ ಅದನ್ನು ತೆಗೆದುಹಾಕುವುದು ವಿವೇಕಯುತವಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ “ಈ ನ್ಯಾಯಾಲಯದ ಹೊರಗಿರುವವರು ನೀವು ಯೋಚಿಸುವ ರೀತಿಯಲ್ಲಿ ಯೋಚಿಸುವುದಿಲ್ಲ. ಟ್ರಾವಿಸ್ ಅವರು ಹೈದರಾಬಾದ್‌ನ ತಾರಾ ಆಟಗಾರ, ಉಬರ್ ಆ ತಂಡದ ಜಾಹೀರಾತು ಪಾಲುದಾರನಾಗಿದೆ” ಎಂದಿತು.
ಸುಮಾರು ಎರಡು ಗಂಟೆಗಳ ಕಾಲ ಕಕ್ಷಿದಾರರ ವಾದ ಆಲಿಸಿದ ನಂತರ, ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ಅರ್ಜಿಯ ತೀರ್ಪನ್ನು ಕಾಯ್ದಿರಿಸಿತು.